ಸಾರಾಂಶ
ಪಂಪನಗೌಡ ಬಾದನಹಟ್ಟಿ
ಕುರುಗೋಡು: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲೇ ದೊಡ್ಡ ಗ್ರಾಮವಾಗಿರುವ ಎಮ್ಮಿಗನೂರು ಗ್ರಾಮದ ಕುಡಿವ ನೀರಿನ ಕೆರೆಗೆ ನೀರು ತುಂಬಿಸಿ ಜನರಿಗೆ ನೀರಿನ ದಾಹ ತೀರಿಸುವಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ.ಕೆರೆಗೆ ನೀರು ತುಂಬಿಸುವ ಸಮರ್ಪಕ ಕಾರ್ಯವನ್ನು ಅಧಿಕಾರಿಗಳು ಮಾಡದ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗಿದೆ. ಇದರಿಂದ ನೀರಿನ ಬವಣೆ ಹೆಚ್ಚಾಗಿದೆ. ಜನರು ನಿತ್ಯ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಕಾಡುತ್ತಿದೆ.
ಸಮೀಪದ ಒರ್ವಾಯಿ ಕ್ರಾಸ್ ಬಳಿ ಇರುವ ಬಹು ಗ್ರಾಮ ಯೋಜನೆ ಎಮ್ಮಿಗನೂರು, ಒರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು ಗ್ರಾಮದ ಜನರಿಗೆ ಅನುಕೂಲವಾಗುವ ಬದಲು ನೀರು ಪಾಚಿಗಟ್ಟಿ ನನೆಗುದಿಗೆ ಬಿದ್ದಿದೆ.ಪ್ರತಿ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕೆರೆಯಿಂದ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಕೆರೆ ನಿರ್ಮಿಸಿ, ಕೆರೆ ಸಮೀಪ ಫಿಲ್ಟರ್ ಘಟಕ ತೆರೆಯಲಾಗಿತ್ತು. ನೀರನ್ನು ಫಿಲ್ಟರ್ ಮಾಡುವ ಮೂಲಕ ಶುದ್ಧೀಕರಿಸಿ ಬಿಡುವ ಯೋಜನೆಯನ್ನು ಹೆಸರಿಗಷ್ಟೇ ಎನ್ನುವಂತೆ ಮಾಡಲಾಗಿತ್ತು.
ಸುಮಾರು ೨೯,೦೦೦ ಜನಸಂಖ್ಯೆ ಹೊಂದಿರುವ ಬಹುಗ್ರಾಮಕ್ಕೆ ಸಮರ್ಪಕ ನೀರು ಪೂರೈಕೆಗೆ ಅಧಿಕಾರಿಗಳು ವಿಫಲರಾಗಿದ್ದಾರೆ. ಕಾಲುವೆಯಲ್ಲಿ ನೀರು ಹರಿಯುವ ವೇಳೆ ಗುತ್ತಿಗೆದಾರರು ಕೆರೆಗೆ ನೀರು ಹರಿಸಲು ಮುಂದಾಗಲಿಲ್ಲ. ಇದರಿಂದಾಗಿ ನಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ. ಕೆರೆಗೆ ನೀರು ತುಂಬಿಸಲು ನೀರಿನ ಮೂಲಗಳೇ ಬರಿದಾಗಿವೆ. ಆದರೂ ಅಧಿಕಾರಿಗಳು ನಮಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದ್ದರು. ಆದರೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಜಡೇಪ್ಪ.₹೩.೦೭ ಕೋಟಿಯ ಕೆರೆ:
ಮೂರು ಹಳ್ಳಿಗಳ ಜನತೆಗೆ ಕುಡಿವ ನೀರು ಒದಗಿಸುವ ನಿಟ್ಟಿನಲ್ಲಿ ೨೦೦೮ರಲ್ಲಿ ಒರ್ವಾಯಿ ಕ್ರಾಸ್ ಬಳಿ ೧೮ ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಸುಮಾರು ₹೩.೦೭ ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಿಸಿ ಸುತ್ತ ತಡೆಗೋಡೆ ನಿರ್ಮಾಣಕ್ಕಾಗಿ ₹೧.೨೦ ಕೋಟಿ ವ್ಯಯಿಸಲಾಗಿದೆ. ಆದರೂ ಯೋಜನೆಯಿಂದ ಗ್ರಾಮಗಳ ಜನತೆಗೆ ಮಾತ್ರ ಬಿಡಿಗಾಸಿನ ಪ್ರಯೋಜನವಾಗಿಲ್ಲ.ಎಮ್ಮಿಗನೂರು, ಗುತ್ತಿಗನೂರು, ಒರ್ವಾಯಿ ಗ್ರಾಮಗಳಿಗೆ ಸರಬರಾಜಾಗುವ ಬೋರ್‌ವೆಲ್ ನೀರು ಶೇ.೨೫-೩೦ರಷ್ಟು ಪ್ಲೋರೈಡ್ ಅಂಶದಿಂದ ಕೂಡಿದೆ. ಜನತೆ ಮಂಡಿನೋವು, ಕೀಲುಬಾಧೆಯಿಂದ ಬಳಲುತ್ತಿದ್ದಾರೆ.
ಕಾಮಗಾರಿ ಆರಂಭಗೊಂಡು ಸುಮಾರು ೧೫ -೨೦ ವರ್ಷಗಳು ಕಳೆದರೂ ಜನರಿಗೆ ಶುದ್ಧ ಕುಡಿವ ನೀರಿನ ಕನಸು ಮರೀಚಿಕೆಯಾಗಿಯೇ ಉಳಿದಿದೆ. ಇದಕ್ಕೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಎನ್ನುವ ಮಾತು ಮೂರು ಹಳ್ಳಿಗಳ ಜನತೆಯಿಂದ ವ್ಯಾಪಕವಾಗಿ ಕೇಳಿಬರುತ್ತಿದೆ.ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ ೫ ವರ್ಷದ ಅವಧಿಗೆ ಕಾಲುವೆ ನೀರು ತುಂಬಿಸುವುದು ಹಾಗೂ ಗ್ರಾಮಗಳ ಟ್ಯಾಂಕ್ ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಪೈಪ್ ಲೈನ್ ಮೂಲಕ ಆಯಾ ಗ್ರಾಪಂ ಜನತೆಗೆ ನೀರು ಒದಗಿಸಲಾಗುತ್ತದೆ ಎನ್ನುತ್ತಾರೆ ಗುತ್ತಿಗೆದಾರ ಶ್ರೀಹರಿ.