ರಸ್ತೆ ಮುಚ್ಚಿ ವ್ಯಕ್ತಿಯಿಂದ ತೊಂದರೆ: ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ

| Published : Nov 04 2025, 12:15 AM IST

ರಸ್ತೆ ಮುಚ್ಚಿ ವ್ಯಕ್ತಿಯಿಂದ ತೊಂದರೆ: ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡುಗದೊರೆ ಗ್ರಾಮದ ಸರ್ವೇ ನಂಬರ್ 351ರಲ್ಲಿ ಅಕ್ರಮವಾಗಿ ತಂತಿಬೇಲಿ ಹಾಕಿರುವುದರಿಂದ ಸುಮಾರು 40ಕ್ಕೂ ಹೆಚ್ಚು ಪರಿಶಿಷ್ಟ ಜನಾಂಗದ ಕುಟುಂಬ ಈ ಹಿಂದಿನಿಂದಲೂ ಸ್ಮಶಾನ ಸೋಪಾನಕಟ್ಟೆ, ಜಾನುವಾರುಗಳ ಒಡಾಟಕ್ಕೆ ಮತ್ತು ಜಮೀನಿಗೆ ತೆರಳಲು ಬಳಸುತಿದ್ದ ನಮ್ಮ ಸಮುದಾಯದವರು ದಿನತಿತ್ಯ ಚಟುವಟಿಕೆಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪರಿಶಿಷ್ಟ ಜಾತಿ ಜನಾಂಗದವರು ಸ್ಮಶಾನ, ಸೋಪಾನಕಟ್ಟೆ, ಜಾನುವಾರುಗಳ ಓಡಾಟಕ್ಕೆ ಮತ್ತು ಜಮೀನಿಗೆ ತೆರಳುವ ರಸ್ತೆಯನ್ನು ವ್ಯಕ್ತಿಯೊಬ್ಬರು ಮುಚ್ಚಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮುಂಡುಗದೊರೆ ಗ್ರಾಮಸ್ಥರು ಪಟ್ಟಣದಲ್ಲಿ ಆಹೋರಾತ್ರಿ ಅನಿರ್ದಿಷ್ಟಾವದಿ ಧರಣಿ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಅವಕಾಶ ವಂಚಿತ ಸಮುದಾಯಗಳ ವೇದಿಕೆ ಹಾಗೂ ಗ್ರಾಮಸ್ಥರು ಸೇರಿ ತಹಸೀಲ್ದಾರ್ ಹಾಗೂ ತಾಲೂಕು ಆಡಳಿದ ವಿರುದ್ಧ ಅಕ್ರೋಶ ಹೊರ ಹಾಕಿದರು. ಗ್ರಾಮಕ್ಕೆ ಬೇಕಾಗಿರುವ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು.

ಗ್ರಾಮದ ಸರ್ವೇ ನಂಬರ್ 351ರಲ್ಲಿ ಅಕ್ರಮವಾಗಿ ತಂತಿಬೇಲಿ ಹಾಕಿರುವುದರಿಂದ ಸುಮಾರು 40ಕ್ಕೂ ಹೆಚ್ಚು ಪರಿಶಿಷ್ಟ ಜನಾಂಗದ ಕುಟುಂಬ ಈ ಹಿಂದಿನಿಂದಲೂ ಸ್ಮಶಾನ ಸೋಪಾನಕಟ್ಟೆ, ಜಾನುವಾರುಗಳ ಒಡಾಟಕ್ಕೆ ಮತ್ತು ಜಮೀನಿಗೆ ತೆರಳಲು ಬಳಸುತಿದ್ದ ನಮ್ಮ ಸಮುದಾಯದವರು ದಿನತಿತ್ಯ ಚಟುವಟಿಕೆಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ ಎಂದರು.

ಈ ವಿಷಯವಾಗಿ ಕಳೆದ ಅ.21ರಂದು ಪ್ರತಿಭಟನೆ ಮೂಲಕ ತಾಲೂಕು ದಂಡಾಧಿಕಾರಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಜೊತೆಗೆ ಶಾಸಕರು ಸಹ ತುರ್ತಾಗಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ತೆರವು ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು.

ಸರ್ಕಾರ ಸಾರ್ವಜನಿಕರ ಉಪಯೋಗಕ್ಕಾಗಿ ನಬಾರ್ಡ್ ಯೋಜನೆಯಡಿ ದೊಡ್ಡಪಾಳ್ಯದಿಂದ ಟಿ.ಎಂ.ಹೊಸೂರು ಮೈಸೂರು, ಬೆಂಗಳೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಲಾಗಿದ್ದ ಡಾಂಬರ್ ರಸ್ತೆಯನ್ನು ಕಾನೂನು ಬಾಹಿರವಾಗಿ ಅಗೆದಿದ್ದಾರೆ ಎಂದು ದೂರಿದರು.

ಅಕ್ರಮವಾಗಿ ಜಮೀನು ಮಾಡಿಕೊಂಡಿರುವ ದೊಡ್ಡಪಾಳ್ಯ ಗ್ರಾಮದ ನಿವಾಸಿ ಹೀರೆಗೌಡ (ನಾಗೇಂದ್ರ) ಪಟೇಲ್ ರಾಮೇಗೌಡ ಎಂಬ ವ್ಯಕ್ತಿಯ ರಕ್ಷಣೆಗೆ ತಾಲೂಕು ಆಡಳಿತ ನಿಂತಿರುವ ಅನುಮಾನ ಕಾಡುತ್ತಿದೆ. ರಸ್ತೆ ಅಗೆದಿರುವುದರಿಂದ ನಿತ್ಯ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಜೊತೆಗೆ ಗ್ರಾಮಕ್ಕೆ ಕೂಡಲೇ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಆಗ್ರಹಿಸಿದರು.

ಕೂಡಲೇ ರಸ್ತೆಗೆ ಹಾಕಲಾಗಿರುವ ತಂತಿಬೇಲಿ ತೆರವುಗೊಳಿಸಬೇಕು. ಜೊತೆಗೆ ಅವರ ಮೇಲೆ ಪ್ರಜಾ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು. ಅಲ್ಲಿಯವರೆವಿಗೂ ಅಹೋರಾತ್ರಿ ಆನಿರ್ದಿಷ್ಟಾವದಿ ಧರಣಿಯನ್ನು ನಡೆಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಶ್ರೀಕಂಠಯ್ಯ, ಕೇಶವಮೂರ್ತಿ, ಮರಳಗಾಲ ಸುರೇಶ್, ಮೋಹನ್, ವಡಿಯಾಂಡನಹಳ್ಳಿ ಗೋವಿಂದರಾಜು, ರಮೇಶ್‌, ರಾಮಲಿಂಗು ಸೇರಿದಂತೆ ಮುಂಡುಗದೊರೆ ಗ್ರಾಮಸ್ಥರು ಇದ್ದರು.