ಸಾರಾಂಶ
ಕನ್ನಡಪ್ರಭ ವಾರ್ತೆ ಅಮೀನಗಡ
ಸಮೀಪದ ಐತಿಹಾಸಿಕ ಐಹೊಳೆ 125 ಐತಿಹಾಸಿಕ ದೇವಾಲಯಗಳ ಸಮುಚ್ಛಯಗಳ ನಡುವೆಯೇ ಐಹೊಳೆ ಗ್ರಾಮ ಹೊಂದಿಕೊಂಡಿದ್ದು, ಜನವಸತಿಯೊಂದಿಗೆ ಬೆಸೆದುಕೊಂಡಿದೆ. ದೇವಾಲಯಗಳ ಉಳಿವಿಗಾಗಿ ಸರಕಾರ ಗ್ರಾಮ ಸ್ಥಳಾಂತರಿಸಿ, ದೇವಾಲಯಗಳನ್ನು ರಕ್ಷಿಸಬೇಕೆಂದು ಹಲವಾರು ಬಾರಿ ಭರವಸೆ ಕೊಟ್ಟು, ದಶಕಗಳೇ ಕಳೆದರೂ ಇದುವರೆಗೂ ಸ್ಥಳಾಂತರವಾಗಿಲ್ಲ. ಇದರಿಂದ ದೇವಾಲಯಕ್ಕೆ ಹೊಂದಿಕೊಂಡೇ ಇರುವ ಮನೆಗಳ ಕುಟುಂಬದವರು ಹಲವು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.ಇತ್ತೀಚೆಗೆ ಸುರಿದ ಮಳೆಯಿಂದ ಮನೆ ಛಾವಣಿಗಳು ಕುಸಿದಿದ್ದು, ನಿರಂತರ ಮಳೆಯಿಂದ ಮನೆಗಳು ಸೋರುತ್ತಿವೆ. ದುರಸ್ತಿ ಮಾಡಲು ಸ್ಥಳೀಯ ಪ್ರಾಚ್ಯವಸ್ತು ಇಲಾಖೆಯವರು ಬಿಡುತ್ತಿಲ್ಲ. ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಇದರಿಂದ ನಮಗೆ ವಾಸಿಸಲು ತೀವ್ರ ತೊಂದರೆಯಾಗಿದೆ. ಪ್ರಾಚ್ಯವಸ್ತು ಇಲಾಖೆಯವರು ತಕ್ಷಣವೇ ದೂರು ಹಿಂಪಡೆದು, ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಪೊಲೀಸ್ ಇಲಾಖೆ ಮಧ್ಯೆ ಪ್ರವೇಶಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಅಮೀನಗಡ ಪೊಲೀಸ್ ಠಾಣಾಧಿಕಾರಿಗಳಿಗೆ ಐಹೊಳೆಯ ನಾಗರಿಕರು ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಗುತ್ತಿಗೆದಾರ ಸಿದ್ದು ಹೂಗಾರ, ತಾಪಂ ಮಾಜಿ ಅಧ್ಯಕ್ಷ ಬಿ.ಸಿ. ಅಂಟರತಾನಿ, ಗ್ರಾಮದಲ್ಲಿರುವ ಮನೆಗಳು ಎರಡು ಮೂರು ತಲೆಮಾರಿನವುಗಳಾಗಿದ್ದು, ಮಳೆಗಾಳಿ, ಪ್ರಕೃತಿ ವಿಕೋಪಕ್ಕೆ ಶಿಥಿಲಗೊಳ್ಳುತ್ತವೆ. ಅದಕ್ಕೆ ಮೇಲಿಂದ ಮೇಲೆ ದುರಸ್ತಿ ಮಾಡಬೇಕಾಗುತ್ತದೆ. ಕೆಲವು ಮನೆಗಳನ್ನು ಸಂಪೂರ್ಣವಾಗಿ ಕೆಡವಿ ಕಟ್ಟಬೇಕಾಗುತ್ತದೆ. ಮನೆಗಳಿಗೆ ಶೌಚಾಲಯ ಕಟ್ಟಬೇಕಾಗುತ್ತದೆ. ಚರಂಡಿ ನೀರು ಹರಿದು ಹೋಗಲು ಒಳಚರಂಡಿ ನಿರ್ಮಿಸಬೇಕಾಗುತ್ತದೆ. ಇವೆಲ್ಲವೂ ಕಾನೂನು ವ್ಯಾಪ್ತಿಯಲ್ಲೇ ಇದ್ದು, ಗ್ರಾಮಸ್ಥರು ಮನೆಯ ದುರಸ್ತಿ ಮಾಡಲು ಮುಂದಾದ ತಕ್ಷಣವೇ ಪ್ರಾಚ್ಯವಸ್ತು ಇಲಾಖೆ ನಾಗರಿಕರ ಮೇಲೆ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಬೆದರಿಕೆ ಉಂಟು ಮಾಡುತ್ತಾರೆ. ಇಲ್ಲಿ ಗ್ರಾಮ ಪಂಚಾಯತಿಯಿದ್ದು ಅದರ ಮೂಲಕ ರಸ್ತೆ, ಚರಂಡಿ, ಕುಡಿಯುವ ನೀರು ಮುಂತಾದ ಮೂಲ ಸೌಲಭ್ಯಗಳ ಕಾಮಗಾರಿಗೆ ಮುಂದಾದರೆ ಪ್ರಾಚ್ಯವಸ್ತು ಇಲಾಖೆ ಹಲವು ವರ್ಷಗಳಿಂದ ನಾಗರಿಕರಿಗೆ ತೊಂದರೆ ನೀಡುತ್ತ ಬಂದಿದ್ದು, ಈಗಲೂ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಕಿರುಕುಳ ಮುಂದುವರಿದಿದೆ. ನಾವು ಉದ್ಯಮ, ಐಷಾರಾಮಿ ಜೀವನಕ್ಕೆ ಕಟ್ಟುತ್ತಿಲ್ಲ, ಕುಟುಂಬಗಳು ವಾಸಿಸುವ ಮನೆಗಳ ಸಣ್ಣಪುಟ್ಟ ದುರಸ್ತಿಗಳಿಗೂ ಇಲಾಖೆ ಕಿರಿಕಿರಿ ಉಂಟು ಮಾಡುತ್ತಿದೆ. ಇದರಿಂದ ಕೆಲವು ಕುಟುಂಬಗಳು ಹುಟ್ಟಿದ ಊರು ಬಿಟ್ಟು ಬೇರೆ ಕಡೆ ಗುಳೆ ಹೋಗುತ್ತಿದ್ದಾರೆ.ಪೋಲೀಸ್ ಇಲಾಖೆ ಮಧ್ಯಪ್ರವೇಶಿಸಿ ನಾಲ್ಕು ದಶಕಗಳಿಂದ ಗ್ರಾಮ ಸ್ಥಳಾಂತರದ ಚರ್ಚೆ ನಡೆಯುತ್ತಲೇ ಇದೆ. ಗ್ರಾಮವನ್ನು ಸಂಪೂರ್ಣ ಸ್ಥಳಾಂತರಕ್ಕೆ ಜನರ ಸಂಪೂರ್ಣ ಒಪ್ಪಿಗೆ ಇದೆ. ಮೊದಲು ಗ್ರಾಮ ಸ್ಥಳಾಂತರ ಮಾಡಬೇಕು. ತಕ್ಷಣವೇ ಪ್ರಾಚ್ಯವಸ್ತು ಇಲಾಖೆ ನಾಗರಿಕರ ಮೇಲೆ ಕೊಟ್ಟಿರುವ ಪೊಲೀಸ್ ಇಲಾಖೆಯಲ್ಲಿ ನೀಡಿರುವ ದೂರನ್ನು ಹಿಂಪಡೆಯಬೇಕು. ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಾಗರಿಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಐಹೊಳೆಯ ಸಮಸ್ತ ನಾಗರಿಕರು ಉಗ್ರ ಸ್ವರೂಪದ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು. ಎ.ಎನ್.ಸಾಲಿಮಠ, ಶರಣಪ್ಪ ಮಾಯಾಚಾರಿ, ನೀಲಪ್ಪ ಚಿಮ್ಮಲಗಿ, ವಿಶ್ವನಾಥ ಹಂಡಿ, ಸೋಮಪ್ಪ ಪೂಜಾರಿ, ದ್ಯಾಮಣ್ಣ ಮಲಗೌಡರ ಇತರರು ಇದ್ದರು.