ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಗ್ರಾಮ ಸಂತುಷ್ಟವಾಗಿದ್ದರೆ ಗ್ರಾಮಸ್ಥರು ಸುಖವಾಗಿರುತ್ತಾರೆ. ಗ್ರಾಮದಲ್ಲಿ ಅನಾಚಾರಗಳು ಹೆಚ್ಚಾದರೆ ಗ್ರಾಮಸ್ಥರು ನೆಮ್ಮದಿ ಕಾಣಲಾರರು. ಆದ್ದರಿಂದ ಗ್ರಾಮದ ಅಭಿವೃದ್ಧಿಯೇ ಗ್ರಾಮಸ್ಥರ ಗುರಿಯಾಗಬೇಕು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ತಾಲೂಕಿನ ತೊರವಂದ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದಿಂದ ನೂತನವಾಗಿ ನಿರ್ಮಿಸಿದ ಶ್ರೀ ದ್ಯಾಮವ್ವದೇವಿ ಹಾಗೂ ಶ್ರೀ ಮಾತಂಗಮ್ಮದೇವಿ ದೇವಾಲಯ ಹಾಗೂ ಗೋಪುರಗಳ ಕಳಸಾರೋಹಣ ಸಮಾರಂಭದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದರೂ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಸಾಧ್ಯವಾಗುತ್ತಿಲ್ಲ. ಗ್ರಾಮಗಳಲ್ಲಿ ಮದ್ಯಪಾನಿಗಳ ಸಂಖ್ಯೆ ಅಧಿಕವಾಗುತ್ತಿದೆ. ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತ ತಂದೆ ತಾಯಿ ಮಾತನ್ನು ಆಲಿಸದ ಮಕ್ಕಳು ಸಮಾಜಕ್ಕೆ ಕಂಟಕ ಆಗುತ್ತಿದ್ದಾರೆ. ಇದಕ್ಕೆ ಸಂಸ್ಕಾರಯುತ ಬುದ್ಧಿಮತ್ತತೆಯ ಕೊರತೆಯೇ ಕಾರಣವಾಗಿದೆ. ಉತ್ತಮ ಸಂಸ್ಕಾರ ನೀಡುವ ಮೂಲಕ ಎಲ್ಲರೂ ಗ್ರಾಮವನ್ನು ಆದರ್ಶ ಗ್ರಾಮವಾಗಿಸಲು ಸಂಕಲ್ಪ ಮಾಡಬೇಕಿದೆ ಎಂದರು.ಮೂಡಿ ಸಂಸ್ಥಾನ ವಿರಕ್ತ ಮಠದ ಸದಾಶಿವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳು ಖಾಲಿ ಚೀಲವಿದ್ದಂತೆ. ಈ ಮಕ್ಕಳ ಬುದ್ಧಿ-ಮನಸಿನಲ್ಲಿ ಏನು ತುಂಬುತ್ತೀರೋ ಅದನ್ನು ಅವು ತುಂಬಿಕೊಳ್ಳುತ್ತವೆ. ಆದ್ದರಿಂದ ಮಕ್ಕಳಿಗೆ ಒಳ್ಳೆಯದನ್ನೇ ಬೋಧಿಸುವ ಕೆಲಸ ಮಾಡಬೇಕು ಎಂದರು.
ಹಿರೇಮಾಗಡಿ ಮಹಾಸಂಸ್ಥಾನದ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ, ತೊರವಂದ ಗ್ರಾಮದಲ್ಲಿ ಉತ್ತಮ ಸಂಸ್ಕಾರವಿದೆ. ಯಾವ ಕೆಲಸಕ್ಕೂ ಅವರು ಹಿಂಜರಿಯುವುದಿಲ್ಲ. ಅವರೆಲ್ಲರ ಭಕ್ತಿಯ ಸಂಕೇತವಾಗಿ ಇಂದು ಇಂತಹ ಅದ್ಭುತ ದೇವಾಲಯ ಸಿದ್ಧವಾಗಿ ನಿಂತಿದೆ ಎಂದರು.ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳು ಮಾತನಾಡಿ, ಮನುಷ್ಯನ ಜನ್ಮ ಸಾರ್ಥಕ ಆಗಬೇಕಾದರೆ ಧರ್ಮ ಕಾರ್ಯಗಳನ್ನು ಮಾಡಬೇಕು. ಅಂತಹ ಧರ್ಮ ಕಾರ್ಯಗಳನ್ನು ಇಂದು ನೀವೆಲ್ಲರೂ ಮಾಡಿದ್ದೀರಿ. ಇದರ ಫಲ ನಿಮಗೆ ಸದಾ ಕಾಲವೂ ದೊರೆಯುತ್ತದೆ ಎಂದರು.
ಶಾಂತಪುರ ಸಂಸ್ಥಾನದ ಶಿವಾನಂದ ಶಿವಾಚಾರ್ಯರು ಹಾಗೂ ಹಿರೇಮಾಗಡಿ ಮಠದ ಉತ್ತರಾಧಿಕಾರಿಗಳು ಮತ್ತು ಗೋಕಾಕಿನ ಶರಣಮ್ಮ ಮಾತನಾಡಿದರು.ಗ್ರಾಮದ ಫಾಲಾಕ್ಷಯ್ಯ ಶಾಸ್ತ್ರಿ ನೇತೃತ್ವದಲ್ಲಿ ಆಗಮಿಕರಿಂದ 7 ದಿನಗಳ ಕಾಲ ಪ್ರತಿಷ್ಟಾಪನೆಯ ಹೋಮ ಹವನಗಳು ನಡೆದವು. ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಸಂಜೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಾನ್ನಿಧ್ಯವನ್ನು ಕಣ್ವಕುಪ್ಪೆ ಗವಿಮಠದ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದ ನಂತರ ಮಹಾಪ್ರಸಾದ ವಿತರಿಸಲಾಯಿತು. ದೇವಾಲಯ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.- - - ಕೋಟ್ ಗ್ರಾಮದಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಮಾಡಿದರೆ ಮನಸ್ಸಿಗೆ ಸುಖ- ನೆಮ್ಮದಿ ಆನಂದ ಸಿಗುತ್ತದೆ. ಮತ್ತೆ ಕೆಲವು ಕಾರ್ಯಕ್ರಮಗಳನ್ನು ಮಾಡಿದರೆ ಜಗಳ, ದೊಂಬಿ, ಗಲಾಟೆ ಹಾಗೂ ಮನಸ್ತಾಪಗಳು ಆಗುತ್ತವೆ. ಯಾವ ಕಾರ್ಯಕ್ರಮಗಳನ್ನು ಮಾಡಿದರೆ ಪ್ರತಿಫಲಾಪೇಕ್ಷೆ ಇರುವುದಿಲ್ಲವೋ, ಅಂತಹ ಕಾರ್ಯಕ್ರಮಗಳು ಮನಸ್ಸಿಗೂ ಅಲ್ಲದೇ ಗ್ರಾಮಕ್ಕೂ ಆನಂದ, ಸುಖ, ನೆಮ್ಮದೆ ತರುತ್ತವೆ
- ಘನಬಸವ ಅಮರೇಶ್ವರ ಶಿವಾಚಾರ್ಯ ಶ್ರೀ, ಕಾನುಕೇರಿ ಮಠ, ಸೊರಬ- - - -25ಕೆಪಿಸೊರಬ02:
ಸೊರಬ ತಾಲೂಕಿನ ತೊರವಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ದ್ಯಾಮವ್ವದೇವಿ ಹಾಗೂ ಶ್ರೀ ಮಾತಂಗಮ್ಮ ದೇವಿ ದೇವಾಲಯ ಹಾಗೂ ಗೋಪುರಗಳ ಕಳಸಾರೋಹಣ ಸಮಾರಂಭ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಿತು.