ಹದಗೆಟ್ಟ ರಸ್ತೆಗೆ ಗ್ರಾಮಸ್ಥರಿಂದ ಕಾಯಕಲ್ಪ

| Published : Oct 06 2025, 01:01 AM IST

ಸಾರಾಂಶ

ಇವರು ರಸ್ತೆ ಹದಗೆಟ್ಟಿದೆ ಎಂದು ಪ್ರತಿಭಟನೆ ಮಾಡಲಿಲ್ಲ, ರಸ್ತೆ ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಅಲಿಯಲಿಲ್ಲ, ಯಾರನ್ನೂ ದೋಷಿಸಲಿಲ್ಲ ಅದರ ಬದಲು ತಾವೇ ಮುಂದಾಗಿ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಮತ್ತು ಸಣ್ಣ ಗಾತ್ರದ ಗುಂಡಿ, ತಗ್ಗುಗಳನ್ನು ಸ್ವತಃ ತಾವೇ ಜಲ್ಲಿಕಲ್ಲು, ಮಣ್ಣು ತುಂಬಿಸುವ ಮೂಲಕ ರಸ್ತೆ ಸರಿಪಡಿಸಿಕೊಂಡರು.

ಸದ್ದಿಲ್ಲದೇ ಮಾಡಿದ ಮಾದರಿ ಶ್ರಮದಾನ । ಯಡೋಗಾ ಗ್ರಾಮಸ್ಥರ ಸೇವೆಗೆ ಪ್ರಶಂಸೆಕನ್ನಡಪ್ರಭ ವಾರ್ತೆ ಹಳಿಯಾಳ

ಇವರು ರಸ್ತೆ ಹದಗೆಟ್ಟಿದೆ ಎಂದು ಪ್ರತಿಭಟನೆ ಮಾಡಲಿಲ್ಲ, ರಸ್ತೆ ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಅಲಿಯಲಿಲ್ಲ, ಯಾರನ್ನೂ ದೋಷಿಸಲಿಲ್ಲ ಅದರ ಬದಲು ತಾವೇ ಮುಂದಾಗಿ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಮತ್ತು ಸಣ್ಣ ಗಾತ್ರದ ಗುಂಡಿ, ತಗ್ಗುಗಳನ್ನು ಸ್ವತಃ ತಾವೇ ಜಲ್ಲಿಕಲ್ಲು, ಮಣ್ಣು ತುಂಬಿಸುವ ಮೂಲಕ ರಸ್ತೆ ಸರಿಪಡಿಸಿಕೊಂಡರು.

ಹಳಿಯಾಳ ತಾಲೂಕಿನ ಯಡೋಗಾ ಗ್ರಾಮಸ್ಥರು ಕೈಗೊಂಡಿರುವ ಈ ಮಾದರಿ ಕಾರ್ಯ ಇಂದು ತಾಲೂಕಿನೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಮಾದರಿ ಸೇವೆಗೆ ಅಭಿನಂದನೆ ಹರಿದು ಬರಲಾರಂಭಿಸಿವೆ. ಯಡೋಗಾ ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳದ ಯುವಕರು ಕೈಗೊಂಡಿರುವ ಮಾದರಿ ಸೇವೆ ಎಲ್ಲೆಡೆ ಮನೆಮಾತಾಗುತ್ತಿದೆ.

ಮುಂಡಗೋಡ-ಅಣಶಿ ರಾಜ್ಯ ಹೆದ್ದಾರಿ-46:

ಮುಂಡಗೋಡ-ಅಣಶಿ ರಾಜ್ಯ ಹೆದ್ದಾರಿ-46 ಇದು ಯಡೋಗಾ ಗ್ರಾಮದ ಹೊರಗಡೆಯಿಂದ ಹಾದು ಹೋಗುತ್ತಿದೆ. ಈ ರಾಜ್ಯ ಹೆದ್ದಾರಿಯಲ್ಲಿ ಬರುವ ತಟ್ಟಿಹಳ್ಳದ ಸೇತುವೆಯಿಂದ ಹಿಡಿದು ಯಡೋಗಾ ಗ್ರಾಮವನ್ನು ಸಂಪರ್ಕಿಸುವ ರಸ್ತೆ (ಕ್ರಾಸ)ವರೆಗೂ ರಸ್ತೆಯು ಒಡೆದು ಹೋಗಿತ್ತು, ಅಲ್ಲಲ್ಲಿ ಹೊಂಡಗಳಾಗಿದ್ದರಿಂದ ಪ್ರತಿನಿತ್ಯವೂ ಈ ಮಾರ್ಗದಲ್ಲಿ ಅಪಘಾತಗಳು ಸಂಭವಿಸುತ್ತಿದ್ದವು. ಹೀಗೆ ಪ್ರತಿದಿನವೂ ಅವರು ಬಿದ್ದರೂ ಇವರು ಬಿದ್ದರೆಂಬ ಸುದ್ದಿ ಕೇಳಿ ಕೇಳಿ ಯಡೋಗಾ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಸುಸ್ತಾಗಿ ಹೋಗಿದ್ದರು.

ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳ:

ಗ್ರಾಮಸ್ಥರ ನೋವಿಗೆ ಸ್ಪಂದಿಸಲು ಈಗ ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳವು ಮುಂದಾಯಿತು, ಯುವಕ ಮಂಡಳದ ಸದಸ್ಯರು ಸಭೆ ನಡೆಸಿ, ರಸ್ತೆ ದುರಸ್ತಿ ಮಾಡುವ ಯೋಜನೆ ರೂಪಿಸಿದರು, ದಸರಾ ಹಬ್ಬ ಮುಗಿದ ಬಳಿಕ ಮಳೆ ಬಿಡುವು ನೀಡಿದನ್ನು ಕಂಡು ಅ.3ರಂದು ಶ್ರಮದಾನ ಕಾರ್ಯ ಆರಂಭಿಸಿದರು. ಗ್ರಾಮದ ಹೊಸ್ತಿಲಲ್ಲಿ ಆರಂಭಗೊಂಡಿರುವ ಕೆರೆ ತುಂಬಿಸುವ ಮತ್ತು ಬಹುಗ್ರಾಮ ಯೋಜನೆ ಕಾಮಗಾರಿಗಳ ಮೇಲ್ವಿಚಾರಕರೊಂದಿಗೆ ಮಾತನಾಡಿ ಜಲ್ಲಿಕಲ್ಲು, ಕಲ್ಲಿನ ಪುಡಿಯನ್ನು ಪಡೆದು ಹೊಂಡಗಳನ್ನು ತುಂಬಿಸುವ ಶ್ರಮದಾನ ಕಾರ್ಯ ಆರಂಭಿಸಿದರು. ಯಡೋಗಾ ಗ್ರಾಮದ ಯುವಕರು ಕೈಗೊಂಡ ಶ್ರಮದಾನ ನೋಡಿ ಪ್ರೇರಿತರಾದ ನೆರೆಯ ನಿರಲಗಾ ಗ್ರಾಮಸ್ಥರು ಸಹ ಬಂದು ಕೈಜೋಡಿಸಿದರು ಹೀಗೆ ನೋಡು ನೋಡುತ್ತಿದ್ದಂತೆ ಒಂದೇ ದಿನದಲ್ಲಿ ರಸ್ತೆ ದುರಸ್ತಿ ಕಾರ್ಯ ಮುಕ್ತಾಯಗೊಂಡಿತು.

ಸಚ್ಚಿದಾನಂದ ಕದಂ, ಗಣಪತಿ ಕುಂದೇಕರ, ನಂದು ಡೇಪಿ, ತುಕಾರಾಮ ಬಡಗಿ, ಸುಭಾಸ ಕದಂ, ಪರಶುರಾಮ ವಡ್ಡರ, ಮನೋಹರ ಚರಾಡ್ಕರ, ಅಂಕುಶ್ ಬನೋಶಿ, ನಿರಲಗಾ ಗ್ರಾಮದ ವಿಠ್ಠಲ ಕೊಲೆಕರ, ಸುದಾಂ ಕೊಲೆಕರ, ರಾಯಪ್ಪಾ ಗೌಡಾ ಮೊದಲಾದವರು ಸದ್ದಿಲ್ಲದೇ ಕೈಗೊಂಡ ಮಾದರಿ ಸೇವೆಯು ಈಗ ಇಡೀ ತಾಲೂಕಿನೆಲ್ಲೆಡೆ ಸದ್ದು ಮಾಡಲಾರಂಭಿಸಿದೆ.