ಸಾರಾಂಶ
ಕನ್ನಡಪ್ರಭ ವಾರ್ತೆ, ಆಲೂರು
ತಾಲೂಕಿನ ಹೊಸಮಠ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಬಗೆಹರಿಯದ ಸಮಸ್ಯೆಯಾಗಿದ್ದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಹೊಸಮಠ ಗ್ರಾಮದ ಮಹಿಳೆಯರು ಗಣಿಗಾರಿಕೆ ನಡೆಸದಂತೆ ವಾಹನ ತಡೆದು ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಗಲಾಟೆಯಾಗಿ ಮಹಿಳೆ ಮೇಲೆ ಹಲ್ಲೆಯಾಗಿತ್ತು. ಗುರುವಾರ ತಾಲೂಕು ಉವಿಭಾಗಧಿಕಾರಿ ಶೃತಿ ತಾಲೂಕು ಪ್ರಭಾರಿ ದಂಡಾಧಿಕಾರಿ ಪೂರ್ಣಿಮ ಹಾಗೂ ಸಿಪಿಐ ಗಂಗಾಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಣಿಗಾರಿಕೆ ನಡೆಸುತ್ತಿರುವವರ ಹಾಗೂ ಗ್ರಾಮಸ್ಥರ ಮನವೊಲಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿಯ ಸಮಸ್ಯೆಯನ್ನು ಕುಲ ಅಂಕುಶವಾಗಿ ಪರಿಶೀಲಿಸಿದರು. ನಂತರ ಎರಡು ಗುಂಪುಗಳ ಗ್ರಾಮಸ್ಥರ ಹಾಗೂ ಕಲ್ಲು ಗಣಿಗಾರಿಕೆಯವರ ವಾದ ವಿವಾದ ಆಲಿಸಿ ಮಾತನಾಡಿ, ಈಗಾಗಲೇ ಕಲ್ಲು ಗಣಿಗಾರಿಕೆ ಮಾಡುತ್ತಿರುವವರು ಎಲ್ಲಾ ರೀತಿಯ ಅನುಮತಿಯನ್ನು ಪಡೆದುಕೊಂಡಿದ್ದು ಕೆಲಸ ಮಾಡುತ್ತಿದ್ದಾರೆ. ಆದರೆ ಯಾವುದೇ ಯಂತ್ರೋಪಕಣಗಳನ್ನು ಬಳಸದೆ ಕೈಯಲ್ಲಿ ಹೊಡೆಯಲು ಮಾತ್ರ ಅವಕಾಶವಿದೆ ಅಷ್ಟೇ. ಆದರೆ ನೀವು ಅವರ ಕೆಲಸಕ್ಕೆ ಅಡ್ಡಿ ಪಡಿಸುತ್ತಿರುವುದು ಸರಿಯಿಲ್ಲ. ಅವರಿಗೂ ಕೂಡ ಕುಟುಂಬಗಳಿವೆ. ಇದನ್ನೇ ನಂಬಿ 200ಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಕೆಲಸ ಮಾಡಲು ಬಿಡಿ ಎಂದು ಸ್ಥಳೀಯರನ್ನು ಒತ್ತಾಯಿಸಿದರು.
ಭೋವಿ ಸಮಾಜದ ರಾಜ್ಯಾಧ್ಯಕ್ಷ ಮಂಜಪ್ಪ ಮಾತಾನಾಡಿ, ಅಲೆಮಾರಿ ಜನಾಂಗದವರಾದ ನಾವು ಕಲ್ಲನ್ನೇ ನಂಬಿ ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿದ್ದು, ಇದೇ ನಮಗೆ ಅಧಾರವಾಗಿದೆ. ಕಲ್ಲು ಗಣಿಗಾರಿಕೆ ನಡೆಸಲು ಎಲ್ಲಾ ರೀತಿಯ ಅನುಮತಿ ಪಡೆದುಕೊಂಡಿದ್ದರೂ ಸಹ ನಮಗೆ ಗ್ರಾಮಸ್ಥರು ಅನಾವಶ್ಯಕವಾಗಿ ತೊಂದರೆ ಕೊಡುತ್ತಿದ್ದಾರೆ. ಇಲ್ಲಿಯ ಗ್ರಾಮಸ್ಥರು ನಮಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಟ್ಟರೆ ಮಾತ್ರ ಕೆಲಸ ಮಾಡಲು ಬಿಡುತ್ತೇವೆ ಇಲ್ಲ ಬಿಡುವುದಿಲ್ಲವೆಂದು ನಮ್ಮ ಗಣಿ ಮಾಲೀಕರಿಗೆ ತೊಂದರೆ ಕೊಡುತ್ತಿದ್ದಾರೆ. ಪ್ರತಿ ತಿಂಗಳು ಮೂವತ್ತು ಸಾವಿರ ಕೇಳುತ್ತಾರೆ. ಆದರೆ ನಾವು ಕೊಡಲು ಒಪ್ಪದಿದ್ದಾಗ ಈ ರೀತಿಯ ಪ್ರತಿಭಟನೆ ಮಾಡಿ ಕೆಲಸ ನಿಲ್ಲಿಸುತ್ತಾರೆಂದು ಗ್ರಾಮಸ್ಥರ ಮೇಲೆ ಆರೋಪ ಮಾಡಿದರು.ಗ್ರಾಮಸ್ಥರಾದ ದ್ರಾಕ್ಷಹಿಣಿ ಮಾತನಾಡಿ, ನಮ್ಮ ಗ್ರಾಮಕ್ಕೆ ಬಂದ ಎಸಿ ಹಾಗೂ ತಹಸೀಲ್ದಾರ್ ನಮ್ಮ ಸಮಸ್ಯೆ ತೊಂದರೆ ಕೇಳುತ್ತಿಲ್ಲ. ಎಲ್ಲಾ ಅವರ ಪರವಾಗಿಯೇ ಮಾತನಾಡುತ್ತಿದ್ದಾರೆ. ನಮ್ಮ ಊರಿಗೆ ಆಗುತ್ತಿರುವ ಅನ್ಯಾಯವನ್ನು ಯಾರು ಕೇಳುತ್ತಿಲ್ಲ. ಗ್ರಾಮದ ರಸ್ತೆಗಳೆಲ್ಲ ವಾಹನಗಳು ಓಡಾಡಿ ಗುಂಡಿ ಬಿದ್ದು ಹಾಳಾಗಿದೆ. ಶಾಲೆ ವಾಹನ ಕೂಡ ಬರುತ್ತಿಲ್ಲ. ರಸ್ತೆಯಲ್ಲಿ ಲಾರಿಗಳಲ್ಲಿ ಓವರ್ ಲೋಡ್ ಹಾಕಿಕೊಂಡು ಜೋರಾಗಿ ಹೋಗುತ್ತಾರೆ. ರಸ್ತೆಯಲ್ಲಿನ ಧೂಳ್ ಮನೆಗೆ ಬರುತ್ತದೆ. ಇದರಿಂದ ಮಕ್ಕಳಿಗೆ ವಯಸ್ಸಾದವರಿಗೆ ಉಸಿರಾಟದ ತೊಂದರೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.