ಸಾರಾಂಶ
ಲಕ್ಷ್ಮೇಶ್ವರ: ಆದರಳ್ಳಿ ಗ್ರಾಮದ ಗವಿಮಠದ ಕುಮಾರ ಮಹಾರಾಜರು ಗವಿಮಠ ಬಿಟ್ಟು ಎಲ್ಲಿಗೂ ಹೋಗಬಾರದು. ಯಾವ ತಪ್ಪು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಗವಿಮಠ ಬಿಟ್ಟು ಹೋಗಬೇಕು ಎಂದು ಆದರಳ್ಳಿ ಗ್ರಾಮಸ್ಥರು ಆಗ್ರಹಿಸಿ ಗ್ರಾಮದ ಸೇವಾಲಾಲ್ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಯಿತು. ಈ ವೇಳೆ ಗ್ರಾಮದ ನೂರಾರು ಮಹಿಳೆಯರು ಹಾಗೂ ಸಮಾಜದ ಮುಖಂಡರು ಸಭೆ ಸೇರಿ ಲಂಬಾಣಿ ಸಮಾಜದ ಗುರುಗಳಾದ ಕುಮಾರ ಮಹಾರಾಜರು ಎರಡು ದಿನಗಳ ಹಿಂದೆ ಬೇರೆ ಗ್ರಾಮದ ಕಾರ್ಯಕ್ರಮಕ್ಕೆ ಹೋಗಿ ಬರುವಷ್ಟರಲ್ಲಿ ಗವಿಮಠದ ಪಕ್ಕದಲ್ಲಿನ ಶ್ರೀಗಳ ಆಶ್ರಮಕ್ಕೆ ಯಾರೋ ಕಿಡಿಗೇಡಿಗಳು ಬೀಗ ಜಡಿದಿದ್ದಾರೆ. ಆಶ್ರಮಕ್ಕೆ ದುಷ್ಟರು ಬೀಗ ಜಡಿದು ಶ್ರೀಗಳನ್ನು ಮಠದಿಂದ ಹೊರ ಹಾಕಬೇಕೆನ್ನುವ ಸಂಚು ನಡೆದಿದರುವುದು ನೋವಿನ ಸಂಗತಿಯಾಗಿದೆ. ಕುಮಾರ ಮಹಾರಾಜರು ಯಾವುದೇ ತಪ್ಪು ಮಾಡದೆ ಸಮಾಜ ಘಾತುಕ ಶಕ್ತಿಗಳ ಹಾಗೂ ಕಾನೂನು ಬಾಹಿರವಾಗಿ ಮರಳು ಹಾಗೂ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ದುಷ್ಟರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದರಿಂದ ಶ್ರೀಗಳ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಅವರನ್ನು ಮಠದಿಂದ ಹೊರ ಹಾಕುವ ಸಂಚು ನಡೆಸುತ್ತಿದ್ದಾರೆ. ಆದ್ದರಿಂದ ನಮ್ಮ ಸಮಾಜದ ಕುಮಾರ ಮಹಾರಾಜರು ಯಾವುದೇ ಕಾರಣಕ್ಕೂ ಗವಿಮಠ ಬಿಟ್ಟು ಹೋಗಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸಿಪಿಐ ನಾಗರಾಜ ಮಾಡಳ್ಳಿ ಹಾಗೂ ಪಿಎಸ್‌ಐ ನಾಗರಾಜ ಗಡದ, ಕ್ರೈಂ ಪಿಎಸ್‌ಐ ಕೆ.ಟಿ. ರಾಠೋಡ ಶಾಂತಿ ಸುವ್ಯವಸ್ಥೆ ಕಾಪಾಡಿದರು. ಗ್ರಾಮದಲ್ಲಿ ಒಂದು ರೀತಿಯ ಗೊಂದಲಮಯ ವಾತಾವರಣ ಇದ್ದದ್ದು ಕಂಡು ಬಂದಿತು.