ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅಹವಾಲು ಸ್ವೀಕಾರ ಮಾಡುತ್ತಿರುವ ವೇಳೆಯಲ್ಲಿಯೂ ಗಲಾಟೆಯಾಯಿತು
ಕೊಪ್ಪಳ: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹಿರೇಬಗನಾಳ ಗ್ರಾಮಕ್ಕೆ ಬರುವ ಮುನ್ನವೇ ಹೈಡ್ರಾಮಾ ನಡೆದಿದ್ದು, ಕಾರ್ಖಾನೆಯ ಪರ ವಕಾಲತ್ತು ವಹಿಸಲು ಬಂದ ಹಿರೇಕಾಸನಕಂಡಿ ಗ್ರಾಮದ ಕೆಲವರನ್ನು ಅಟ್ಟಾಡಿಸಿ ಓಡಿಸಿದ ಘಟನೆ ನಡೆದಿದೆ.
ಕಾರ್ಖಾನೆ ಪರ ವಕಾಲತ್ತು ವಹಿಸಲು ಕಾರ್ಖಾನೆಯೊಂದರ ವಾಹನದಲ್ಲಿಯೇ ಬಂದಿದ್ದ ಕೆಲವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ನೀರಿಳಿಸಿ ಕಳುಹಿಸಿದರು.ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆಗಮಿಸುತ್ತಾರೆ ಎಂದು ಹಿರೇಬಗನಾಳ ಗ್ರಾಮಸ್ಥರೆಲ್ಲರೂ ಸೇರಿದ್ದರು. ಇದೇ ವೇಳೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕೆಲವರು (ಹಿರೇಕಾಸನಕಂಡಿ ಗ್ರಾಮಸ್ಥರು) ಹಿರೇಬಗನಾಳ ಗ್ರಾಮಕ್ಕೆ ಆಗಮಿಸಿದ್ದರು. ಇದನ್ನು ಅರಿತ ಹಿರೇಬಗನಾಳ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಕಾರ್ಖಾನೆ ಬೇಕೇಬೇಕು, ನಾವು ಅಲ್ಲಿಯೇ ಕೆಲಸ ಮಾಡುತ್ತೇವೆ ಎಂದೆಲ್ಲ ವಾದಿಸಲು ಮುಂದಾದಾಗ ಅಟ್ಟಾಡಿಸಿ ಓಡಿಸಿದ ಪ್ರಸಂಗ ನಡೆಯಿತು.
ಅಧ್ಯಕ್ಷರೆದರು ವಾಗ್ವಾದ: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅಹವಾಲು ಸ್ವೀಕಾರ ಮಾಡುತ್ತಿರುವ ವೇಳೆಯಲ್ಲಿಯೂ ಗಲಾಟೆಯಾಯಿತು. ಹಿರೇಕಾಸನಕಂಡಿ ಗ್ರಾಮದ ದೇವರಾಜ ಎನ್ನುವವರು ಮನವಿ ಸಲ್ಲಿಸಿ, ಮಾತನಾಡಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದಲ್ಲದೇ ನೂಕಾಟ,ತಳ್ಳಾಟವೂ ನಡೆಯಿತು.