ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಗಡಿ ಗ್ರಾಮವಾಗಿರುವ ನರಿಗೇಹಳ್ಳಿ ಹಾಗೂ ಸುತ್ತಮುತ್ತಲಿದ್ದ ಹತ್ತಾರು ಎಕರೆ ಜಮೀನನ್ನು ತಾಲೂಕು ಆಡಳಿತ ಅಕ್ರಮವಾಗಿ ಮಂಜೂರು ಮಾಡಿದೆ. ಅದನ್ನು ಕೂಡಲೇ ರದ್ದುಗೊಳಿಸಿ, ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಮತ್ತು ಪಡೆದುಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮದ ಮುಖಂಡರು ಆದ ಡಾ.ಜಿ.ಪರಮೇಶ್ವರ್ ರವರನ್ನು ಆಗ್ರಹಿಸಿದರು.ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ಡಾ.ಜಿ.ಪರಮೇಶ್ವರ್ ರವರಿಗೆ ಮನವಿ ಪತ್ರ ಸಲ್ಲಿಸಿದ ಗ್ರಾಮಸ್ಥರು, ನರಿಗೇಹಳ್ಳಿ ಗ್ರಾಮದ ಸರ್ವೇ ನಂಬರ್ 8 ರಲ್ಲಿ 3.30 ಎಕರೆ, ಸರ್ವೇ ನಂಬರ್ 32 ರಲ್ಲಿ 2 ಎಕರೆ ಜಮೀನನ್ನು ತಾಲೂಕು ಕಚೇರಿಯ ಸಿಬ್ಬಂದಿ ಬೆಂಗಳೂರಿನ ನಿವಾಸಿಗಳಾದ ರಾಮಣ್ಣ ಮತ್ತು ಅವರ ಪತ್ನಿ ಲಕ್ಷ್ಮೀ ಎಂಬುವವರ ಹೆಸರಿಗೆ ಅಕ್ರಮವಾಗಿ ನೀಡಿದ್ದಾರೆ. ಅಲ್ಲದೇ ಸರ್ವೇ ನಂಬರ್ 22 ರಲ್ಲಿ ಒಂದು ಎಕರೆ ಜಮೀನನ್ನು ಸರ್ಕಾರಿ ಶಾಲೆಗೆಂದು ಬಿಡಲಾಗಿತ್ತು. ಆ ಜಮೀನನ್ನೂ ಸಹ ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಆಟವಾಡಲೂ ಸಹ ಮೈದಾನ ಇಲ್ಲದಂತಾಗಿದೆ. ಇದರಲ್ಲಿ ತಾಲೂಕು ಕಚೇರಿಯ ಸಿಬ್ಬಂದಿಯ ಕೈ ಚಳಕವಿದೆ ಎಂದು ದೂರಿದ್ದಾರೆ. ನರಿಗೇಹಳ್ಳಿ ಗ್ರಾಮದ ಸರ್ವೇ ನಂಬರ್ 8, 32, ಮತ್ತು 22 ರ ಸರ್ಕಾರಿ ಗೋಮಾಳ ಜಮೀನನ್ನು ಈ ಹಿಂದಿನ ತಹಸೀಲ್ದಾರ್ ಆಗಿದ್ದ ವೈ.ಎಂ.ರೇಣುಕುಮಾರ್. ರೆವಿನ್ಯೂ ಅಧಿಕಾರಿ ಪರಮೇಶ್ವರ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ ಸೇರಿದಂತೆ ಹಲವಾರು ಅಧಿಕಾರಿಗಳು ಶಾಮೀಲಾಗಿ ಕೋಟ್ಯಂತರ ರೂ ಮೌಲ್ಯದ ಸರ್ಕಾರಿ ಜಮೀನನ್ನು ರಾಮಣ್ಣ ಮತ್ತು ಲಕ್ಷ್ಮಿ ಎಂಬುವವರ ಹೆಸರಿಗೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಹಿಂದಿನ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮತ್ತು ಆರ್.ಐ.ಪರಮೇಶ್ವರ್ ರವರು ದಾಖಲೆಗಳನ್ನು ತಿದ್ದಿ ಸಕ್ರಮವೆಂದು ಮಾಡಿ ವಂಚಿಸಿದ್ದಾರೆ. ರಾಮಣ್ಣ ಎಂಬುವವರು ಬೆಂಗಳೂರಿನ ನಿವಾಸಿಯಾಗಿದ್ದಾರೆ. ಅವರಿಗೆ ಸ್ವಂತ ಬಂಗಲೆ, ನಾಲ್ಕೈದು ನಿವೇಶನಗಳು. ಐಶಾರಾಮಿ ಕಾರುಗಳು, ಉದ್ಯಮಿ ಸಹ ಆಗಿದ್ದಾರೆ. ಅವರ ಮಕ್ಕಳೂ ಸಹ ಸಾಫ್ಟ್ ವೇರ್ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಡವರಿಗಾಗಿ ಇರುವ ಸರ್ಕಾರಿ ಜಮೀನನ್ನು ಹಣವಂತರಿಗೆ ನೀಡಿ ಬಡವರನ್ನು ಬೀದಿಗೆ ತಳ್ಳಲಾಗಿದೆ. ಇಲ್ಲಿಯ ಕಂದಾಯ ಇಲಾಖಾ ಸಿಬ್ಬಂದಿ ಶ್ರೀಮಂತರ ಪರ ಇದ್ದು ಪ್ರಾಮಾಣಿಕವಾಗಿ ಹತ್ತಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಬಡ ಜನರ ಭೂಮಿಯನ್ನೇ ಬೇರೆಯವರ ಹೆಸರಿಗೆ ಮಾಡಿ ಬಡವರ ಪಾಲಿಗೆ ವಿಲನ್ ಗಳಾಗಿದ್ದಾರೆ. ನರಿಗೇಹಳ್ಳಿ ಸುತ್ತಮುತ್ತ ಸುಮಾರು ಇನ್ನೂರರಿಂದ ಮುನ್ನೂರು ಎಕರೆ ಸರಕಾರಿ ಜಮೀನು ಪರಭಾರೆ ಆಗಿದ್ದು ಇದೊಂದು ದೊಡ್ಡ ಹಗರಣವಾಗಿದೆ. ಕೂಡಲೇ ಈ ಹಗರಣವನ್ನು ಬಯಲಿಗೆಳೆದು ಬಡವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ನರಿಗೇಹಳ್ಳಿ ಗ್ರಾಮಸ್ಥರು ಸಚಿವ ಡಾ.ಜಿ.ಪರಮೇಶ್ವರ್ ರವರಲ್ಲಿ ಮನವಿ ಮಾಡಿಕೊಂಡರು. .ನರಿಗೇಹಳ್ಳಿ ಗ್ರಾಮಸ್ಥರ ದೂರು ಆಲಿಸಿದ ಸಚಿವ ಡಾ.ಜಿ.ಪರಮೇಶ್ವರ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸರಕಾರಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಬೇಕು. ಅಲ್ಲದೇ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮದ ಮುಖಂಡರಾದ ನವೀನ್ ಮತ್ತು ಅರುಣ್ ರಾಮಚಂದ್ರು, ಮುನೇಶ್, ನಾಗರಾಜು, ಶಂಕರೇಗೌಡ, ರಂಗಸ್ವಾಮಿ, ಕುಮಾರ್, ನರಸೇಗೌಡ, ಕಂಪಮ್ಮ, ಮಂಜುಳಾ, ಮುನಿಯಮ್ಮ, ಮಂಜಮ್ಮ, ನಾಗೇಶ್, ಕೃಷ್ಣಮೂರ್ತಿ ಸೇರಿದಂತೆ ಹಲವಾರು ಮಂದಿ ಇದ್ದರು.