ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಗ್ರಾಮಸ್ಥನೊಬ್ಬ ತನ್ನ ಸಮಸ್ಯಗೆ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಲು ಮುಂದಾದ ಘಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕು ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಗ್ರಾಮಸ್ಥನೊಬ್ಬ ತನ್ನ ಸಮಸ್ಯೆಗೆ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಲು ಮುಂದಾದ ಘಟನೆ ನಡೆಯಿತು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಮಾರುಕಟ್ಟೆ ಕೇಂದ್ರದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಘಟನೆ ನಡೆದಿದೆ.ಪಂಚಾಯಿತಿ ವ್ಯಾಪ್ತಿಯ ವಿಜಯನಗರ ನಿವಾಸಿ ಗೋವಿಂದರಾಜ್ ದಾಸ್ ಅವರು, ತಾವು ಕಂದಾಯ ಪಾವತಿಸಿರುವ ಜಾಗವು ಅತಿಕ್ರಮವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಳೆದ ಗ್ರಾಮ ಸಭೆಯಲ್ಲಿ ಅರ್ಜಿ ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಗ್ರಾಮಸಭೆಯ ನಡಾವಳಿಯಲ್ಲಿ ದಾಖಲು ಕೂಡಾ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರು ಹಾಗೂ ಗೋವಿಂದರಾಜ್ ದಾಸ್ ಅವರ ನಡುವೆ ಮಾತಿನ ಚಕಮಕಿ ನಡೆಯಿತು.ಸ್ಥಳಕ್ಕೆ ತಹಸೀಲ್ದಾರ್ ಬರಬೇಕು ಎಂದು ಒತ್ತಾಯಿಸಿದ ಗೋವಿಂದರಾಜ್ ತಪ್ಪಿದಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡುತ್ತೇನೆ ಎಂದು ತಮ್ಮ ಅಂಗಿಯನ್ನು ಬಿಚ್ಚಿ ಘೋಷಣೆಗಳನ್ನು ಕೂಗಿದರು. ನಂತರ ಪಂಚಾಯಿತಿ ಕೆಲವು ಸದಸ್ಯರು ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದಾಗಿ ಭರವಸೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವೊಲಿಸಿದರು.ಗ್ರಾಮ ಸಭೆಗೆ ಅಧಿಕಾರಿಗಳ ಗೈರು ಬಗ್ಗೆ ಹಾಗೂ ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ಕಡಿಮೆ ಆಗಿರುವ ಸಂಬಂಧ ಸಭಿಕರು ಆಕ್ರೋಶ ವ್ಯಕ್ತಪಡಿಸಿದರು.. ಗೈರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.ಆಹಾರ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಚೆಸ್ಕಾಂ, ಕಾವೇರಿ ನೀರಾವರಿ ನಿಗಮ, ಮಹಿಳೆ ಮತ್ತು ಮಕ್ಕಳ ಸಬಲೀಕರಣ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳು, ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.ಸಾರ್ವಜನಿಕರು ತಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು. ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದರು.ಗ್ರಾಮದ ಕುಡಿಯುವ ನೀರಿನ ಸಮಸ್ಯೆ, ಅಂಗನವಾಡಿಯ ಸಮಸ್ಯೆ, ಚರಂಡಿ, ರಸ್ತೆ ಸೇರಿದಂತೆ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.ಈ ಸಂದರ್ಭ ನೋಡೆಲ್ ಅಧಿಕಾರಿ ಡಾ. ಕೆ.ನಾಗರಾಜು, ಉಪಾಧ್ಯಕ್ಷೆ ಶಶಿಕಲಾ, ಗ್ರಾಮ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಅಧಿಕಾರಿ ಸಂತೋಷ್, ಬಿಲ್ ಕಲೆಕ್ಟರ್ ಅವಿನಾಶ್, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.