ಕಲ್ಲುಗಣಿಗಾರಿಕೆಗೆ ಗ್ರಾಮಸ್ಥರಿಂದ ಪ್ರಭಲ ವಿರೋಧ

| Published : Aug 14 2025, 01:00 AM IST

ಕಲ್ಲುಗಣಿಗಾರಿಕೆಗೆ ಗ್ರಾಮಸ್ಥರಿಂದ ಪ್ರಭಲ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಶೆಟ್ಟೀಕೆರೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಗ್ರಾಮಸ್ಥರೊಂದಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ನೇತೃತ್ವದಲ್ಲಿ ಕಲ್ಲುಗಣಿಗಾರಿಕೆಯನ್ನು ವಿರೋಧಿಸಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಗಡಿಭಾಗವಾಗಿರುವ ದೊಡ್ಡಶೆಟ್ಟೀಕೆರೆ ಸುತ್ತಮುತ್ತ ಕಲ್ಲುಗಣಿಗಾರಿಕೆ ನಡೆಸಲು ಸರ್ಕಾರದಿಂದ ಅನುಮತಿ ನೀಡಲಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ದೊಡ್ಡಶೆಟ್ಟೀಕೆರೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಗ್ರಾಮಸ್ಥರೊಂದಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ನೇತೃತ್ವದಲ್ಲಿ ಕಲ್ಲುಗಣಿಗಾರಿಕೆಯನ್ನು ವಿರೋಧಿಸಿ ಪ್ರತಿಭಟಿಸಿದರು.

ತಾಲೂಕಿನ ಮಾಯಸಂದ್ರದಲ್ಲಿ ಬುಧವಾರ ಕಲ್ಲುಗಾರಿಕೆ ವಿರೋಧಿಸಿ ಮಾತನಾಡಿದ ಅವರು, ತಾಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಶೆಟ್ಟಿಕೆರೆ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದರೆ ಸುತ್ತಮುತ್ತಲ ಪರಿಸರ ನಾಶವಾಗುವುದು ಖಚಿತ. ಗಣಿಗಾರಿಕೆಗೆ ಗುರುತಿಸಿರುವ ಪ್ರದೇಶದ ಸಮೀಪವೇ, ಇತಿಹಾಸ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ಬೆಟ್ಟ, ಶ್ರೀ ಆದಿಚುಂಚನಗಿರಿ ಕ್ಷೇತ್ರ, ಜೋಡುಗಟ್ಟೆ ಮಹದೇಶ್ವರ ಸ್ವಾಮಿ ದೇವಾಲಯ, ಆದಿಚುಂಚನಗಿರಿಯ ನವಿಲು ಧಾಮವಿದೆ. ಅನೇಕ ರೈತರು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದರೆ ಪರಿಸರ ನಾಶದ ಜೊತೆಗೆ, ಇತಿಹಾಸ ಪ್ರಸಿದ್ಧ ದೇವಾಲಯಗಳು ಹಾಳಾಗಲಿವೆ. ಗ್ರಾಮಸ್ಥರು ಶಬ್ದ ಮತ್ತು ಮಾಲಿನ್ಯದಿಂದ ತತ್ತರಿಸಲಿದ್ದಾರೆ. ಇದರಿಂದ ಆರೋಗ್ಯಕ್ಕೆ ಮತ್ತು ಜೀವನಕ್ಕೆ ಬಹಳ ತೊಂದರೆಗಳಾಗಲಿದೆ. ಕೂಡಲೇ ಸರ್ಕಾರವು ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಆಗ್ರಹಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಚೌದ್ರಿ ಟಿ.ರಂಗಪ್ಪ ಮಾತನಾಡಿ, ಜಾನುವಾರುಗಳಿಗೆ ನೀರುಣಿಸಲು ಆಧಾರವಾಗಿರುವ ಚೌದ್ರಿಕಟ್ಟೆಗೆ ಹೊಂದಿಕೊಂಡಿರುವ ಸರ್ವೇ ನಂ. 136 ರ ಸಮೀಪವೇ ಕಲ್ಲು ಗಣಿಗಾರಿಕೆಯ ಜಾಗವನ್ನು ಗುರುತಿಸಿಲಾಗಿದೆ. ಈ ಪ್ರದೇಶದ ಸಮೀಪದಲ್ಲಿ ಮಹದೇಶ್ವರ ದೇವಸ್ಥಾನವಿದೆ. ಪ್ರತಿ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ದನಗಳ ಸಂತೆ ನಡೆಯಲಿದೆ. ವಾರ್ಷಿಕ ಎಂಟು ದಿನಗಳ ಜಾತ್ರೆ ಜರುಗುತ್ತದೆ. ಸಮೀಪವೇ ದೊಡ್ಡಶೆಟ್ಟಿಕೆರೆ ಬೆಟ್ಟದ ಪುರಾತನವಾದ ರಂಗನಾಥ ಸ್ವಾಮಿ ದೇವಾಲಯ, ಜೋಡಿಗಟ್ಟೆ ಜನತಾ ಕಾಲೋನಿ, ಗ್ಯಾಸ್ ಪೈಪ್ ಲೈನ್ ಹಾದು ಹೋಗಿದೆ. ಊರು ಕೆರೆ ಸೇರಿದಂತೆ ಬಹು ಪುರಾತನ ಕುಂಬಾರ ಗುಡಿ. ಶ್ರೀರಂಗಪಟ್ಟಣ - ಬೀದರ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುತ್ತದೆ. ದೊಡ್ಡ ಶೆಟ್ಟಿಕೆರೆ ಮತ್ತು ಸುತ್ತಮುತ್ತಲಿನ ಗ್ರಾಮ ಪ್ರದೇಶದಲ್ಲಿ ಗೋಮಾಳ ಜಾಗದ ಕೊರತೆ ಇದೆ. ಜಾನುವಾರುಗಳನ್ನು ಮೇಯಿಸಲು ಈ ಬೆಟ್ಟಗಳ ಪ್ರದೇಶಗಳನ್ನೇ ಆಶ್ರಯಿಸಲು ಅನಿವಾರ್ಯವಾಗಿದೆ. ಹೀಗಿರುವಾಗ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದರು. ನಿವೃತ್ತ ವಾಯು ಸೇನೆ ಸೇನಾನಿ ಡಿ.ತಿಪ್ಪಣ್ಣ ಮಾತನಾಡಿ ದೊಡ್ಡಶೆಟ್ಟಿಕೆರೆ ಕಲ್ಲುಗಣಿಗಾರಿಕೆ ನಡೆಸಲು 2014 ರಿಂದಲೂ ಹುನ್ನಾರ ನಡೆದಿದೆ. ವಿವಿಧ ಹಂತಗಳಲ್ಲಿ ವಿರೋಧಿಸುತ್ತಾ ಬಂದಿದ್ದೇವೆ. ಆದರೂ ಸಹ ಕೆಲವು ಉದ್ಯಮಿಗಳು ಸತತವಾಗಿ ಸರ್ಕಾರದ ಮೇಲೆ ಒತ್ತಡ ಮತ್ತು ಪ್ರಭಾವಗಳನ್ನು ಬೀರಿ ಗಣಿಗಾರಿಕೆಗೆ ಮಂಜೂರು ಪಡೆಯುವ ಹಂತವನ್ನು ತಲುಪಿದ್ದಾರೆ. ಸ್ಥಳೀಯ ಗ್ರಾಮಸ್ಥರು ಅಕ್ಕಪಕ್ಕದ ಹಳ್ಳಿಯ ಗ್ರಾಮಸ್ಥರು ಎಲ್ಲಾ ಹೋರಾಟಕ್ಕೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಮಾತನಾಡಿ ಗಣಿಗಾರಿಕೆಯ ಮಾಲೀಕರು ಅದೆಷ್ಟೇ ಪ್ರಭಾವಿಗಳಾದರೂ ಸರಿಯೇ ಗಣಿಗಾರಿಕೆ ಮಾಡಲು ಬಿಡುವುದಿಲ್ಲ. ಈಗಾಗಲೇ ಗಣಿಗಾರಿಕೆ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ಭೂ ಮತ್ತು ಗಣಿ ವಿಜ್ಞಾನ ಇಲಾಖೆಗೆ ಗಣಿಗಾರಿಕೆ ಕುರಿತು ದೂರು ಸಲ್ಲಿಸಲಾಗಿದೆ. ಮುಂದೆ ಕಾನೂನು ಹೋರಾಟಕ್ಕೂ ಸೈ. ಇದು ಪ್ರಾರಂಭದ ಹೋರಾಟ, ಮುಂದುವರೆದರೆ ಉಗ್ರವಾದ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರ್ ಕುಂ.ಜಿ. ಅಹಮದ್ ಮಾತನಾಡಿ, ಗಣಿಗಾರಿಕೆಗೆ ಅಧಿಕೃತವಾಗಿ ಯಾವುದೇ ಮಂಜೂರು ಇದುವರೆಗೂ ಆಗಿಲ್ಲ. ಈಗಾಗಲೇ ಗ್ರಾಮಸ್ಥರ ಆಕ್ಷೇಪಣೆ ಕುರಿತಾಗಿ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ವರದಿ ಸಲ್ಲಿಸಿರುವುದಾಗಿ ಹೇಳಿದರು. ಮಾಯಸಂದ್ರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೊಡ್ಡ ಶೆಟ್ಟಿಕೆರೆ. ಕಲ್ಲು ನಾಗತಿಹಳ್ಳಿ. ಹರಳಹಳ್ಳಿ. ಜನತಾ ಕಾಲೋನಿ. ಢಣನಾಯಕನಪುರ. ಡಿ.ಬಿ.ಹಟ್ಟಿ. ಚಿಕ್ಕಬೀರನಕೆರೆ. ದೊಡ್ಡ ಬೀರನಕೆರೆ. ಮಾಯಸಂದ್ರ. ಚಿಕ್ಕ ಶೆಟ್ಟಿಕೆರೆ. ಜೋಡುಗಟ್ಟೆ, ಬ್ಯಾಡರಹಳ್ಳಿ. ಹಲವಾರು ಹಳ್ಳಿಯ ಗ್ರಾಮದ ನೂರಾರು ಮಂದಿ ಸಾರ್ವಜನಿಕರು ಮೆರವಣಿಗೆಯ ಮೂಲಕ, ಗಣಿಗಾರಿಕೆ ನಿಷೇಧಿಸಿ ಎಂದು ಘೋಷಣೆ ಕೂಗುತ್ತಾ, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಗಸ್ವಾಮಿ. ಸವಿತಾ ಶಿವಕುಮಾರ್. ಗ್ರಾಮಸ್ಥರಾದ ಮುರುಳಿ ದಾಸ್. ಶ್ರೀರಂಗ ಕಮಿಟಿ ಅಧ್ಯಕ್ಷರಾದ ಅಶೋಕ್. ಕಾರ್ಯದರ್ಶಿ ರಂಗನಾಥ್. ಖಜಾಂಚಿ ಮಂಜುನಾಥ್. ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಕುಮಾರಿ. ಕಾರ್ಯದರ್ಶಿ ಶೀಲಾವಾಸು. ಕಲ್ಲು ನಾಗತಿಹಳ್ಳಿ ಕೆಂಪಣ್ಣ. ದೊಡ್ಡಶೆಟ್ಟಿಕೆರೆ ಗ್ರಾಮದ ಯುವಕರು, ಮಹಿಳೆಯರು ಭಾಗವಹಿಸಿದ್ದರು. ಜಡಿ ಮಳೆಯಲ್ಲೂ ಪ್ರಸನ್ನನಾಥ ಸ್ವಾಮೀಜಿ ಆದಿಯಾಗಿ ನೂರಾರು ಮಂದಿ ಪ್ರತಿಭಟನೆಯಲ್ಲಿ ತೊಡಗಿದರು. ಪಿಎಸ್ಐ ಮೂರ್ತಿ ನೇತೃತ್ವದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಿ.ಡಿ.ಓ. ಸುರೇಶ್ ಸೇರಿದಂತೆ ಉಪಸ್ಥಿತರಿದ್ದರು.