ಸಾರಾಂಶ
- ಮತ ಬಹಿಷ್ಕಾರ ಬೆದರಿಕೆ । ಹಳ್ಳಿಹಾಳ್‌ಮಟ್ಟಿ ಕ್ಯಾಂಪ್‌ಗೆ ದೌಡಾಯಿಸಿದ ತಹಸೀಲ್ದಾರ್
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಕೊಕ್ಕನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಹಾಳ್ ಮಟ್ಟಿ ಕ್ಯಾಂಪ್ ಜನತೆ ರಸ್ತೆ ದುರಸ್ತಿಗೊಳಿಸಬೇಕು, ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವ ಬೆದರಿಕೆಯೊಡ್ಡಿ, ಈ ಹಿನ್ನೆಲೆ ಚುನಾವಣಾ ಅಧಿಕಾರಿಗಳ ತಂಡ ತಹಸೀಲ್ದಾರ್ ಗುರುಬಸವರಾಜ್ ನೇತೃತ್ವದ ತಂಡ ಗ್ರಾಮಕ್ಕೆ ಆಗಮಿಸಿ, ಸ್ಥಳೀಯರ ಮನವೊಲಿಸುವಲ್ಲಿ ಯಶಸ್ವಿಯಾದರು.ಅಧಿಕಾರಿಗಳು ಗ್ರಾಮಕ್ಕೆ ಬರುವ ಮಾರ್ಗದಲ್ಲಿ ಗ್ರಾಮಸ್ಥರು ರಸ್ತೆಯಲ್ಲೇ ಕುಳಿತು ಜೀಪ್‌ಗೆ ಮುತ್ತಿಗೆ ಹಾಕಿ ರಸ್ತೆ ಸಮಸ್ಯೆ ಹೇಳಿಕೊಂಡರು.
ಗ್ರಾಮದ ಯುವಕರಾದ ಕುಬೇರಪ್ಪ, ಬಸವನಗೌಡ ಮಾತನಾಡಿ, ಮಲೇಬೆನ್ನೂರು ಮುಖ್ಯ ರಸ್ತೆಯಿಂದ ಮಟ್ಟಿ ಕ್ಯಾಂಪ್‌ವರೆಗೆ ಒಂದೂವರೆ ಕಿಮೀ ಉದ್ದದ ರಸ್ತೆ 40 ವರ್ಷಗಳಿಂದಲೂ ದುರಸ್ತಿಯಾಗಿಲ್ಲ. ಮಳೆಗಾಲದಲ್ಲಿ ಆಸ್ಪತ್ರೆಗೆ ಮತ್ತು ಶಾಲೆಗೆ ತೆರಳಲು ತೀವ್ರ ತೊಂದರೆಯಾಗುತ್ತಿದೆ. ಜನಪ್ರತಿನಿಧಿಗಳಿಗೆ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.ಜನಪ್ರತಿನಿಧಿಗಳು ರಸ್ತೆ ನಿರ್ಮಾಣಕ್ಕೆ ಚರ್ಚ್‌ನಲ್ಲಿ, ದೇವಾಲಯದಲ್ಲಿ ಗಂಟೆ ಬಾರಿಸಿ ಭರವಸೆ ನೀಡಿದ್ದರು. ಕಳೆದ ಐದು ವರ್ಷದ ಹಿಂದೆ ಕಾಟಾಚಾರದ ಮಣ್ಣು ಹಾಕಿ ಗುತ್ತಿಗೆದಾರರು ಕೈ ತೊಳೆದುಕೊಂಡರು. ರಸ್ತೆಯ ಗುಂಡಿಯಲ್ಲಿ ಬಿದ್ದು ಒಬ್ಬರು ಮರಣ ಹೊಂದಿದ್ದಾರೆ. ಅಧಿಕಾರಿಗಳ ಮೇಲೆ ಈಗಲೂ ನಂಬಿಕೆ ಇದೆ, ನಮ್ಮ ಹಕ್ಕು ಕೇಳಿದ್ದೇವೆ, ನಮಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಿದ ತಹಸೀಲ್ದಾರ್ ಗುರುಬಸವರಾಜ್ ಅವರು, ಈ ರಸ್ತೆಯ ಕಾಮಗಾರಿಗೆ ಸಮೀಕ್ಷೆ ನಡೆಸಿ ಪಂಚನಾಮೆ ಆಗಿದೆ. ₹೫೦ ಲಕ್ಷ ಪ್ರಸ್ತಾವನೆ ಸಿದ್ಧಪಡಿಸಿ ಕಳುಹಿಸಲಾಗಿದೆ. ಜೂ.4ರವರೆಗೆ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಹೊಸ ಕಾಮಗಾರಿ ಆರಂಭಿಸಲು ಅಸಾಧ್ಯವಾಗಿದೆ. ಯಾವೊಬ್ಬ ಅಭ್ಯರ್ಥಿಗಳ ಬೆಂಬಲಿಸಲು ಆಗದಿದ್ದರೆ, ನೋಟಾ ಬಟನ್ ಸಹ ಇದೆ. ಈ ಅವಕಾಶದ ಮೂಲಕವೂ ಮತದಾನ ಮಾಡಬೇಕು ಎಂದು ಮನವೊಲಿಸಿದಾಗ, ಗ್ರಾಮಸ್ಥರು ಒಪ್ಪಿಕೊಂಡರು.ಪಂಚಾಯತ್‌ರಾಜ್ ಎಂಜಿನಿಯರ್ ಗಿರೀಶ್ ಮಾತನಾಡಿ ತಾಲೂಕಲ್ಲಿ ೬೦೬ ಕಿಮೀ ರಸ್ತೆಯಿದ್ದು, ೩೬೮ ಕಿಮೀ ಗ್ರಾಮೀಣ ರಸ್ತೆ, ೩೨೦ ಕಿಮೀ ಕಚ್ಚಾ ರಸ್ತೆಯಿದೆ. ಸರ್ವಋತು ರಸ್ತೆಗೆ ಒಟ್ಟು ೧೩ ಕಿಮೀ ರಸ್ತೆಯ ಕಾಮಗಾರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪಿಡಿಒ ಸಾರಥಿ ನಾಗರಾಜ್ ಮಾತನಾಡಿ, ಒಂದೂವರೆ ಕಿಮೀ ರಸ್ತೆಗೆ ಒಟ್ಟು ₹೪೦ ಲಕ್ಷ ಅಗತ್ಯವಾಗಿದೆ. ಅಷ್ಟು ಅನುದಾನ ಲಭ್ಯವಿಲ್ಲ. ನರೇಗಾ ಯೋಜನೆಯಡಿ ಪೀಸ್ ವರ್ಕ್ ನೀಡಲಿಕ್ಕೆ ಅವಕಾಶವಿಲ್ಲ. ಕಳೆದ ಐದು ವರ್ಷಗಳ ಹಿಂದೆ "ನಮ್ಮ ಹೊಲ, ನಮ್ಮ ರಸ್ತೆ " ಕಾರ್ಯಕ್ರಮದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದರು.ಗ್ರಾಮಸ್ಥರಾದ ಶ್ರೀನಿವಾಸ್, ಬಸವನಗೌಡ, ವೆಂಕಟೇಶ್, ಮಹದೇವಪ್ಪ, ಜ್ಯೋತಿ, ಸುಮಾ, ಶಾರದಮ್ಮ, ಶೇಷಮ್ಮ, ದೇವಿಕಾ, ಜಯಮ್ಮ, ನಾಗಮ್ಮ, ರತ್ನಮ್ಮ, ದಿಳ್ಯಪ್ಪ, ಸತ್ಯವತಿ, ಹುಲಿಗೆಪ್ಪ ಮತ್ತಿತರರು ಅಧಿಕಾರಿಗಳ ಮಾತಿಗೆ ಒಪ್ಪಿಕೊಂಡು ಮತದಾನದ ಸಂಕಲ್ಪ ಮಾಡಿದರು. ಅಧಿಕಾರಿಗಳಾದ ರಾಮಕೃಷ್ಣಪ್ಪ, ಉಪ ತಹಸೀಲ್ದಾರ್ ರವಿ, ಪಿಡಿಒ ಉಮೇಶ್, ರಾಜಸ್ವ ನಿರೀಕ್ಷಕ ಆನಂದ್ ಇದ್ದರು.
- - - -ಚಿತ್ರ-೧:ಹಳ್ಳಿಹಾಳ್‌ಮಟ್ಟಿ ಕ್ಯಾಂಪ್‌ನಲ್ಲಿ ಮತದಾರರನ್ನು ಮನವೊಲಿಸುವ ಅಧಿಕಾರಿಗಳು.
-ಚಿತ್ರ-೨:ತಹಸೀಲ್ದಾರ್ ವಾಹನಕ್ಕೆ ಮುತ್ತಿಗೆ ಹಾಕಿ ಸಮಸ್ಯೆ ಹೇಳಿಕೊಂಡರು.