ಸಾರಾಂಶ
ತಾಲೂಕಿನ ಗಂಡಸಿ ಗ್ರಾಮದ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮದೇವಿಯವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮ ವಿಜೃಂಭಣೆಯಿಂದ ನೆರವೇರಿತು.
ಅರಸೀಕೆರೆ: ತಾಲೂಕಿನ ಗಂಡಸಿ ಗ್ರಾಮದ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮದೇವಿಯವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ 5 ದಿನಗಳಿಂದ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಕಳೆ ರಂಗು ತಂದಿತ್ತು. ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮದೇವಿಯವರ ದೇವಾಲಯದಲ್ಲಿ ಬೆಳಿಗ್ಗೆ ಅಭಿಷೇಕ, ಅಷ್ಟಾವದಾನ ಸೇವೆ, ವಿಶೇಷ ಹೂವಿನ ಅಲಂಕಾರ, ನಾನಾ ಬಗೆಯ ಪೂಜಾ ಕೈಂಕರ್ಯಗಳು ಧಾರ್ಮಿಕ ವಿಧಿ-ವಿಧಾನಗಳಿಂದ ಶಾಸ್ತ್ರೋಕ್ತವಾಗಿ ನೆರವೇರಿದವು.ರಥೋತ್ಸವದ ಅಂಗವಾಗಿ ರಥವನ್ನು ಬಣ್ಣ ಬಣ್ಣದ ಬಟ್ಟೆ ಹಾಗೂ ನಾನಾ ಹೂವಿನ ಹಾರಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮದೇವಿಯವರ ಪ್ರತಿಷ್ಠಾಪಿಸಿ ರಥದ ಮುಂಭಾಗ, ಕರ್ಪೂರ ಸೇವೆ ನಂತರ ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆಯುವುದು ಈ ಎಲ್ಲ ಕಾರ್ಯಕ್ರಮಗಳ ತರುವಾಯ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನೆರೆದಿದ್ದ ಭಕ್ತರು ಶ್ರೀ ದೇವಿಯ ನಾಮ ಸ್ಮರಣಿಯ ಜಯಘೋಷ ಮುಗಿಲು ಮುಟ್ಟುತ್ತಿದ್ದಂತೆ ಭಕ್ತರು ರಥ ಎಳೆದರು. ಇದೇ ವೇಳೆ ಭಕ್ತಾಧಿಗಳು ರಥದ ಕಲಶಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ನಂತರ ಉಯ್ಯಾಲೆ ಸೇವೆ ಮತ್ತು ವಸಂತ ಸೇವೆ ನಡೆಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನ ಸಂತರ್ಪಣಿ ಏರ್ಪಡಿಸಲಾಗಿತ್ತು. ಗ್ರಾಮದ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ಮುಖಂಡರು ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.