ಗಣಪತಿ ಪೂಜೆ, ಪುಣ್ಯಾಹ, ಕಳಶ ಸ್ಥಾಪನೆ, ನವಗ್ರಹ ಸಹಿತ ದುರ್ಗಾ ಹೋಮ, ಪೂರ್ಣಾಹುತಿಯನ್ನು ಅರ್ಚಕ ಹರೀಶ್ ನೆರವೇರಿಸಿದರು. ನಂತರ ಪೂಜಾ ಕೈಂಕರ್ಯಗಳನ್ನು ಇಲ್ಲಿನ ದೇವಸ್ಥಾನದ ಅರ್ಚಕರಾದ ವಿನಯ್ ಶಾಸ್ತ್ರಿ ಹಾಗೂ ಮಹದೇವಪ್ಪರವರು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸರಗೂರು

ಪಟ್ಟಣದ ಐದನೇ ವಾರ್ಡ್ ನ ಜೆ.ಪಿ ಬಡಾವಣೆಯ ಶ್ರೀ ಇಂದ್ರಾಣಿ ಅಮ್ಮನವರ 26 ನೇ ವರ್ಷದ ಪೂಜಾ ಮಹೋತ್ಸವ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ವಿಜೃಂಭಣೆಯಿಂದ ನೆರವೇರಿತು.

ಇಲ್ಲಿನ ಶ್ರೀ ಇಂದ್ರಾಣಿ ಅಮ್ಮನವರ ದೇವಾಲಯವು ಹಿಂದಿನ ದಿನದಿಂದಲೇ ದೇವಾಲಯವನ್ನು ತಳಿರು-ತೋರಣ, ಬಣ್ಣ ಬಣ್ಣದ ರಂಗೋಲಿ ಹಾಗೂ ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಬಗೆ ಬಗೆಯ ಹೂವುಗಳಿಂದ ಹಾಗೂ ದೇವಸ್ಥಾನ ಸೇರಿದಂತೆ ಸುತ್ತ ಮುತ್ತಲು ವಿದ್ಯುತ್ ದೀಪಗಳಿಂದ ಕಂಗೊಳಿಸುತಿತ್ತು.

ಬೆಳಗ್ಗೆಯಿಂದಲೇ ಗಣಪತಿ ಪೂಜೆ, ಪುಣ್ಯಾಹ, ಕಳಶ ಸ್ಥಾಪನೆ, ನವಗ್ರಹ ಸಹಿತ ದುರ್ಗಾ ಹೋಮ, ಪೂರ್ಣಾಹುತಿಯನ್ನು ಅರ್ಚಕ ಹರೀಶ್ ನೆರವೇರಿಸಿದರು. ನಂತರ ಪೂಜಾ ಕೈಂಕರ್ಯಗಳನ್ನು ಇಲ್ಲಿನ ದೇವಸ್ಥಾನದ ಅರ್ಚಕರಾದ ವಿನಯ್ ಶಾಸ್ತ್ರಿ ಹಾಗೂ ಮಹದೇವಪ್ಪರವರು ನೆರವೇರಿಸಿದರು.

ಕಪಿಲಾ ನದಿಗೆ ಶ್ರೀ ಇಂದ್ರಾಣಮ್ಮನವರ ಸತ್ತಿಗೆಯನ್ನು ಕೊಂಡೊಯ್ದು ಗಂಗೆ ಪೂಜೆ ಸಲ್ಲಿಸಿ ನಂತರ ಶ್ರೀ ಇಂದ್ರಾಣಮ್ಮನವರ ಸತ್ತಿಗೆ ಸಮೇತ ಹೆಗ್ಗುಡಿಲು ನೀಲಕಂಠ ಮತ್ತು ಮಕ್ಕಳಿಂದ ವೀರಗಾಸೆ ಕುಣಿತ, ಮಂಗಳವಾದ್ಯ, ಪೂರ್ಣಕುಂಭ ಕಳಸದೊಂದಿಗೆ ಅರ್ಚಕ ಮಹದೇವಪ್ಪರವರು ದೇವಿಯ ಕಲಶ ಹೊತ್ತು, ಹೆಗ್ಗುಡಿಲಿನ ನೀಲಕಂಠ ರವರಿಂದ ಅಕ್ಕಿ ತುಂಬಿದ ಕಲಶಕ್ಕೆ ತೆಂಗಿನಕಾಯಿ ಇಟ್ಟು ಆ ಕಳಶದ ಒಳಗೆ ಕತ್ತಿ ಹಾಕಿ ಕತ್ತಿಗೆ ಕಟ್ಟಿದ್ದ ಶಲ್ಯವನ್ನು ಬಾಯಲ್ಲಿ ಹಿಡಿದು ಪ್ರದರ್ಶಿಸಿದು ತುಂಬಾ ಕುತೂಹಲವಾಗಿತ್ತು.ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮಹಿಳೆಯರು ಸೇರಿದಂತೆ ಮೆರವಣಿಗೆಯಲ್ಲಿ ಸಾಗುತ್ತಾ ದೇವಸ್ಥಾನಕ್ಕೆ ಆಗಮಿಸಿದರು.

ಮಹಾಮಂಗಳಾರತಿ ನಡೆದು ಸಾವಿರಾರು ಭಕ್ತರಿಗೆ ಅನ್ನದಾನ ವಿತರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಾದಿಗಳು ತಮ್ಮ ಇಸ್ಟಾರ್ಥಗಳನ್ನು ಬೇಡಿಕೊಂಡರು.

ಸಂಜೆ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿ ಇವರ ವತಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಈ ಪೂಜಾ ಮಹೋತ್ಸವವು ಐದು ದಿನಗಳ ಕಾಲ ಸಂಜೆ ಏಳು ಗಂಟೆಗೆ ಮಹಾಮಂಗಳಾರತಿ ಇರುತ್ತದೆ.

ಶ್ರೀ ಇಂದ್ರಾಣಿ ಅಮ್ಮನವರ ಪೂಜಾ ಮಹೋತ್ಸವದಲ್ಲಿ ಶ್ರೀ ಇಂದ್ರಾಣಿ ಅಮ್ಮನವರ ಪೂಜಾ ಸೇವಾ ಸಮಿತಿ ಹಾಗೂ ಸತ್ತಿಗೆ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಇಲ್ಲಿನ ವಾರ್ಡ್ ನ ಸದಸ್ಯರಾದ ನೂರಾಳ ಸ್ವಾಮಿ, ಗೋಬಿ ರಂಗಸ್ವಾಮಿ, ತಮ್ಮಯ್ಯ., ನರಸಿಂಹೇಗೌಡ, ಅಲಂಕಾರ ಸಮಿತಿ ಅಧ್ಯಕ್ಷ ರವಿಗೌಡ, ಸತ್ತಿಗೆ ರವಿ, ಅನಿಲ್, ಸುನಿಲ್, ಶಶಿ ತಾಲೂಕಿನ ಈಡಿಗ ಜನಾಂಗದ ಮುಖಂಡರು ಇದ್ದರು.