ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಎರಡು ತಿಂಗಳುಗಳಿಂದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದ್ದು ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ.
ಸುಂಟಿಕೊಪ್ಪ ಹೋಬಳಿ ಕೇಂದ್ರ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಗ್ರೇಡ್ 1 ಪಂಚಾಯಿತಿಯಾಗಿದ್ದು, 20 ಮಂದಿ ಆಡಳಿತ ಮಂಡಳಿ ಸದಸ್ಯರಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ರಾಜ್ಯ ಪಂಚಾಯತ್ ರಾಜ್ ನಿಯಮನುಸಾರ 2ನೇ ಹಂತದ ಅಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಪುರುಷರ ಮಿಸಲಾತಿ ನಿಗದಿಯಾಗಿದ್ದು, ಬಿಜೆಪಿ ಬೆಂಬಲಿತ ಪಿ.ಆರ್.ಸುನಿಲ್‌ಕುಮಾರ್ ಆಯ್ಕೆಯಾದರು.ಕಳೆದ ಒಂದು ವರ್ಷದಿಂದ ಪಂಚಾಯಿತಿ ಸಾಮಾನ್ಯ ಸಭೆಗಳು ನಡೆದಿವೆ. ಕಳೆದ ಸಪ್ಟೆಂಬರ್‌ನಲ್ಲೂ ಸಾಮಾನ್ಯ ಸಭೆ ಪರಿಪೂರ್ಣವಾಗಿ ನಡೆದಿತ್ತು. ಆದರೆ ಅಕ್ಟೋಬರ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಖಾಸಗಿ ಆಸ್ಪತ್ರೆಯೊಂದಕ್ಕೆ ನೀರಾಕ್ಷೇಪಣಾ ಪತ್ರ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಗದ್ದಲ ಎಬ್ಬಿಸಿ ಸಭೆ ಬಹಿಷ್ಕರಿಸಿ, ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಪರಿಣಾಮ ಸಭೆ ರದ್ದುಪಡಿಸಲಾಯಿತು.
ನಂತರ ಸಾಮಾನ್ಯಸಭೆ ನಡೆಯದೆ ಗ್ರಾಮಸ್ಥರ 50ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಸಮಸ್ಯೆ ಉಂಟಾಗಿದೆ.ಸಮಸ್ಯೆಗಳ ಸರಮಾಲೆ:
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ವಾಹನ ಕಳೆದ 8 ತಿಂಗಳುಗಳಿಂದ ಬಳಕೆಗೆ ಸಿಗುತ್ತಿಲ್ಲ. ಆರೋಗ್ಯ ಕೇಂದ್ರದ ಸುತ್ತ ಮುತ್ತಲು ಗಿಡಗಂಟಿಗಳು ಬೆಳೆದು ನಿಂತು ಹಾವು ಮುಂಗುಸಿಗಳ ಆವಾಸ ಸ್ಥಾನವಾಗಿದೆ. ರಾತ್ರಿ ಪಾಳಯದಲ್ಲಿ ವೈದ್ಯಾಧಿಕಾರಿಗಳೂ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜನಸಾಮಾನ್ಯರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ಗ್ರಾಮದ ಸ್ವಚ್ಚತೆಗೆ ಆದ್ಯತೆ ಕಲ್ಪಿಸುತ್ತಿಲ್ಲ. ಗ್ರಾಮಸ್ಥರಿಗೆ ಮನೆ ಕಟ್ಟಲು ಪರವಾನಗಿ, ನೂತನ ವಾಣಿಜ್ಯ ಸಂಕೀರ್ಣ ಪರವಾನಗಿ, ಭೂದಾಖಲೆಯ 9 ಮತ್ತು 11ಎ ದಾಖಲಾತಿ ನೀಡಬೇಕಾಗಿದ್ದು, ಸಾಮಾನ್ಯ ಸಭೆ ನಡೆಯದೆ ಇರುವುದರಿಂದ ತೊಡಕುಂಟಾಗಿದೆ.
ಸುಂಟಿಕೊಪ್ಪ ಪಟ್ಟಣದಲ್ಲಿ ಬೆಳಗ್ಗೆ, ಸಂಜೆ ಶಾಲಾ ಮಕ್ಕಳು ಕಾದು ಕುಳಿತರೂ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಅಧಿಕ ಪ್ರಯಾಣಿಕರು ಪ್ರಯಾಣಿಸುವ ಕಾರಣ ಬಸ್ ಪ್ರಯಾಣ ಕಠಿಣವಾಗಿದೆ. ಇದರಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ತೀರಾ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ..........................
ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಾಲ್ಗೊಂಡು ಜನರ ಆಶೋತ್ತರಗಳಿಗೆ, ಗ್ರಾಮದ ಅಭಿವೃದ್ಧಿಗೆ ಒತ್ತು ನೀಡುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಬೇಕು. ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ ಸದಸ್ಯರು ಚರ್ಚಿಸಿ ಸಮಸ್ಯೆಗೆ ಪರಿಹಾರ ಕಾಣುವತ್ತ ಗಮನಹರಿಸಬೇಕು.-ಎಸ್.ವಿಘ್ನೇಶ್, ಬಿಜೆಪಿ ಯುವ ಮೋರ್ಚಾ ಘಟಕ ಅಧ್ಯಕ್ಷ............................ಸರ್ಕಾರದ ಕೆಲವು ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಪಂಚಾಯಿತಿ ವತಿಯಿಂದ ನಿರಾಕ್ಷೇಪಣಾ ಪತ್ರ ಹಾಗೂ ಇನ್ನಿತರ ದಾಖಲಾತಿ ಪತ್ರಗಳನ್ನು ನಿಗದಿತ ಅವಧಿಯೊಳಗೆ ದೊರೆಯದೆ ಇರುವುದರಿಂದ ಸಾರ್ವಜನಿಕರು ಸವಲತ್ತುಗಳಿಂದ ವಂಚಿತರಾಗುವಂತಾಗಿದೆ.
-ಫಿರೋಜ್, ಗ್ರಾಮಸ್ಥರು......................
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬಡ ಮತ್ತು ಮದ್ಯಮ ವರ್ಗದ ಜನರೇ ಹೆಚ್ಚಾಗಿ ನೆಲೆಸಿದ್ದಾರೆ. ಸರ್ಕಾರದಿಂದ ದೊರೆಯುವ ಸವಲತ್ತು ಹಾಗೂ ಸ್ವಂತ ಸೂರನ್ನು ಕಾಣುವ ಮಂದಿಗೆ ಪಂಚಾಯಿತಿ ವತಿಯಿಂದ ದೊರೆಯಬೇಕಾದ ದಾಖಲಾತಿ ಹಾಗೂ ಪ್ರಮಾಣಪತ್ರಗಳು ನಿಗದಿತ ಅವಧಿಯೊಳಗೆ ದೊರೆಯದೆ ಇರುದರಿಂದ ಪಲಾನುಭವಿ ಪಟ್ಟಿಯಿಂದ ವಂಚಿತರಾಗುತ್ತಿದ್ದೇವೆ. -ನೌಶಾದ್, ಗ್ರಾಮಸ್ಥರು.......................
ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸುತ್ತಿದ್ದು, ಕಳೆದ ತಿಂಗಳು ಕೆಲವು ಸದಸ್ಯರ ಅಸಹಕಾರದಿಂದ ಸಭೆ ಮುಂದೂಡಲಾಗಿದೆ. ಆದರೆ ಮುಂದಿನ ತಿಂಗಳು ಸಭೆಯನ್ನು ಆಯೋಜಿಸುವ ಸಾರ್ವಜನಿಕರ ಅರ್ಜಿಗಳನ್ನು ದಾಖಲಾತಿಗಳನ್ನು ವಿಲೇವಾರಿಗೊಳಿಸುವ ಮತ್ತು ಮೂಲಸಮಸ್ಯೆಗಳ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.-ಪಿ.ಆರ್.ಸುನಿಲ್ ಕುಮಾರ್, ಗ್ರಾ.ಪಂ. ಅಧ್ಯಕ್ಷ.