ಹೆಬ್ಬಾಳು ಗ್ರಾಪಂ ಅವ್ಯವಹಾರ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ

| Published : Apr 03 2025, 12:30 AM IST

ಸಾರಾಂಶ

ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಕೇಳಲು ಹೋದರೆ ಅಧ್ಯಕ್ಷ ಮತ್ತು ಪಿಡಿಒ ಸಾರ್ವಜನಿಕರೊಂದಿಗೆ ಉಡಾಫೆ ಉತ್ತರ ನೀಡುತ್ತಿದ್ದು, ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಪಿಡಿಒ ಅವರನ್ನು ಅಮಾನತು ಮಾಡಬೇಕು ಎಂದು ದೊಡ್ಡಬ್ಯಾಡಿಗೆರೆ ಗ್ರಾಮಸ್ಥರು ಪಂಚಾಯಿತಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಕೇಳಲು ಹೋದರೆ ಅಧ್ಯಕ್ಷ ಮತ್ತು ಪಿಡಿಒ ಸಾರ್ವಜನಿಕರೊಂದಿಗೆ ಉಡಾಫೆ ಉತ್ತರ ನೀಡುತ್ತಿದ್ದು, ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಪಿಡಿಒ ಅವರನ್ನು ಅಮಾನತು ಮಾಡಬೇಕು ಎಂದು ದೊಡ್ಡಬ್ಯಾಡಿಗೆರೆ ಗ್ರಾಮಸ್ಥರು ಪಂಚಾಯಿತಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದೊಡ್ಡಬ್ಯಾಡಿಗೆರೆ ಯುವ ಮುಖಂಡ ಪೂರ್ಣೇಶ್ ಮತ್ತು ತಿಲಕ್ ಮಾತನಾಡಿ, ಕಳೆದ ಮೂರು ವರ್ಷದ ಹಿಂದೆ ಕುಡಿಯುವ ನೀರಿನ ಅಭಾವ ಇರುವ ಸಂದರ್ಭದಲ್ಲಿ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ಇವರ ಕೊಳವೆಬಾವಿಯಲ್ಲಿ ಗ್ರಾಮಕ್ಕೆ ನೀರು ಪಡೆದಿದ್ದು ಮತ್ತು ಹಣವನ್ನು ಪಂಚಾಯಿತಿಯಿಂದ ನೀಡಲಾಗಿದೆ. ಅದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ತಮ್ಮ ಭೂಮಿಗೆ ನೀರನ್ನು ಬಳಕೆ ಮಾಡುವ ಬಗ್ಗೆ ಕೆಲ ಗ್ರಾಮಸ್ಥರು ಪಿಡಿಒ ಅವಿನಾಶ್‌ಗೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಪಿಡಿಒ ದೂರುದಾರನ್ನು ಗೌಪ್ಯದಿಂದ ಇಡದೇ, ಹಾಲಿ ಅಧ್ಯಕ್ಷರು ಮತ್ತು ನಮಗೂ ಕಿತ್ತಾಟಕ್ಕೆ ಕಾರಣವಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ಅಶಾಂತಿ ಮೂಡಿದೆ. ಪಂಚಾಯಿತಿಯಿಂದ ಬರುವ ಬಹುತೇಕ ಸರ್ಕಾರಿ ಸವಲತ್ತುಗಳನ್ನು ಅಧ್ಯಕ್ಷರು ದುರುಪಯೋಗ ಪಡಿಸಿಕೊಂಡು ಗ್ರಾಮಕ್ಕೆ ಯಾವುದೇ ಕೆಲಸ ಮಾಡುತ್ತಿಲ್ಲ, ಕೆರೆ ಅಭಿವೃದ್ಧಿ ಬಗ್ಗೆ ಬೇಕಾಬಿಟ್ಟಿ ಕಾಮಗಾರಿ ನಡೆಸಿ ಹಣ ಪಡೆದಿದ್ದಾರೆ. ಈ ಬಗ್ಗೆ ಅಧ್ಯಕ್ಷರನ್ನು ಪ್ರಶ್ನಿಸಿದರೆ ಉಡಾಫೆಯಿಂದ ಮಾತನಾಡುತ್ತಾರೆ ಎಂದು ದೂರಿದರು.

ದೊಡ್ಡಬ್ಯಾಡಿಗೆರೆ ಗ್ರಾಮದ ಉಮೇಶ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೊಟ್ಟಿಗೆ, ಶೌಚಾಲಯ, ಇಂಗುಗುಂಡಿ, ಕುರಿಶೆಡ್, ರಸ್ತೆ ಕಾಮಗಾರಿ, ಕೃಷಿ ಹೊಂಡ ಕೆಲ ಕಾಮಗಾರಿ ನಡೆದಿಲ್ಲ, ಅದರೂ ಬಿಲ್‌ ಪಾವತಿಯಾಗಿದೆ. ಬಡವರಿಗೆ ಬಂದ ಆಶ್ರಯ ಮನೆಗಳು ಉಳ್ಳವರ ಪಾಲಾಗಿದೆ. ೧೫ನೇ ಹಣಕಾಸಿನ ಬಗೆ ನಿಖರವಾದ ಮಾಹಿತಿ ನೀಡುತ್ತಿಲ್ಲ, ಗುಣಮಟ್ಟವಿಲ್ಲದ ಕೊಳವೆಬಾವಿ ಸಾಮಗ್ರಿಗಳನ್ನು ಖರೀದಿಸಿ, ಬಿಲ್‌ಗೆ ದುಬಾರಿ ಬರೆಯುತ್ತಿದ್ದಾರೆ. ಹಳೆಯ ಕೊಳವೆಬಾವಿ ಪೈಪ್‌ಗಳನ್ನು ಇಲ್ಲಿನ ಜನಪ್ರತಿನಿಧಿಗಳು ಹಂಚಿಕೊಳ್ಳುತ್ತಾರೆ. ಪಂಚಾಯಿತಿಯಲ್ಲಿ ಇ-ಸೊತ್ತು ಮಾಡಲು ಸಾವಿರಾರು ರು.ಗಳನ್ನು ಇಲ್ಲಿನ ಅಧಿಕಾರಿಗಳು ಕೇಳುತ್ತಾರೆ. ಹೆಬ್ಬಾಳು ಗ್ರಾಮ ಪಂಚಾಯತ್‌ ಅವ್ಯವಹಾರದ ಜೊತೆಗೆ ಭ್ರಷ್ಟಾಚಾರ ಕೂಪವಾದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಲಾಗಿದ್ದು, ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೊನ್ನೇಗೌಡ, ಸುರೇಶ್, ವೀರಭದ್ರಶೆಟ್ಟಿ, ಪುನೀತ್, ರವಿ, ದರ್ಶನ್, ಜಗದೀಶ್, ಮಂಜುಳಾ, ಶಿವಪ್ಪ, ಮರುಳಿ, ಧರ್ಮಶೆಟ್ಟಿ, ರೈತ ಮುಖಂಡರಾದ ಮನು, ಪಾಪಣ್ಣ, ಗಿರೀಶ್ ಇತರರು ಇದ್ದರು.