ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಾದೇಶ್ವರ ಬೆಟ್ಟ ಮುಖ್ಯರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣಕ್ಕೆ ಕೌದಳ್ಳಿ ಗ್ರಾಮಸ್ಥರು ಸಹಮತ ವ್ಯಕ್ತ ಪಡಿಸಿರುವುದು ಮತಷ್ಟು ಶಕ್ತಿ ಬಂದಂತಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.ತಾಲೂಕಿನ ಕೌದಳ್ಳಿ ಗ್ರಾಪಂ ಆವರಣದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಸಂಬಂಧ ಕೌದಳ್ಳಿ ಗ್ರಾಮಸ್ಥರಿಂದ ಸಮಗ್ರ ಮಾಹಿತಿ ಪಡೆದು ಮಾತನಾಡಿದ ಅವರು, ಮಾದಪ್ಪನ ದಯೆಯಿಂದ ಕ್ಷೇತ್ರದ ಜನರು ನನಗೊಂದು ಅವಕಾಶ ನೀಡಿದ್ದು ಆ ಋಣ ತೀರಿಸಲು ಇವರೆಗೂ ಕ್ಷೇತ್ರದಲ್ಲಿ ಆಗದಿರುವಂತ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಜನರ ಅಪೇಕ್ಷೆಯಾಗಿದೆ. ಅದಕ್ಕಾಗಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಕ್ಷೇತ್ರದ ಜನತೆಯ ಸಹಕಾರದಿಂದ ಇನ್ನಷ್ಟು ಚೈತನ್ಯ ಬಂದಿದೆ ಎಂದರು.ತಾಲೂಕಿನಲ್ಲಿ ಕೌದಳ್ಳಿ ಗ್ರಾಮ ಪ್ರಮುಖ ಹಾಗೂ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದ್ದು ಸಮರ್ಪಕ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಅಲ್ಲದೆ ಸ್ವಚ್ಛತೆಯು ಸಹ ಮರೀಚಿಕೆಯಾಗಿದೆ. ಈಗ ರಸ್ತೆ ಅಗಲೀಕರಣ ಯೋಗ ಕೂಡಿ ಬಂದಿದ್ದು ಹನೂರಿನಿಂದ ಮ.ಬೆಟ್ಟ ತನಕ ನಂತರ ಪಾಲಾರ್ ವರೆಗೂ 70 ಕಿ.ಮಿ. ಕೆಶಿಫ್ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಒಟ್ಟಿನಲ್ಲಿ ರಾಜ್ಯಾದ್ಯಂತ ಕೆ.ಶಿಫ್ ಯೋಜನೆಯಡಿ 2.5 ಸಾವಿರ ಕಿ.ಮೀ. ರಸ್ತೆ ನಿರ್ಮಾಣ ಮಾಡಲು ತಯಾರಿ ನಡೆದಿದೆ ಎಂದರು.
ರಸ್ತೆ ಆಗಲೀಕಾರಣಕ್ಕೆ ಅರಣ್ಯ ಇಲಾಖೆಯಿಂದ ಇಷ್ಟು ಜಾಗ ಬೇಕಾಗುತ್ತದೆ. ಎಷ್ಟೊಂದು ಮರ ಗಿಡಗಳು ತೆಗೆಯಬೇಕಾಗುತ್ತದೆ. ಎಂಬುದನ್ನು ಸರ್ವೇ ಮಾಡಿ ಸರ್ಕಾರದಿಂದ ಅನುಮತಿ ಪಡೆಯಲಾಗುತ್ತದೆ. ಹಾಗೆಯೇ ಕೌದಳ್ಳಿ ಮುಖ್ಯರಸ್ತೆಯಲ್ಲಿ ಸರ್ಕಾರಿ ಜಾಗ ಹೊರತುಪಡಿಸಿ ಗ್ರಾಮಸ್ಥರ ಅಂಗಡಿ ಮುಂಗಟ್ಟು ಮನೆಗಳು ನಿವೇಶನ ತೆರವು ಮಾಡಿ ರಸ್ತೆ ಅಗಲೀಕರಣಕ್ಕೆ ನಿಮ್ಮೆಲ್ಲರ ಒಪ್ಪಿಗೆ ಸಹಮತ ಅಗತ್ಯವಾಗಿದೆ.ಅಲ್ಲದೆ ಈ ರಸ್ತೆ ಅಂತಾರಾಷ್ಟ್ರೀಯ ಹೆದ್ದಾರಿ ಆಗಬೇಕು ಎನ್ನುವುದು ನನ್ನ ಆಸೆಯಾಗಿದೆ. ಯಾವುದೇ ದೊಡ್ಡ ಕಾರ್ಖಾನೆ ಮಾಡಬೇಕಾದರೆ ನ್ಯಾಷನಲ್ ಹೈವೇ ಇದೆಯೇ ಎಂದು ಕೇಳುತ್ತಾರೆ. ಅಂತಾರಾಷ್ಟ್ರೀಯ ರಸ್ತೆ ಇದ್ದರೆ ಕಾರ್ಖಾನೆ ನಿರ್ಮಿಸಲು ಅನುಕೂಲವಾಗುತ್ತದೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ ಎಂದರು.
ರಸ್ತೆಯ ಎರಡು ಬದಿಗಳಲ್ಲಿ ಎರಡು ಬಸ್ಸುಗಳು ಹೋಗುವುದು. ಅಲ್ಲದೆ ಒಳ ಚರಂಡಿ ಫುಟ್ಬಾತ್ ಜಾಗಗಳು ವಿಶಾಲವಾಗಿ ಇರಬೇಕಾಗುತ್ತದೆ. ಸರ್ಕಾರಿ ಜಾಗ ಬಿಟ್ಟು ಇನ್ನುಳಿದ ಖಾಸಗಿ ವ್ಯಕ್ತಿಗಳ ಜಾಗಕ್ಕೆ ಸರ್ಕಾರ ನಿಗದಿಪಡಿಸಿರುವ ಖಾಲಿ ಜಾಗ ಮನೆ ವಾಣಿಜ್ಯ ಅಂಗಡಿ ಮಳಿಗೆ ಬಾಡಿಗೆದಾರರು ಇರುವುದರ ಆಧಾರದ ಮೇಲೆ ಹಣ ದೊರೆಯಲಿದೆ ಎಂದರು.ಈ ವೇಳೆ ತಾಪಂ ಇಒ ಉಮೇಶ್ ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಎಇ ಮಹೇಶ್, ಪಿಡಿಒ ಆಕಾಶ್, ಗ್ರಾಪಂ ಸದಸ್ಯರು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.