ಸಾರಾಂಶ
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಯ ಸಿದ್ದಾಪುರ ಪಂಚಾಯತಿಯ ಗ್ರಾಮಸಭೆಯು ಗ್ರಾಮಸ್ಥರಿಲ್ಲದ ಕಾರಣ ಹಾಜರಿದ್ದ ಕೆಲವು ಗ್ರಾಮಸ್ಥರ ಒತ್ತಾಯದ ಮೇರೆಗೆ ರದ್ದು ಮಾಡಲಾಯಿತು.ಸಿದ್ದಾಪುರ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮ ಗೋಪಾಲ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಸಲು ತೀರ್ಮಾನಿಸಲಾಗಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಲಾಗಿತ್ತು. ಬುಧವಾರ ಪೊನ್ನಂಪೇಟೆ ಯೋಜನಾಧಿಕಾರಿ ಮೋಹನ್ ಎಂ.ಎಸ್. ಪಂಚಾಯತಿ ಆಡಳಿತ ಮಂಡಳಿ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಆರಂಭವಾಯಿತು. ಆದರೆ ಸಮಸ್ಯೆ ಹೇಳಿಕೊಳ್ಳಬೇಕಾದ ಜನರೇ ಸಭೆಗೆ ಆಗಮಿಸಿದ ಕಾರಣ ಗ್ರಾಮಸ್ಥ, ಕಾಂಗ್ರೆಸ್ ವಕ್ತಾರ ಮೂಸ ಸಭೆ ನಡೆಸಲು ಗ್ರಾಮಸ್ಥರೇ ಇಲ್ಲ. ಅಧಿಕಾರಿಗಳು ಮತ್ತು ಇತರೆ ಇಲಾಖೆಯ ಪ್ರತಿನಿಧಿಗಳು ಮಾತ್ರ ಇದ್ದಾರೆ ಗ್ರಾಮಸ್ಥರಿಲ್ಲದೆ ಸಭೆ ನಡೆಸಿ ಏನು ಪ್ರಯೋಜನ. ಆದ್ದರಿಂದ ಸಭೆ ಮುಂದೂಡಬೇಕೆಂದು ಒತ್ತಾಯಿಸಿದರು. ಇದಕ್ಕೆ ನಾಗರಿಕ ಹೋರಾಟ ಸಮಿತಿ ಸಂಚಾಲಕ ಅನಿಲ್ ಕುಮಾರ್ ಕೂಡ ಧ್ವನಿಗೂಡಿಸಿದರು. ಕೆಲವು ಸಮಯ ಗೊಂದಲ ಸೃಷ್ಟಿಯಾಗಿ ನೋಡೆಲ್ ಅಧಿಕಾರಿಯಾಗಿದ್ದ ಪೊನ್ನಂಪೇಟೆ ಯೋಜನಾಧಿಕಾರಿ ಮೋಹನ್ ಎಂ.ಎಸ್. ಗ್ರಾಮಸಭೆಯನ್ನು ರದ್ದುಗೊಳಿಸಿ, ಮುಂದಿನ ದಿನಗಳಲ್ಲಿ ದಿನ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.ಪಿಡಿಒ ನಡವಳಿಕೆಗೆ ಖಂಡನೆ: ಸಿದ್ದಾಪುರ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಕೊರತೆ ಹಿನ್ನಲೆಯಲ್ಲಿ ಗ್ರಾಮ ಸಭೆ ಮೂಂದೂಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಈ ಬಾರಿ ಸಭೆ ಮೂಂದೂಡಿದ್ದು ಮುಂದೆ ಗ್ರಾಮಸ್ಥರಿಲ್ಲದಿದ್ದರೂ ಗ್ರಾಮಸಭೆ ನಡೆಸುತ್ತೇವೆ. ಮುಂದಿನ ಸಭೆಗೆ ನಮಗೆ ಕೋರಂ ಅವಶ್ಯಕತೆ ಎಲ್ಲ ಎಂದು ಹೇಳಿರುವುದನ್ನು ನಾಗರಿಕ ಹೋರಾಟ ಸಮಿತಿ ಸಂಚಾಲಕ ಅನಿಲ್ ಕುಮಾರ್ ಖಂಡಿಸಿದ್ದು ಗ್ರಾಮ ಸಭೆಯ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಗ್ರಾಮಸಭೆ ನಡೆಸಬೇಕಾದ ಅಧಿಕಾರಿ ಈ ರೀತಿಯಲ್ಲಿ ಬೇಜಾವಾಬ್ದಾರಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.