ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ಆಸ್ತಿಗೆ ಆಗಿರುವ ಒತ್ತುವರಿಯನ್ನು ತೆರವುಗೊಳಿಸಬೇಕು. ಜೊತೆಗೆ ಇಂದೀಕರಣ ಪೂರ್ಣಗೊಳಿಸಬೇಕೆಂದು ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದಲೂ ಪ್ರತಿ ವರ್ಷ ಇಂದೀಕರಣ ಆಗುತ್ತಾ ಬಂದಿದೆ. ಕೆಲವು ಕಡೆ ನೋಟಿಸ್ ನೀಡದೆ ಇಂದೀಕರಣ ಆಗಿರುವ ಪ್ರಕರಣಗಳು ಸಹ ಇವೆ. ಈಗ ಬಹಳಷ್ಟು ಪ್ರಕರಣಗಳು ಕಂದಾಯ ಇಲಾಖೆಗೆ ಬಂದು ಭೂ ನ್ಯಾಯ ಮಂಡಳಿಯಿಂದ ನಮಗೆ ವಕ್ಫ್ ಆಸ್ತಿ ಬಂದಿದೆ ಎಂದು ಮೇಲ್ಮನವಿ ಬರುತ್ತವೆ. ಅದಕ್ಕೆ ಭೂ ನ್ಯಾಯ ಮಂಡಳಿಯಿಂದ ಬಂದಿರುವ ದಾಖಲೆಗಳಿವೆ.
ಇನ್ನು ಕೆಲವು ಮೊದಲಿನಿಂದಲೂ ರೈತರ ಸ್ವಾಧೀನದಲ್ಲೇ ಇರುವ ಕುರಿತು ಕಂಡುಬರುತ್ತವೆ. ಈಗ ಸತ್ಯಾಂಶವನ್ನು ತಿಳಿಯಲು 124 ಆಸ್ತಿಗಳಿಗೆ ಸಂಬಂಧಿಸಿದಂತೆ 433 ರೈತರು, ಕೆಲವು ವ್ಯಕ್ತಿಗಳಿಗೆ ತಿಳುವಳಿಕೆ ನೋಟಿಸ್ ನೀಡಲಾಗಿದೆ. ಗೆಜೆಟ್‌ನಲ್ಲಿ ವಕ್ಫ್ ಆಸ್ತಿ ಎಂದು ಆಗಿರುವ ಕುರಿತು ದಾಖಲೆ ನೀಡಬೇಕು ಎಂದು ವಕ್ಫ್ ಅಧಿಕಾರಿಗಳಿಗೂ ಹಾಗೂ ತಮ್ಮ ಜಮೀನು ಎಂಬುದಕ್ಕೆ ದಾಖಲೆ ಒದಗಿಸಬೇಕು ಎಂದು ರೈತರಿಗೂ ನೋಟಿಸ್ ಕೊಡಲಾಗಿದೆ ಎಂದು ಹೇಳಿದರು.ಇದರಲ್ಲಿ 44 ಆಸ್ತಿಗಳಲ್ಲಿ ಕಾಲಂ 11ರಲ್ಲಿ ನೋಂದಣಿಯಾಗಿದ್ದು, ಅವುಗಳು ತಕ್ಷಣವೇ ಹಕ್ಕು ಬದಲಾವಣೆ ಆಗುವುದಿಲ್ಲ. ಆದಾಗಿಯೂ ನೋಟಿಸ್ ಕೊಡದೆ 41 ಪಹಣಿಯಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಇಂದೀಕರಣ ಮಾಡಲಾಗಿತ್ತು. ತಕ್ಷಣವೇ ನಾವು ರೈತರಿಂದ ಮೇಲ್ಮನವಿ ಪಡೆದು ಕಾಲಂ 11ರಲ್ಲಿ ಇಂದೀಕರಣ ಆಗಿರುವುದನ್ನು ತೆಗೆದು ಹಾಕಿದ್ದೇವೆ. ಅವರ ಪಹಣಿಯಲ್ಲಿ ಕಾಲಂ 11ರಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ಇಲ್ಲ ಎಂದು ತಿಳಿಸಿದರು.
ಜಮೀನು ಪರಿಶೀಲನೆಗೆ ಟಾಸ್ಕ್‌ಫೋರ್ಸ್ ಸಮಿತಿ:ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ನಮ್ಮ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡಲಾಗಿದೆ. ಭೂ ಸುಧಾರಣೆ ಕಾಯ್ದೆ, ವಕ್ಫ್ ಇನಾಂ ಅಡಿಯಲ್ಲಿ ರೈತರಿಗೆ ಹೋಗಿರುವ ಜಮೀನುಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅವುಗಳ ಪ್ರತ್ಯೇಕ ಪಟ್ಟಿಮಾಡಿ ಸಚಿವರಿಗೆ ನೀಡಲಾಗುವುದು. ಬಳಿಕ ಅದು ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಲಿದೆ ಎಂದರು.