ಗ್ರಾಮದ ಅಭಿವೃದ್ಧಿಗೆ ಕೆಳ ಹಂತದಿಂದ ಆದ್ಯತೆ

| Published : Aug 27 2025, 01:02 AM IST

ಗ್ರಾಮದ ಅಭಿವೃದ್ಧಿಗೆ ಕೆಳ ಹಂತದಿಂದ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ನಮ್ಮ ಗ್ರಾಮದ ಯೋಜನೆಗಳು ರೂಪಿತವಾಗುತ್ತಿದ್ದವು.

ಗದಗ: ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸನ್ನು ನನಸು ಮಾಡಲು ಕೆಳ ಹಂತದಿಂದಲೇ ಅಭಿವೃದ್ಧಿ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಗ್ರಾಮಸ್ಥರು ಆಸಕ್ತಿ ವಹಿಸಿ ತಮ್ಮ ವಾರ್ಡ್‌ಗಳಲ್ಲಿರುವ ಅಭಿವೃದ್ಧಿ ಮಾಡಬೇಕಾಗಿರುವ ಕೆಲಸ ಚರ್ಚಿಸಬೇಕು ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು.

ತಾಲೂಕಿನ ಲಕ್ಕುಂಡಿ ವೀರೇಶ್ವರ ದೇಗುಲದಲ್ಲಿ ನಡೆದ ಗ್ರಾಪಂ ವಾರ್ಡ್‌ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ನಮ್ಮ ಗ್ರಾಮದ ಯೋಜನೆಗಳು ರೂಪಿತವಾಗುತ್ತಿದ್ದವು. ಇದರಿಂದ ಗ್ರಾಮದಲ್ಲಿ ಮೂಲಭೂತವಾಗಿ ಆಗಬೇಕಾಗಿರುವ ಕೆಲಸಗಳಿಗೆ ಆದ್ಯತೆ ಸಿಗುತ್ತಿರಲಿಲ್ಲ. ಪ್ರಮುಖವಾಗಿ ಎಷ್ಟೋ ಗ್ರಾಮಗಳಲ್ಲಿ ಈವರೆಗೂ ಸಹ ಸ್ಮಶಾನವೇ ಇಲ್ಲ. ಇಂತಹ ಸಮಸ್ಯೆಗಳಿಗೆ 2013ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿದ್ದ ಎಚ್.ಕೆ. ಪಾಟೀಲ ನಮ್ಮ ಗ್ರಾಮ ನಮ್ಮ ಯೋಜನೆ ಜಾರಿಗೆ ತಂದು ಕೆಳ ಹಂತದ ಜನರ ಮೂಲಭೂತ ಸೌಲಭ್ಯ ಒದಗಿಸುತ್ತಾ ಬಂದಿದ್ದಾರೆ. ಈಗ ಮತ್ತೇ ಈ ಯೋಜನೆ ಮೂಲಕ ತಮ್ಮ ಗ್ರಾಮದ ಯೋಜನೆಯನ್ನು ತಾವೇ ತಯಾರಿಸಿ ಗ್ರಾಪಂ ಮೂಲಕ ಸರ್ಕಾರಕ್ಕೆ ಕಳುಹಿಸಿದರೆ ಹಂತ ಹಂತವಾಗಿ ಅನುಷ್ಠಾನ ಮಾಡಲು ಜನಪ್ರತಿನಿಧಿಗಳಿಗೆ ಅನುಕೂಲವಾಗುತ್ತದೆ ಎಂದರು.

ಇನ್ನೂ ವಿವೇಕ ಪಥದಡಿಯಲ್ಲಿ ಸ್ವಾಮಿ ವಿವೇಕಾನಂದರ ತತ್ವಗಳಡಿ ಕುಟುಂಬ ಮತ್ತು ಸಮುದಾಯದಲ್ಲಿ ಸ್ನೇಹ, ಪ್ರೀತಿ, ಭಾತೃತ್ವ, ಸೌಹಾರ್ದತೆ ಮೂಡಿಸಲು ಇಡೀ ಗ್ರಾಮಸ್ಥರು ಮುಂದೆ ಬರಬೇಕು. ಇಡಿ ಗ್ರಾಮವೇ ಒಂದು ಕುಟುಂಬವಾಗಬೇಕು. ಈ ಕಾರ್ಯ ಚಟುವಟಿಕೆಗೆ ಯುವಕರು, ಯುವತಿಯರು ಮುಂದೆ ಬಂದು ಲಕ್ಕುಂಡಿ ದೇಶದಲ್ಲಿಯೇ ಮಾದರಿಯಾಗುವಂತೆ ಮಾಡಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಮಾತನಾಡಿ, ಈಗಾಗಲೇ ಸಿಎಂ ಸಿದ್ಧರಾಮಯ್ಯ ಸರ್ಕಾರ 5 ಗ್ಯಾರಂಟಿಗಳ ಮೂಲಕ ಕಟ್ಟ ಕಡೆಯ ಮಹಿಳೆಯರಿಗೆ, ಯುವಕರಿಗೆ ಬಲ ತುಂಬಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಪಂಚ ವಾರ್ಷಿಕ ಯೋಜನೆಯ ಮೂಲಕ ಇಡೀ ಗ್ರಾಮವನ್ನು ಅಭಿವೃದ್ಧಿ ಮಾಡಬಹುದಾಗಿದ್ದು, ತಮ್ಮ ಸಹಕಾರ ಅವಶ್ಯವಾಗಿದೆ. ಈಗಾಗಲೇ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಕುಡಿಯುವ ನೀರಿನ ಯಂತ್ರ, ಪರೀಕ್ಷೆಗೆ ಸಿದ್ಧವಾಗಲು ಮಿನಿ ಪತ್ರಿಕೆ, ನೋಟ್ ಬುಕ್ ಕೊಡುಗೆ ನೀಡಲಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಹೈ ಮಾಸ್ಟ್‌ , ಗಟಾರು ನಿರ್ಮಾಣ, ಸಿಸ್ಟನ್ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.

ಸಿಸಿ ರಸ್ತೆ, ಸಾಮೂಹಿಕ ಶೌಚಾಲಯ, ವಿದ್ಯುತ್, ಸ್ವಚ್ಛತೆ, ಜಮೀನು ರಸ್ತೆ ಸುಧಾರಣೆ, ಕುಡಿಯುವ ನೀರು, ವಸತಿ, ಸಮುದಾಯ ಭವನ, ಕೆರೆಗಳ ಸ್ವಚ್ಛತೆ, ಮೂತ್ರಾಲಯ, ಮಹಿಳಾ ಸಂಜೀವಿನಿ ಒಕ್ಕೂಟಕ್ಕೆ ನಿವೇಶನ, ಅಂಗನವಾಡಿ ಕೇಂದ್ರದ ಸಮಸ್ಯೆ, ಗಟಾರು ನೀರು, ಗರಡಿಮನೆ, ಕಸ ವಿಲೇವಾರಿ, ಕಣಗಿನಹಾಳ ಹಾಗೂ ಡೊಡ್ಡರಕಟ್ಟಿ ರಸ್ತೆಯ ಜಂಗಲ್ ಕಟಿಂಗ್, ಜೆ.ಜೆ.ಎಂ ಕಾಮಗಾರಿ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳ ಕುರಿತು 5,6,7 ಮತ್ತು 8ನೇ ವಾರ್ಡ್‌ನಲ್ಲಿ ಚರ್ಚಿಸಲಾಯಿತು.

ಗ್ರಾಪಂ ಸದಸ್ಯ ಪೀರಸಾಬ್‌ ನದಾಫ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಗ್ರಾಪಂ ಸದಸ್ಯರಾದ ಬಸವರಾಜ ಯಲಿಶಿರುಂದ, ಶ್ರೇಯಾ ಕಟಿಗ್ಗಾರ, ಅನ್ನಪೂರ್ಣ ರಿತ್ತಿ, ವಿರುಪಾಕ್ಷಪ್ಪ ಬೆಟಗೇರಿ, ರಮೇಶ ಭಾವಿ, ಹನುಮಂತಪ್ಪ ಬಂಗಾರಿ, ನೀಲವ್ವ ಬಂಡಿ, ದೇವಪ್ಪ ಖಂಡು, ಬಸವಣ್ಣಿಪ್ಪ ಮಾಡಲಗೇರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಇದ್ದರು.

ಪಿಡಿಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಬಿ. ಜಾನೋಪಂತರ ಸ್ವಾಗತಿಸಿದರು. ಎಂ.ಎ. ಗಾಜಿ ವಂದಿಸಿದರು.