ಕಳೆದ ಮೂರು ತಿಂಗಳಿಂದ ಕುಡಿಯುವ ಹಾಗೂ ಬಳಕೆ ನೀರಿಗಾಗಿ ಪರದಾಟ ನಡೆಸುತ್ತಿದ್ದು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ನಿವಾರಣೆಯಲ್ಲಿ ನಿರ್ಲಕ್ಷ್ಯವಹಿಸಿದ್ದಾರೆಂದು ತಾಲೂಕಿನ ಕಡಮಲಕುಂಟೆ,ಓಬಳಾಪುರ ಹಾಗೂ ವದನಕಲ್ಲು ಗ್ರಾಪಂಗಳ ವ್ಯಾಪ್ತಿಯ ವಿವಿಧ ಅರೋಪಿಸಿದ್ದಾರೆ.
ನಾಗೇಂದ್ರ ಜೆ. ಕನ್ನಡಪ್ರಭ ವಾರ್ತೆ ಪಾವಗಡ
ಕಳೆದ ಮೂರು ತಿಂಗಳಿಂದ ಕುಡಿಯುವ ಹಾಗೂ ಬಳಕೆ ನೀರಿಗಾಗಿ ಪರದಾಟ ನಡೆಸುತ್ತಿದ್ದು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ನಿವಾರಣೆಯಲ್ಲಿ ನಿರ್ಲಕ್ಷ್ಯವಹಿಸಿದ್ದಾರೆಂದು ತಾಲೂಕಿನ ಕಡಮಲಕುಂಟೆ,ಓಬಳಾಪುರ ಹಾಗೂ ವದನಕಲ್ಲು ಗ್ರಾಪಂಗಳ ವ್ಯಾಪ್ತಿಯ ವಿವಿಧ ಅರೋಪಿಸಿದ್ದಾರೆ.ಬೇಸಿಗೆ ಕಾಲ ಸಮೀಪಿಸಿದ್ದು ತುಂಗಭದ್ರಾ ನೀರು ಸರಬರಾಜು ಆಗುತ್ತಿದೆ. ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಟ್ಯಾಂಕ್ ಗಳಿಂದ ನೀರು ಸರಿಯಾಗಿ ಪೂರೈಕೆ ಆಗದೆ, ಕೊಡಮಡಗು ಗ್ರಾಪಂ ವ್ಯಾಪ್ತಿಯ ಕಡಮಲಕುಂಟೆ, ರಂಗಸಮುದ್ರ ಗ್ರಾಪಂ ವ್ಯಾಪ್ತಿಯ ಓಬಳಾಪುರ ಹಾಗೂ ವದನಕಲ್ಲು ಗ್ರಾಪಂನ ವದನಕಲ್ಲು, ಜೂಲಪ್ಪಯ್ಯನಪಾಳ್ಯ, ಹೊಟ್ಡೆಬೊಮ್ಮನಹಳ್ಳಿ ಇತರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಮನೆಮನೆ ನಲ್ಲಿ ಅಳವಡಿಕೆಯ ತುಂಗಭದ್ರಾ ನೀರು ಒಂದು ಗಂಟೆ ಮಾತ್ರ ಬಿಟ್ಟು ತದ ನಂತರ ಸ್ಥಗಿತಗೊಳಿಸುತ್ತಿದ್ದಾರೆ. ಕೊಳಾಯಿಗಳಲ್ಲಿ ಬಿಡುವ ನೀರು ಅತ್ಯಂತ ಸಣ್ಣದಾಗಿ ಬರುತ್ತಿದ್ದು ಒಂದು ಬಿಂದಿಗೆ ತುಂಬಲು ಕನಿಷ್ಠ 15ನಿಮಿಷ ಸಮಯ ತೆಗೆದುಕೊಳ್ಳದೆ ಹೀಗಾದರೆ ಹೇಗೆ ನಾವು ಜೀವನ ನಡೆಸಬೇಕೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.ತಾಲೂಕಿನ ಕಸಬಾ ಹೋಬಳಿಯ ಕೊಡಮಡಗು ಗ್ರಾಪಂನ ಕಡಮಲಕುಂಟೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಪಕ್ಕದಲ್ಲಿನ ಆಂಧ್ರ ಪ್ರದೇಶದ ರೊದ್ದಂ ಮೂಲದ ವ್ಯಕ್ತಿಯೊಬ್ಬ ದಿನ ನಿತ್ಯ ಸರಬರಾಜು ಮಾಡುತ್ತಿದ್ದು ವಾಟರ್ ಟ್ಯಾಂಕ್ ನೀರು ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮತ್ತು ಒಳ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳ ಮುಂದೆ ನೀರು ಹೊರ ಚೆಲ್ಲುತ್ತಿರುವುದರಿಂದ ರಸ್ತೆ ಜಲಾವೃತವಾಗಿದ್ದು, ಸೊಳ್ಳೆ ಹಾಗೂ ಕ್ರಿಮಿ ಕೀಟಗಳ ಹಾವಳಿಗೆ ತತ್ತರಿಸಿದ್ದೇವೆ. ಇಲ್ಲಿನ ಬಹುತೇಕ ಜನರು ಈಗಾಗಲೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಕೊಡಮಡಗು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ದಾದಲೂರಿ ಎಂಬುವರಿಗೆ ಮನವಿ ಪತ್ರ ಸಲ್ಲಿಸಿದ್ದು ಸಮಸ್ಯೆ ನಿವಾರಣೆಯಲ್ಲಿ ವಿಫಲರಾದ ಪರಿಣಾಮ ನೀರಿನ ಅಭಾವ ತಲೆದೊರಿದೆ. ಗ್ರಾಪಂನ 15ನೇ ಹಣಕಾಸು ಯೋಜನೆ ಅಡಿಯಲ್ಲಿ 5ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು ಕಾಮಗಾರಿ ಕೈಗೊಳ್ಳದ ಕಾರಣ ಎಸ್ಸಿ ಕಾಲೋನಿ ಕೊಳಚೆ ಪ್ರದೇಶವಾಗಿ ನಿರ್ಮಾಣಗೊಂಡಿದೆ. ಈ ಸಂಬಂಧ ತಾಪಂ ಇಒ ಮಧುಸೂದನ್ ಮನವಿ ಸಲ್ಲಿಸಿ ಒಂದುವರೆ ತಿಂಗಳು ಕಳೆದರೂ ಸೂಕ್ತ ಕ್ರಮ ಜರುಗಿಸಿ ಸಮಸ್ಯೆ ಬಗೆಹರಿಸಲು ವಿಫಲರಾಗಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನೂ ಈ ಬಗ್ಗೆ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ತಾಳೇಮರದಹಳ್ಳಿ ಗೋವಿಂದಪ್ಪ, ಕಡಮಲಕುಂಟೆ ಗೋವಿಂದಪ್ಪ, ಚಿದಾನಂದರೆಡ್ಡಿ, ಮಾರುತಿ ಕೆ. ಎನ್.ಗುರುಮೂರ್ತಿ ಎನ್, ನರೇಶ್ ಟಿ,ಹರೀಶ್ ಎಚ್. ಗಣೇಶ್. ನಾಗೇಂದ್ರ ಡಿ. ರಮೇಶ್ ಇತರರು ಒತ್ತಾಯಿಸಿದ್ದಾರೆ.