ಕನ್ನಡಪ್ರಭ ವಾರ್ತೆ ಮದ್ದೂರು

ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಗ್ರಾಪಂ ಅನ್ನು ಸೇರ್ಪಡೆ ಮಾಡುವ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಮುನ್ನವೇ ಅನಧಿಕೃತವಾಗಿ ರಚನೆಯಾಗಿರುವ ನಗರಸಭೆ ಕೆಲಸ ಕಾರ್ಯಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿ ಗ್ರಾಮ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮದ ಉಳಿವಿಗಾಗಿ ಗ್ರಾಪಂ ಕಚೇರಿ ಎದುರು ಕಳೆದ 93 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಹಾಗೂ ಗ್ರಾಮಸ್ಥರು ರೈತಪರ ಹೋರಾಟಗಾರ್ತಿ ಸುನಂದಾ ಜಯರಾಂ ನೇತೃತ್ವದಲ್ಲಿ ಗ್ರಾಮದ ಮನೆ ಮನೆಗೆ ತೆರಳಿ ಹಸ್ತ ಪ್ರತಿಗಳನ್ನು ಹಂಚುವ ಮೂಲಕ ಮಾಡು ಇಲ್ಲವೇ ಮಡಿ ನಿಲುವಿನ ಪ್ರತಿಜ್ಞೆ ಸ್ವೀಕರಿಸಿದರು.

ಕ್ಷೇತ್ರದ ಶಾಸಕರ ಆಮಿಷ ಮತ್ತು ತಮ್ಮ ವೈಯಕ್ತಿಕ ಸ್ವಾರ್ಥಕ್ಕೆ ಬಲಿಯಾಗಿರುವ ಕೆಲವು ಶಾಸಕರ ಚೇಲಾಗಳು ಗ್ರಾಮಸ್ಥರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಮದ್ದೂರು ನಗರ ಸಭೆಗೆ ಭೇಟಿ ನೀಡಬಾರದು. ಗೆಜ್ಜಲಗೆರೆ ಗ್ರಾಪಂ ಉಳಿದುಕೊಳ್ಳಲು ಬೆಂಬಲ ನೀಡಬೇಕು. ಮುಂದಿನ ದಿನಗಳಲ್ಲಿ ಮದ್ದೂರು ನಗರಸಭೆಯಿಂದ ಗ್ರಾಮದಲ್ಲಿ ನಿರ್ವಹಿಸುವ ಎಲ್ಲಾ ಕಾಮಗಾರಿಗಳನ್ನು ಗ್ರಾಮಸ್ಥರು ಒಗ್ಗೂಡಿ ತಡೆಯಬೇಕು ಎಂದು ಸುನಂದಾ ಜಯರಾಂ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ರಾಧಾ, ಡೇರಿ ಅಧ್ಯಕ್ಷ ನಾಗಣ್ಣ, ಮೋಹನ್, ಜಿ.ಟಿ.ವೀರಪ್ಪ, ಜಿ.ಟಿ.ಚಂದ್ರಶೇಖರ್, ದೀಪ, ರಾಘವೇಂದ್ರ ವೀರೇಶ ಮತ್ತಿತರರು ಭಾಗವಹಿಸಿದ್ದರು.


ನಗರಸಭೆ ವಾರ್ಡ್‌ಗಳ ವಿಂಗಡಣೆ ಮಾಡಿ ಡೀಸಿ ಅಧಿಸೂಚನೆ: ಗ್ರಾಮಸ್ಥರ ವಿರೋಧ

ಮದ್ದೂರುನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಸೇರಿದಂತೆ ನಾಲ್ಕು ಗ್ರಾಪಂಗಳನ್ನು ಸೇರ್ಪಡೆ ಮಾಡಿರುವ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಮುನ್ನವೇ ಜಿಲ್ಲಾಧಿಕಾರಿಗಳು ವಾರ್ಡ್‌ಗಳನ್ನು ವಿಂಗಡನೆ ಮಾಡಿ ಹೊರಡಿಸಿರುವ ಅಧಿಸೂಚನೆಗೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಅಲ್ಲದೇ, ಆಡಳಿತಾಧಿಕಾರಿಗಳು ಆದ, ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಸೋಮವಾರ ಮದ್ದೂರು ನಗರಸಭೆಯಲ್ಲಿ 2026, 27ನೇ ಸಾಲಿನಲ್ಲಿ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಗ್ರಾಪಂಗಳ ಅಭಿವೃದ್ಧಿಗೆ ಅನುದಾನ ಘೋಷಣೆ ಮಾಡಿ ವಾರ್ಡ್‌ಗಳನ್ನು ನಿಗದಿ ಮಾಡಿರುವುದು ಗ್ರಾಮಸ್ಥರು ನಡೆಸುತ್ತಿರುವ ಹೋರಾಟಕ್ಕೆ ಈ ವಿಷಯ ಕಗ್ಗಂಟಾಗಿದೆ.ಗ್ರಾಮಸ್ಥರ ಪ್ರತಿಭಟನೆ ಮತ್ತು ವಿವಾದ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಪಂಗಳಿಗೆ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ 31 ವಾರ್ಡ್‌ಗಳ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಿದ್ದಾರೆ. ಬಾದಿತ ವ್ಯಕ್ತಿಗಳು ಮಾರ್ಚ್ 30ರೊಳಗೆ ಲಿಖಿತ ಆಕ್ಷೇಪಣೆ ಮತ್ತು ಸಲಹೆ ನೀಡಲು ಕಾಲಾವಕಾಶ ನೀಡಿದ್ದಾರೆ. ಹೀಗಾಗಿ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಪಂಗಳು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.