ಸವಣೂರು: ಸರ್ಕಾರಿ ಜಾಗೆ ಒತ್ತುವರಿ ತೆರವಿಗಾಗಿ ಅಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಕೈಗೊಂಡ ಘಟನೆ ತಾಲೂಕಿನ ಜಲ್ಲಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.ಜಲ್ಲಾಪುರ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಸರ್ವೇ ನಂ 86ಕ್ಕೆ ಸಂಬಂಧಿಸಿದ 28 ಗುಂಟೆ ಜಾಗವನ್ನು ಪಂಚಾಕ್ಷರಯ್ಯ ಆರಾಧ್ಯಮಠ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು.ಈ ಕುರಿತು ಯಾವುದೇ ಕ್ರಮವನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಪುನಃ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಈ ಕುರಿತು 7 ದಿನಗಳ ಒಳಗಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಸಹನೀಡಿದ್ದರು.ಅಧಿಕಾರಿಗಳ ನಿರ್ಲಕ್ಷ ಧೋರಣೆಗೆ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಬಿ. ಎಸ್. ಶಿಡೆನೂರು ಪ್ರತಿಭಟನಾಕಾರರ ಮನ ಒಲಿಸಲು ಮುಂದಾದ ತಕ್ಷಣ ಪ್ರತಿಭಟನಾಕಾರರು ಆಕ್ರೋಶಗೊಂಡು, ಸರ್ಕಾರಿ ಆಸ್ತಿಯನ್ನು ಒತ್ತುವರಿಗೊಳಿಸಿದ್ದನ್ನು ಮನವಿ ಮೂಲಕ ಹಲವು ಬಾರಿ ಮನವಿ ಸಲ್ಲಿಸಿದರು ಸಹ ಸರ್ಕಾರದ ಅಧಿಕಾರಿಗಳೇ ಅಸಡ್ಡೆ ವಹಿಸುವುದು ಎಷ್ಟು ಸರಿ ಎಂದು ವಾಗ್ವಾದಕ್ಕೆ ಇಳಿದರು.ಪ್ರತಿಭಟನೆಯ ಸ್ವರೂಪವನ್ನು ಮನಗಂಡ ತಾಪಂ ಇಒ ತಹಸೀಲ್ದಾರ್ ಹಾಗೂ ಭೂಮಾಪನ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ನಂತರ, ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ, ಉಪ ತಹಸೀಲ್ದಾರ್ ಬಿ. ವೈ. ಬೋಗಾರ್, ಭೂಮಾಪನ ಇಲಾಖೆಯ ಅಧಿಕಾರಿಗಳು ಹಾಗೂ ಪಿಐ ತಿಮ್ಮಣ್ಣ ಚಾಮನೂರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನ ಒಲಿಸಲು ಪ್ರಯತ್ನಿಸಿದರು.ಈ ವೇಳೆ ಗ್ರಾಮಸ್ಥರು ನಮ್ಮ ಮನವಿಗೆ ಸ್ಥಳದಲ್ಲಿಯೇ ಬಗೆಹರಿಸಲು ಪಟ್ಟು ಹಿಡಿದರು. ನಂತರ, ಮಾತನಾಡಿದ ತಾಪಂ ಇಒ 15 ದಿನಗಳ ಒಳಗಾಗಿ ಈ ಕುರಿತು ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅದಕ್ಕೆ ಒಪ್ಪದ ಗ್ರಾಮಸ್ಥರು ಈ ಹಿಂದೆ ಮನವಿ ಸಲ್ಲಿಸಿದ ವೇಳೆ ಇದೆ ರೀತಿ ಭರವಸೆ ನೀಡಿದ್ದು ಹುಸಿಯಾಗಿದೆ. ನಾಳೆಯೇ ಸಂಬAಧಿಸಿದ ನಿವೇಶನವನ್ನು ಹದ್ದು ಬಸ್ತು ಗೊಳಿಸಬೇಕು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಗ್ರಾಮಸ್ಥರು ಸೇರಿ ಕಲ್ಪಿಸುವುದಾಗಿ ತಿಳಿಸಿದರು. ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅಧಿಕಾರಿಗಳು ನಾಳೆಯೇ ಒತ್ತುವರಿಗೆ ಒಳಪಟ್ಟ ಸರ್ಕಾರಿ ನಿವೇಶನವನ್ನು ಹದ್ದು-ಬಸ್ತು ಮಾಡಲಾಗುವುದು. ತದ ನಂತರ ಹಂತ-ಹಂತವಾಗಿ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.ಮಂಜುನಾಥ ನಿಂಗನಗೌಡ್ರ ಮಾತನಾಡಿ, ಈ ಪ್ರಕರಣವನ್ನು ಅತಿ ಶೀಘ್ರದಲ್ಲಿ ಇತ್ಯಾರ್ಥಗೊಳಿಸಬೇಕು. ಅದಕ್ಕೆ ಗ್ರಾಮಸ್ಥರು ಋಣಿಯಾಗಿರುತ್ತೇವೆ. ತಪ್ಪಿದಲ್ಲಿ, ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಸಂಗನಗೌಡ ಖಾನಗೌಡ್ರ, ವಿ.ಆರ್. ಪಾಟೀಲ, ಬಸನಗೌಡ ಅರಳಿಹಳ್ಳಿ, ಕರಬಸಗೌಡ ಮಲ್ಲನಗೌಡ್ರ, ಶೇಖರಗೌಡ ನಿಂಗನಗೌಡ್ರ, ಎನ್.ಎಸ್. ಖಾನಗೌಡ್ರ, ಷಣ್ಮುಖಗೌಡ ಅರಳಿಹಳ್ಳಿ, ಸೋಮನಗೌಡ ಕರಿಸೋಮನಗೌಡ, ವಿ. ಎಸ್. ಪಾಟೀಲ್, ಸತೀಶ ಗೌಳಿ, ಫಕ್ಕೀರಗೌಡ ಅರಳಿಹಳ್ಳಿ, ನಿಂಗಪ್ಪ ದೊಡ್ಡಮನಿ, ಬಸನಗೌಡ ಅರಳಿಹಳ್ಳಿ, ಶಾಂತಪ್ಪ ಹರಪನಹಳ್ಳಿ, ಪ್ರೇಮನಗೌಡ ಅರಳಿಹಳ್ಳಿ, ಮಂಜುನಾಥ ಮಳ್ಳಳ್ಳಿ, ಕಲ್ಲನಗೌಡ ನಿಂಗನಗೌಡ್ರ, ಮಾರುತಿ ಹರಿಜನ ಹಾಗೂ ಇತರರು ಇದ್ದರು.