ಅಂಗನವಾಡಿಯಲ್ಲಿ ಹುಳು ಬಿದ್ದ ಆಹಾರ ಸಾಮಗ್ರಿ ಬಳಕೆ: ಗ್ರಾಮಸ್ಥರ ಪ್ರತಿಭಟನೆ

| Published : Aug 10 2025, 01:30 AM IST

ಅಂಗನವಾಡಿಯಲ್ಲಿ ಹುಳು ಬಿದ್ದ ಆಹಾರ ಸಾಮಗ್ರಿ ಬಳಕೆ: ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಶು ಅಭಿವೃದ್ಧಿ ಅಧಿಕಾರಿ ವಿದ್ಯಾವತಿ ಒಂದೆರಡು ದಿನದಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಗ್ರಾಮಸ್ಥರು ತಮ್ಮ ಪ್ರತಿಭಟನೆ ಕೈಬಿಟ್ಟಿದ್ದರೂ ಅಂಗನವಾಡಿಗೆ ಮಕ್ಕಳನ್ನು ಕಳುಹಿಸುವುದನ್ನು ನಿಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅವಧಿ ಮುಗಿದ, ಹುಳು ಬಿದ್ದ ಆಹಾರ ಸಾಮಗ್ರಿಗಳಿಂದ ಆಹಾರ ತಯಾರಿಸಿ ಮಕ್ಕಳಿಗೆ ಉಣ ಬಡಿಸುತ್ತಿರುವುದು ಪತ್ತೆಯಾದ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದನ್ನೇ ನಿಲ್ಲಿಸಿರುವ ಪ್ರಕರಣ ತಾಲೂಕಿನ ಬಿಲ್ಲೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಅಂಗನವಾಡಿಗೆ 12 ಮಕ್ಕಳು ದಾಖಲಾಗಿದ್ದರು. ನೇತ್ರಾವತಿ ಎಂಬ ಅಂಗನವಾಡಿ ಶಿಕ್ಷಕಿಯು ಅವಧಿ ಮುಗಿದ ಮತ್ತು ಹುಳು ಬಿದ್ದಿರುವ ಆಹಾರ ಸಾಮಗ್ರಿಗಳನ್ನು ಬಳಸಿ ಮಕ್ಕಳಿಗೆ ಉಣ ಬಡಿಸುತ್ತಿದ್ದರು.

ಹುಳು ಹಿಡಿದ ಆಹಾರ ತಿಂದು ಅಂಗನವಾಡಿ ಕೇಂದ್ರದ ನಾಲ್ಕಾರು ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹುಳು ಇರುವ, ಅವಧಿ ಮುಗಿದಿರುವ ಆಹಾರ ಸಾಮಗ್ರಿ ಬಳಕೆ ಮಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಬಂದು ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಂಗನವಾಡಿಗೆ ಬೀಗ ಜಡಿಯಲು ಮುಂದಾದರು. ಸುದ್ದಿ ತಿಳಿದು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ವಿದ್ಯಾವತಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಹುಳು ಹಿಡಿದ ಆಹಾರ ಸಾಮಗ್ರಿಗಳನ್ನು ಅಧಿಕಾರಿಗಳ ಮುಂದೆ ಪ್ರದರ್ಶಿಸಿದ ಗ್ರಾಮಸ್ಥರು, ಇಂತಹ ಆಹಾರವನ್ನು ನಿಮ್ಮ ಮಕ್ಕಳಿಗೆ ತಿನ್ನಿಸುತ್ತೀರಾ?. ಸರ್ಕಾರ ಕೊಟ್ಟಿದ್ದನ್ನೂ ಮಕ್ಕಳಿಗೆ ನೀಡಲು ನಿಮ್ಮಿಂದ ಏಕೆ ಆಗುತ್ತಿಲ್ಲ? ಮಕ್ಕಳ ಬಗ್ಗೆ ಕಾಳಜಿಯಿಲ್ಲದ ಅಂಗನವಾಡಿ ಕಾರ್ಯಕರ್ತೆ ನಮಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವಧಿ ಮುಗಿದ ಆಹಾರ ಪದಾರ್ಥ ಬಳಸಿ ನಮ್ಮ ಮಕ್ಕಳನ್ನು ಬಲಿಕೊಡಲು ಮುಂದಾಗಿರುವ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಅಂಗನವಾಡಿ ಟೀಚರ್ ನೇತ್ರಾವತಿಯನ್ನು ತಮ್ಮೂರಿನಿಂದ ಹೊರಗೆ ಕಳುಹಿಸುವವರೆಗೂ ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ ಎಂದು ತಾಕೀತು ಮಾಡಿದರು.

ಪರಿವೀಕ್ಷಕಿಯ ಉಡಾಫೆ ಉತ್ತರ:

ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಅಂಗನವಾಡಿಯ ದಾಸ್ತಾನು ಜಾಗದಿಂದ ಹೊರಗೆ ತಂದು ಅಧಿಕಾರಿಗಳ ಮುಂದೆ ಗ್ರಾಮಸ್ಥರು ತಂದು ಸುರಿದು ಕ್ರಮಕ್ಕೆ ಒತ್ತಾಯಿಸುತ್ತಿದ್ದರೆ ಅಂಗನವಾಡಿ ಸೂಪರ್ ವೈಸರ್ ಶಾಂತಮ್ಮ ನನ್ನ ವ್ಯಾಪ್ತಿಯಲ್ಲಿ 64 ಅಂಗನವಾಡಿ ಕೇಂದ್ರಗಳಿವೆ. ಎಲ್ಲ ಕಡೆಗೂ ಭೇಟಿ ನೀಡಿ ಪರಿಶೀಲಿಸಲು ನನ್ನಿಂದ ಆಗುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದರು.

ಇದರಿಂದ ಕುಪಿತರಾದ ಗ್ರಾಮಸ್ಥರು, ನಿಮ್ಮಿಂದ ಅಂಗನವಾಡಿ ಕೇಂದ್ರದ ಪರಿವೀಕ್ಷಣೆ ಸಾಧ್ಯವಿಲ್ಲದಿದ್ದರೆ ನಿಮ್ಮ ಅಗತ್ಯ ನಮಗಿಲ್ಲ. ಮೇಲಾಧಿಕಾರಿಗಳು ಬಂದು ನಮ್ಮ ಮಕ್ಕಳಿಗೆ ನ್ಯಾಯ ಕೊಡಿಸುವವರೆಗೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಶಿಶು ಅಭಿವೃದ್ಧಿ ಅಧಿಕಾರಿ ವಿದ್ಯಾವತಿ ಒಂದೆರಡು ದಿನದಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಗ್ರಾಮಸ್ಥರು ತಮ್ಮ ಪ್ರತಿಭಟನೆ ಕೈಬಿಟ್ಟಿದ್ದರೂ ಅಂಗನವಾಡಿಗೆ ಮಕ್ಕಳನ್ನು ಕಳುಹಿಸುವುದನ್ನು ನಿಲ್ಲಿಸಿದ್ದಾರೆ.

ಬಿಲ್ಲೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವೆಂಕಟೇಶ್ ಮಾತನಾಡಿ, ಕೇವಲ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಕ್ರಮವಾದರೆ ಸಾಲದು, ಬದಲಾಗಿ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ನಮ್ಮ ಅಂಗನವಾಡಿ ಕೇಂದ್ರಕ್ಕೆ ಪೂರೈಕೆ ಮಾಡಿದವ್ಯಾರು? ಇದರಲ್ಲಿ ಅಧಿಕಾರಿಗಳ ಪಾತ್ರವೇನು? ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ಇದೇ ಆಹಾರ ಪದಾರ್ಥ ಪೂರೈಕೆಯಾಗಿದೆಯಾ? ಎನ್ನುವುದರ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಸದಸ್ಯ ನಂಜಪ್ಪ, ಕೃಪಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವೆಂಕಟೇಶ್, ಪಿಡಿಒ ವಿನೋದ್, ಮುಖಂಡರಾದ ಉಮೇಶ್, ವೆಂಕಟೇಶ್ ಸೇರಿ ಹಲವರು ಇದ್ದರು.