ಸಾರಾಂಶ
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮದು ರಾಷ್ಟ್ರೀಯ ಪಕ್ಷ, ಬಿ.ವೈ.ವಿಜಯೇಂದ್ರ ಅವರನ್ನು ಅಯ್ಕೆ ಮಾಡಿದ್ದು, ಕೇಂದ್ರ ನಾಯಕರು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪಾರದರ್ಶಕವಾಗಿ ಅಧಿಕಾರ ನಡೆಸುತ್ತಿದ್ದಾರೆ.
ಮುಡಾ, ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಹಲವಾರು ಹೋರಾಟಗಳನ್ನು ಯಶಸ್ವಿಯಾಗಿ ರೂಪಿಸಿಕೊಂಡು ಬರುತ್ತಿದ್ದಾರೆ. ವಿಜಯೆಂದ್ರ ಒಬ್ಬ ಮಾಸ್ ಲೀಡರ್ ಎಂದರು. ವಿಜಯೇಂದ್ರ ಕಿರಿಯ ವಯಸ್ಸಿನಲ್ಲಿ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಇದರಲ್ಲಿ ಯಾವುದೇ ಅನುಮಾನವಿಲ್ಲ. 2025ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಅವರ ಕನಸಿಗೆ ನಾವೆಲ್ಲ ಒಗ್ಗಟ್ಟಾಗಿ ನಿಲ್ಲುತ್ತೇವೆ. ಅವರನ್ನೇ ಮುಂದುವರಿಸಬೇಕು ಎಂಬುದು ನಮ್ಮ ಅಭಿಪ್ರಾಯ ಎಂದರು.ರಾಜ್ಯಕ್ಕೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಆಗಮಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಪದೇ ಪದೇ ರಾಜ್ಯಕ್ಕೆ ಬಂದು ಸರಣಿ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕರೇ ತಮ್ಮದೇ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಸರಣಿ ಸಭೆಗಳು ನಡೆಸಿದರೂ ಕುರ್ಚಿ ಕದನ ನಿಲ್ಲಲಿಲ್ಲ. ಸುರ್ಜೇವಾಲಾ ಎಷ್ಟೇ ತೇಪೆ ಹಚ್ಚಿದರೂ ಶಾಸಕರ ಮನ ಒಲಿಸಲು ಸಾಧ್ಯವಾಗಲಿಲ್ಲ. ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿಯನ್ನು ಸುರ್ಜೆವಾಲಾ ಮತ್ತಷ್ಟು ಸ್ಫೋಟಗೊಳಿಸಿದ್ದಾರೆ ಎಂದರು.
ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಈ ಕಾಂಗ್ರೆಸ್ ಸರ್ಕಾರ ಪತನವಾಗೋದು ಅಷ್ಟೇ ಸತ್ಯ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ೫ ವರ್ಷ ಸರ್ಕಾರ ನಡೆಯಬೇಕು. ಆದರೆ ಈ ಸರ್ಕಾರ ಒಪ್ಪಂದದ ಮೇಲೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇವರಿಬ್ಬರಲ್ಲಿ ಮುಖ್ಯಮಂತ್ರಿ ಗಾದಿಗೆ ಫೈಟ್ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಲವಾರು ಗೊಂದಲಗಳಿವೆ ಎಂದು ಆರೋಪಿಸಿದರು.