ಸಾರಾಂಶ
ಮುಂಡುಗದೊರೆ ಗ್ರಾಪಂ ವ್ಯಾಪ್ತಿಯ ದೊಡ್ಡಪಾಳ್ಯ ಗ್ರಾಮದಲ್ಲಿ ದುರಸ್ತಿಗೊಂಡು ಹಾಳಾಗಿರುವ ಚರಂಡಿ ಮೇಲೆಯೇ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಕೆಲ ಬೀದಿಗಳಲ್ಲಿ ಚರಂಡಿ ನಿರ್ಮಿಸದೆ ಅವೈಜ್ಞಾನಿಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಡುಗದೊರೆ ಗ್ರಾಪಂ ವ್ಯಾಪ್ತಿಯ ದೊಡ್ಡಪಾಳ್ಯ ಗ್ರಾಮದಲ್ಲಿ ದುರಸ್ತಿಗೊಂಡು ಹಾಳಾಗಿರುವ ಚರಂಡಿ ಮೇಲೆಯೇ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಕಿಡಿಕಾರಿದರು.
ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಬಳಿಕ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದರೂ ಗ್ರಾಮದ ರಸ್ತೆ ಚರಂಡಿ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಕಳಪೆ ಕಾಮಗಾರಿ ಹಾಗೂ ತ್ಯಾಪೆ ಕೆಲಸ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.ಇದನ್ನು ಪ್ರಶ್ನಿಸಿದ ಗ್ರಾಮಸ್ಥರ ಮನೆಗಳ ಮುಂದೆ ಕಾಮಗಾರಿ ಕೈ ಬಿಟ್ಟು ಉಳಿದ ಬೀದಿಯ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಮುಂದಾಗುವಂತೆ ಗುತ್ತಿಗೆದಾರ ಸವಾಲು ಹಾಕುತ್ತಿದ್ದಾರೆ. ಒಂದು ವೇಳೆ ರಸ್ತೆ ನಿರ್ಮಿಸುವುದಾದರೆ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಿ ನಂತರ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.