ಡಂಬಳ: ಹೋಬಳಿ ವ್ಯಾಪ್ತಿಯ ಮೇವುಂಡಿ ಗ್ರಾಮದ ಸಮೀಪದ ಮುಖ್ಯ ರಸ್ತೆಯಲ್ಲಿ ಸ್ಥಾಪಿಸಿದ್ದ ಶಿಬಾರಗಟ್ಟಿಯಲ್ಲಿ ತ್ರಿಶೂಲವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಿಬಾರಗಟ್ಟಿ ತ್ರಿಶೂಲವು ಸ್ಥಳೀಯರ ಭಕ್ತಿ ಮತ್ತು ಧಾರ್ಮಿಕ ನಂಬಿಕೆಯ ಸಂಕೇತವಾಗಿದ್ದು, ಅದನ್ನು ಧ್ವಂಸಗೊಳಿಸಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮೇವುಂಡಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 24ರಂದು ಡಾ. ರಾಜ್‌ಕುಮಾರ್ ಜನ್ಮದಿನಾಚರಣೆ
ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏ. 24ರಂದು ಬೆಳಗ್ಗೆ 11ಕ್ಕೆ ವರನಟ ಡಾ. ರಾಜ್‌ಕುಮಾರ್ ಜನ್ಮದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ರೋಣ ಶಾಸಕ ಜಿ.ಎಸ್. ಪಾಟೀಲ, ಸಂಸದರಾದ ಬಸವರಾಜ ಬೊಮ್ಮಾಯಿ, ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಡಿ.ಆರ್. ಪಾಟೀಲ ಇತರರು ಪಾಲ್ಗೊಳ್ಳುವರು. ಕಲಾವಿದ ಗೌಡಪ್ಪ ಬೊಮ್ಮಪ್ಪನವರ ಮತ್ತು ಕಲಾ ತಂಡದವರಿಂದ ಡಾ. ರಾಜಕುಮಾರ್ ಚಿತ್ರಗೀತೆಗಳ ಗಾಯನ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.