ವಿಕಸಿತ ಭಾರತ ಸಂಕಲ್ಪ ಯಾತ್ರೆ ಜನಮನ್ನಣೆ

| Published : Dec 19 2023, 01:45 AM IST

ಸಾರಾಂಶ

ನಗರದ ಅಕ್ಷಯ ಕಾಲನಿಯಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ರಾಜ್ಯದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಜನಮನ್ನಣೆ ದೊರೆತಿದೆ ಎಂದು ತಿಳಿಸಿದರು.

- ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ವಿಯಾಗಿ ನಡೆಯುವ ಮೂಲಕ ಜನಮನ್ನಣೆ ಗಳಿಸಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ಅಕ್ಷಯ ಕಾಲನಿಯಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ನರೇದ್ರ ಮೋದಿ ಪ್ರಧಾನಿಯಾದ ಬಳಿಕ ದೇಶವನ್ನು ಜಗತ್ತನಲ್ಲೇ ಗುರುತಿಸುವಂತಾಗಿದೆ. ವಿಶ್ವಗುರುವಾಗುವತ್ತ ಹೆಜ್ಜೆ ಇಡುತ್ತಿದೆ. ಜನಧನ್‌ ಖಾತೆ ಬಗ್ಗೆ ಪ್ರಾರಂಭದಲ್ಲಿ ವಿಪಕ್ಷಗಳು ಟೀಕಿಸಿದ್ದವು. ಆದರೆ, ಕೊರೋನಾ ಕಾಲದಲ್ಲಿ ಎಲ್ಲ ಬಿಪಿಎಲ್‌ ಕಾರ್ಡ್‌ದಾರರಿಗೆ ಈ ಖಾತೆ ಮೂಲಕವೇ ಹಣ ವರ್ಗಾಯಿಸಲು ಅನುಕೂಲವಾಯಿತು. ಮೋದಿ ಗ್ಯಾರಂಟಿ ಗಾಡಿ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು ಎಂದು ವಿಕಸಿತ ಭಾರತ ಸಂಕಲ್ಪ ಯಾತ್ರೆ ಬಗ್ಗೆ ತಿಳಿಸಿದರು.

ಪಾಲಿಕೆ ಮೇಯರ್‌ ವೀಣಾ ಬರದ್ವಾಡ ಮಾತನಾಡಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ಯಾರಿಗೆ ಇದರ ಲಾಭ ದೊರೆತಿಲ್ಲ ಅವರು ಇಲ್ಲಿಯೇ ತಿಳಿದು ಅರ್ಜಿ ಕೂಡ ಇಲ್ಲಿಯೇ ಸಲ್ಲಿಸಬಹುದಾಗಿದೆ. ಮೋದಿ ಅವರ ಕನಸು ಎಲ್ಲ ಬಡವರ್ಗದವರು ಕೂಡ ಮೇಲೆ ಬರಬೇಕು ಎನ್ನುವುದಿದೆ ಎಂದರು.

ಕೆನರಾ ಬ್ಯಾಂಕಿನ ಮಹಾಪ್ರಬಂಧಕ ಎಂ. ವಿಜಯಕುಮಾರ, ಶಾಖಾ ಪ್ರಬಂಧಕ ಜಾವೆದ ಗುಳೇದಗುಡ್ಡ, ವಲಯ ಪ್ರಬಂಧಕ ಜಿತೇಂದ್ರ ಭಾಲೇರವ ಮತ್ತು ವಿವಿಧ ಬ್ಯಾಂಕಿನ ಅಧಿಕಾರಿಗಳು ಸಿಬ್ಬಂದಿ ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರು, ಸ್ಥಳೀಯ ಮುಖಂಡರು, ಸಾರ್ವಜನಿಕರು ಮುಂತಾದವರು ಉಪಸ್ಥಿತರಿದ್ದರು.