ಸಾರಾಂಶ
ಹೆಬ್ರಿ : ಸೋಮವಾರ ಮಧ್ಯರಾತ್ರಿ ಇಲ್ಲಿನ ಪೀತಬೈಲು ಎಂಬಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಮ್ ಗೌಡ ಯಾನೆ ಶ್ರೀಕಾಂತ್‌ಗೆ ಪೊಲೀಸರು ಶರಣಾಗುವ ಆಯ್ಕೆಯನ್ನು ನೀಡಿದ್ದರು. ಆದರೆ ಆತ ಶರಣಾಗುವುದಕ್ಕೆ ಒಪ್ಪದೇ, ಪೊಲೀಸರ ಮೇಲೆ ಗುಂಡು ಹಾರಿಸಿದ, ಆಗ ಪೊಲೀಸರು ಪ್ರತಿದಾಳಿ ನಡೆಸಿ ಆತನನ್ನು ಕೊಂದು ಹಾಕಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕಾನೂನಿನಂತೆ ಈ ಎನ್‌ಕೌಂಟರ್ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ಆರಂಭವಾಗಿದ್ದು, ತನಿಖೆಯಲ್ಲಿ ಎನ್‌ಕೌಂಟರ್ ಬಗ್ಗೆ ಪೊಲೀಸ್ ಅಧಿಕಾರಿಗಳು ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಪೀತಬೈಲಿನ ದಟ್ಟಕಾಡಿನ ತುತ್ತತುದಿಯಲ್ಲಿರುವ ಮಲೆಕುಡಿಯರ ಮೂರು ಮನೆಗಳಲ್ಲಿ ಜಯಂತ್ ಗೌಡ ಎಂಬವರ ಮನೆಯಂಗಳದಲ್ಲಿ ಈ ಎನ್‌ಕೌಂಟರ್ ನಡೆದಿದೆ. ವಿಕ್ರಮ್ ಗೌಡ ಮತ್ತು ತಂಡ ಅಕ್ಕಿಬೇಳೆ ಪಡೆಯಲು ಈ ಮನೆಗೆ ಬಂದಿದ್ದರು. ಮುಂಚೂಣಿಯಲ್ಲಿದ್ದ ವಿಕ್ರಮ್ ಗೌಡ ಮನೆಯಂಗಳಕ್ಕೆ ಬಂದಿದ್ದ, ಉಳಿದವರು ಅನತಿ ದೂರದಲ್ಲಿದ್ದರು. ಮನೆಯೊಳಗಿದ್ದ ಪೊಲೀಸರು ಕೂಗಿ, ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗು ಎಂದು ಹೇಳಿದ್ದಾರೆ. ತಕ್ಷಣ ಅಲರ್ಟ್ ಆದ ವಿಕ್ರಮ್ ಗೌಡ ಶರಣಾಗುವುದಿಲ್ಲ, ತನ್ನ ಮೇಲೆ ಗುಂಡು ಹಾರಿಸಿದರೆ ತಾನೂ ಗುಂಡು ಹಾರಿಸುತ್ತೇನೆ ಎಂದಿದ್ದಾನೆ ಮತ್ತು ಬಂದೂಕು ಎತ್ತಿಕೊಂಡಿದ್ದಾನೆ. ಕೂಡಲೇ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ದಾಳಿ ನಡೆಸಿದ್ದಾರೆ. ತಕ್ಷಣ ದೂರದಲ್ಲಿ ನಿಂತಿದ್ದ ಇತರ 3 - 4 ನಕ್ಸಲೀಯರು ಪೊಲೀಸರತ್ತ ಗುಂಡು ಹಾರಿಸುತ್ತಾ ಹಿಂದಕ್ಕೆ ಓಡಿ ಕಾಡು ಸೇರಿ ಪರಾರಿಯಾಗಿದ್ದಾರೆ.
ಮಾವೋವಾದ ಜಿಂದಾಬಾದ್ ಎನ್ನುತ್ತಲೇ ತಲೆ, ಎದೆ, ಹೊಟ್ಟೆ ಮತ್ತು ತೊಡೆಗೆ ಒಟ್ಟು 7 ಗುಂಡೇಟು ತಿಂದ ವಿಕ್ರಮ್ ಗೌಡ ತೀವ್ರ ರಕ್ತಸ್ರಾವದಿಂದ ಮನೆಯಂಗಳದಲ್ಲಿಯೇ ಮೃತಪಟ್ಟಿದ್ದಾನೆ. ಆತನ ಕೈಯಲ್ಲಿ ಸುಧಾರಿತ 9 ಎಂಎಂ ಬಂದೂಕು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಕಿ ತಂದಿಡುವಂತೆ ಹೇಳಿದ್ದ: ಕಳೆದ 2 - 3 ತಿಂಗಳಿಂದ ವಿಕ್ರಮ್ ಗೌಡ ಮತ್ತವನ ಕಬಿನಿ ದಳಂ ಈ ಭಾಗದಲ್ಲಿ ಸಂಚರಿಸುತ್ತಿತ್ತು. ಪೀತಬೈಲಿನ ಈ ಮೂರು ಮನೆಗಳಿಗೆ ಹಿಂದೆಯೂ ಬಂದು ಅಕ್ಕಿಬೇಳೆ ತೆಗೆದುಕೊಂಡು ಹೋಗಿದ್ದ. ತಮ್ಮೂರಿನವ ಎಂಬ ಕಾರಣಕ್ಕೆ ಮನೆಯವರು ಅಕ್ಕಿ ಬೇಳೆ ನೀಡಿದ್ದರು.
ನ.11ರಂದೂ ಬಂದು ಅಕ್ಕಿ ತೆಗೆದುಕೊಂಡು ಹೋಗಿದ್ದ, ವಾರ ಬಿಟ್ಟು ಬರುತ್ತೇನೆ ಅಕ್ಕಿ ತಂದಿಡಿ ಎಂದು ಹೋಗಿದ್ದ. ಈ ಭಾಗದಲ್ಲಿ ವೇಷ ಮರೆಸಿ ಸುತ್ತಾಡುತ್ತಿದ್ದ ಪೊಲೀಸರಿಗೆ ಈ ಮಾಹಿತಿ ಸಿಕ್ಕಿತ್ತು. ಅದರಂತೆ ಪೂರ್ತಿ ಪ್ಲಾನ್ ಮಾಡಿ ಸಿದ್ಧರಾಗಿದ್ದರು. ಮನೆಯವರನ್ನು ಬೇರೆಡೆಗೆ ಕಳುಹಿಸಿ, ತಾವು ಮನೆಯಲ್ಲಿ ಶಸ್ತ್ರಸನ್ನದ್ಧರಾಗಿ ಅಡಗಿ ಕುಳಿತಿದ್ದರು.
ಹೇಳಿದಂತೆ ಸೋಮವಾರ ರಾತ್ರಿ ಅಕ್ಕಿಬೇಳೆ ಕೊಂಡೊಯ್ಯಲು ಬಂದ ವಿಕ್ರಮ್ ಗೌಡ ಪೊಲೀಸರು ತೋಡಿದ ಖೆಡ್ಡಾಕ್ಕೆ ಬಿದ್ದಿದ್ದಾನೆ, ಶರಣಾಗುವುದಕ್ಕೆ ಒಪ್ಪದೇ ಜೀವತೆತ್ತಿದ್ದಾನೆ.ಸಾವನ್ನೇ ಆಯ್ಕೆ ಮಾಡಿಕೊಂಡ!
ರಾಜ್ಯದಲ್ಲಿ ಸರ್ಕಾರ ನಕ್ಸಲ್ ಹಿತಚಿಂತಕರ ಮೂಲಕ ನಕ್ಸಲರ ಶರಣಾಗತಿಗೆ ಪ್ಯಾಕೇಜ್ ಘೋಷಿಸಿತ್ತು. ಅದರಂತೆ 5 ಮಂದಿ ನಕ್ಸಲೀಯರು ವಯಸ್ಸು, ಅನಾರೋಗ್ಯ ಇತ್ಯಾದಿ ಕಾರಣಗಳಿಂದ ಶರಣಾಗಿದ್ದರು. ಇನ್ನೂ ಕೆಲವು ಮಂದಿ ಶರಣಾಗುವುದಕ್ಕೆ ಸಿದ್ಧರಾಗಿದ್ದಾರೆ.
ಆದರೆ ಇನ್ನೂ 46ರ ವಿಕ್ರಮ್ ಗೌಡ ಮಾತ್ರ ಈ ಪ್ಯಾಕೇಜ್‌ಗೆ ವಿರುದ್ಧವಾಗಿದ್ದ. ತಮ್ಮನ್ನು ಶರಣಾಗುವಂತೆ ಮನವೊಲಿಸಲು ಯತ್ನಿಸಿದ ಹಿತಚಿಂತಕರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದ.
ಸೋಮವಾರ ರಾತ್ರಿ ಸಾಯುವುದಕ್ಕೂ ಮೊದಲು ಶರಣಾಗುವುದಕ್ಕೆ ಆತನಿಗೆ ಕೊನೆಯ ಅವಕಾಶವಿತ್ತು, ಆದರೂ ಆದನ್ನೂ ಆತ ತಿರಸ್ಕರಿಸಿದ ಮತ್ತು ಪೊಲೀಸರ 7 ಗುಂಡೇಟು ತಿಂದು ದಾರುಣವಾಗಿ ಮೃತಪಟ್ಟ.
ಶರಣಾಗಿದ್ದರೆ ಒಳ್ಳೆಯದಿತ್ತು: ಸಹೋದರ ಸುರೇಶ್ ಗೌಡ
ಬುಧವಾರ ವಿಕ್ರಮ್ ಗೌಡನ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಆತನ ತಮ್ಮ ಸುರೇಶ್ ಗೌಡ, ತನ್ನ ಅಣ್ಣ ನಕ್ಸಲ್ ಚಟುವಟಿಕೆಯನ್ನು ಬಿಟ್ಟು ಶರಣಾಗಿದ್ದರೆ ಒಳ್ಳೆಯದಿತ್ತು, ಸಾಮಾನ್ಯರಂತೆ ಬದುಕಿದ್ದರೆ ಸಾಕಿತ್ತು, ಕೆಲಸ ಮಾಡಿ ಮನೆಯಲ್ಲಿ ಬದುಕು ಸಾಗಿಸಬಹುದಿತ್ತು. ನಾನು ಮುಂಬೈಗೆ ಹೋದಮೇಲೆ ಅಣ್ಣನೇ ಮನೆಯನ್ನು ನೋಡಿಕೊಳ್ಳುತ್ತಿದ್ದ, ಬಳಿಕ ಆತ ನಕ್ಸಲ್ ಚಟುವಟಿಕೆಗೆ ಸೇರಿದ ಎಂಬ ಮಾಹಿತಿ ಸಿಕ್ಕಿತು. ಸರ್ಕಾರವು ನಕ್ಸಲ್ ಪ್ಯಾಕೇಜ್ ಘೋಷಿಸಿತ್ತು. ಅದನ್ನಾದರೂ ಒಪ್ಪಿಕೊಂಡಿದ್ದರೆ ಬದುಕು ಸಾಗಿಸಬಹುದಿತ್ತು ಎಂದು ಕನ್ನಡಪ್ರಭದ ಜೊತೆ ನೋವು ತೋಡಿಕೊಂಡರು.