ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹಂತದ ವರೆಗೂ ಇ ಕಚೇರಿ ವ್ಯವಸ್ಥೆ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಸಕಾಲದಲ್ಲಿ ಸ್ಪಂದಿಸಿ ಕೆಲಸ ನಿರ್ವಹಿಸುಂತಾಗಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಗ್ರಾ.ಪಂ.ಕಚೇರಿಯಲ್ಲಿ ಸ್ಥಳಾವಕಾಶ ಕಲ್ಪಿಸಿ ಸಾರ್ವಜನಿಕರ ಕೆಲಸ ನಿರ್ವಹಣೆಗೆ ಅವಕಾಶ ಮಾಡಲಾಗಿದೆ. ಆಯಾಯ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಸ್ಪಂದಿಸುವಂತಾಗಬೇಕು ಎಂದರು.ಈಗಾಗಲೇ ಹಲವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಇನ್ನೂ ಕೆಲವರಿಗೆ ವಿತರಿಸುವುದು ಬಾಕಿ ಇದ್ದು, ಶೀಘ್ರ ನೀಡಲಾಗುವುದು ಎಂದು ಕಂದಾಯ ಸಚಿವರು ವಿವರಿಸಿದರು.
ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರಲು ಶ್ರಮಿಸಲಾಗಿದೆ. ಆ ನಿಟ್ಟಿನಲ್ಲಿ ತಳ ಮಟ್ಟದಲ್ಲಿ ಕಂದಾಯ ಇಲಾಖೆಯ ಸೇವೆಗಳು ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು ಎಂದು ಕೃಷ್ಣ ಬೈರೇಗೌಡ ಅವರು ನಿರ್ದೇಶನ ನೀಡಿದರು.ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿವರ ಪಡೆದುಕೊಂಡ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಎಲ್ಲಾ ಕಡತಗಳ ವಿಲೇವಾರಿ ಮಾಡಿ ಜನಸಾಮಾನ್ಯರಿಗೆ ಅನುಕೂಲ ಆಗುವಂತೆ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಹಲವು ಕಡತಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಆಗುತ್ತಿರುವುದನ್ನು ಪರಿಶೀಲನೆ ಸಂದರ್ಭದಲ್ಲಿ ಗಮನಿಸಿದ ಸಚಿವರು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಕಂದಾಯ ಸಚಿವರಲ್ಲಿ ಕೊಡಗು ಜಿಲ್ಲೆಯ ಪಹಣಿ ಪತ್ರ, ಜಮಾಬಂದಿ ಹಾಗೂ ಪಟ್ಟೇದಾರ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ, ಮುಂದಿನ ಅಧಿವೇಶನದಲ್ಲಿ ಇದಕ್ಕೆ ಅಗತ್ಯ ಕಾನೂನು ತಿದ್ದುಪಡಿ ತಂದು ಸಮಸ್ಯೆಗಳ ಶೀಘ್ರ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಶಾಸಕರಾದ ಡಾ. ಮಂತರ್ ಗೌಡ ಅವರು ಮಾತನಾಡಿ ಜಿಲ್ಲೆಯ ಕೆಲವು ಭಾಗಗಳಲ್ಲಿನ ಜನವಸತಿ ಪ್ರದೇಶವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಬೇಕಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ತಹಸೀಲ್ದಾರರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.