ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯ ಉಮಚ್ಚಗಿ ಹೊಸ್ತೋಟ ಉಮಚ್ಚಗಿ ಮತ್ತು ಶಾನವಳ್ಳಿ ಗ್ರಾಮಕ್ಕೆ ಪ್ರತ್ಯೇಕ ವಾರ್ಡ್‌ ಮಂಜೂರಿ ಹಾಗೂ ಹೆಚ್ಚುವರಿ ಸದಸ್ಯರನ್ನು ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮುಂಡಗೋಡ

ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯ ಉಮಚ್ಚಗಿ ಹೊಸ್ತೋಟ ಉಮಚ್ಚಗಿ ಮತ್ತು ಶಾನವಳ್ಳಿ ಗ್ರಾಮಕ್ಕೆ ಪ್ರತ್ಯೇಕ ವಾರ್ಡ್‌ ಮಂಜೂರಿ ಹಾಗೂ ಹೆಚ್ಚುವರಿ ಸದಸ್ಯರನ್ನು ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

ಈ ಎಲ್ಲ ಗ್ರಾಮಗಳು ಗುಡ್ಡಗಾಡು ಪ್ರದೇಶವಾಗಿದ್ದು, ಈ ಗ್ರಾಮಗಳ ಸಮಗ್ರ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಹಲವಾರು ವರ್ಷಗಳಿಂದ ಪ್ರತ್ಯೇಕ ವಾರ್ಡ್‌ ಮಾಡಿಕೊಡುವಂತೆ ಮನವಿ ನೀಡಲಾಗಿತ್ತು. ಆದರೆ ಈವೆರೆಗೂ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಕಾರಣ ಉಮಚ್ಚಗಿ ಹೊಸ್ತೋಟ ಮತ್ತು ಶಾನವಳ್ಳಿ ಗ್ರಾಮಕ್ಕೆ ಪ್ರತ್ಯೇಕವಾಗಿ ಸದಸ್ಯರನ್ನು ನೀಡಿದ್ದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಬಹಳ ಅನುಕೂಲವಾಗುತ್ತದೆ. ಸದರಿ ಒಂದೊಂದು ಗ್ರಾಮಗಳೂ ಸುಮಾರು ೮ರಿಂದ ೧೦ ಕಿಮೀ ದೂರದಲ್ಲಿದ್ದು, ಬರುವ ಅನುದಾನದಲ್ಲಿ ಸಮರ್ಪಕ ಅಭಿವೃದ್ಧಿಪಡಿಸಲು ಸಾದ್ಯವಾಗುತ್ತಿಲ್ಲ. ಈ ಗ್ರಾಮಗಳು ಹಿಂದುಳಿದ ಗ್ರಾಮಗಳಾಗಿದ್ದು ಹಿಂದುಳಿದ ವರ್ಗದವರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಪ್ರತಿಯೊಂದು ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್‌ ಅವಶ್ಯವಿದೆ.

ಈ ಹಿಂದೆ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪ್ರತ್ಯೇಕ ವಾರ್ಡ್‌ ಮತ್ತು ಹೆಚ್ಚುವರಿ ಸದಸ್ಯರನ್ನು ನೀಡುವಂತೆ ಸರ್ವಾನುಮತದಿಂದ ತಿರ್ಮಾನಿಸಲಾಗಿದೆ. ಹಾಗಾಗಿ ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಗ್ರಾಮಗಳಿಗೆ ಪ್ರತ್ಯೇಕ ಸದಸ್ಯರು ಮತ್ತು ವಾರ್ಡ್‌ಗಳನ್ನು ಮಂಜೂರಿ ಮಾಡಿ ಗ್ರಾಮಸ್ಥರ ಬೇಡಿಕೆ ಈಡೇರಿಸಬೇಕಲ್ಲದೇ, ಅಭಿವೃದ್ದಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭ ಗ್ರಾಪಂ ಅಧ್ಯಕ್ಷ ಮುಕುಂದ ನಾಯ್ಕ, ನಾಗರಾಜ ಭಟ್ ಶಾನವಳ್ಳಿ, ಪರಮೇಶ್ವರ ಗೌಡ ಉಮಚ್ಚಗಿ, ಸುರೇಶ ವೀರಭದ್ರಗೌಡ ಉಮಚ್ಚಗಿ ಹಾಗೂ ಮುಂತಾದ ಗ್ರಾಮಸ್ಥರಿದ್ದರು.