ಹಾನಗಲ್ಲ:ಹಳ್ಳಿಗಳು ಸಾಂಸ್ಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವ ಶ್ರದ್ಧಾ ಕೇಂದ್ರಗಳಂತೆ ಬೆಳೆದು ಭವಿಷ್ಯದಲ್ಲಿ ಸಾಂಸ್ಕೃತಿಕ ಭಾರತವಾಗಿ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಲು ಹಿರಿಯರ ನಿರಂತರ ಮಾರ್ಗದರ್ಶನ ಅತ್ಯವಶ್ಯ ಎಂದು ಹೃದಯವಂತರು ಸಂಘಟನೆಯ ನಾಯಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡರು ತಿಳಿಸಿದರು. ಹಾನಗಲ್ಲ ತಾಲೂಕಿನ ಇನಾಂಯಲ್ಲಾಪುರ ಗ್ರಾಮದಲ್ಲಿ ಮಾಯಮ್ಮದೇವಿ ಹಾಗೂ ಮರಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಗ್ರಾಮದ ಹಿರಿಯರಿಗೆ ಗೌರವಾರ್ಪಣೆ ಹಾಗೂ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಮ್ಮ ದೇಶ ಧರ್ಮ ಸಂಸ್ಕೃತಿಯನ್ನು ಆಧರಿಸಿ ಇಡೀ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ ದೇಶ. ಈಗ ಭಾರತದ ಯೋಗ, ಧರ್ಮ, ಸಂಸ್ಕೃತಿಯ ವಿಚಾರಗಳನ್ನು ಇಡೀ ಜಗತ್ತೇ ಅನುಸರಿಸುವ ಅವಸರದಲ್ಲಿದೆ. ಇಂತಹ ಸಂದರ್ಭದಲ್ಲಿ ಭಾರತೀಯರಾದ ನಾವು ನಮ್ಮ ದೇಶದ ಸಂಸ್ಕೃತಿಯನ್ನು ಯಥಾವತ್ತಾಗಿ ಉಳಿಸಿಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಜೆಪಿ ಮುಖಂಡ ಉದಯ ವಿರುಪಣ್ಣನವರ, ದುಡಿಮೆಯೇ ದುಡ್ಡಿನ ತಾಯಿ ಎಂಬ ಸತ್ಯಕ್ಕೆ ಅನುರೂಪವಾದ ಈ ಇನಾಂಯಲ್ಲಾಪುರದ ರೈತರು ರೈತ ಕಾರ್ಮಿಕರು ಪ್ರಾಮಾಣಿಕ ದುಡಿಮೆಯ ಮೂಲಕ ಬದುಕು ಕಟ್ಟಿಕೊಂಡವರು. ಇಂತಹ ಸಂದರ್ಭದಲ್ಲಿ ಹಬ್ಬ ಹರಿದಿನಗಳನ್ನು ಒಟ್ಟಾಗಿ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಆಚರಿಸುತ್ತಿರುವುದು ಮತ್ತು ಯುವಕರಿಗೆ ಮಾರ್ಗದರ್ಶನ ಮಾಡಿ ಮುನ್ನಡೆಸುತ್ತಿರುವುದು ಅತ್ಯುತ್ತಮ ಬೆಳವಣಿಗೆ ಎಂದರು.ಗ್ರಾಮದ ಹಿರಿಯರಾದ ರಾಮಪ್ಪ ಬಡೆಮ್ಮನವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರಾದ ಮನೋಜ ದೇಸಾಯಿ, ವಿದ್ಯಾಶಂಕರ ದೇಶಪಾಂಡೆ, ಷಣ್ಮುಖಪ್ಪ ಅಂದಲಗಿ, ಲೋಕೇಶ ಕೂಲಿ, ವಿಜೇಂದ್ರ ಮಡಿವಾಳರ, ರಾಂಘವೇಂದ್ರ ಗುಡ್ಡೇರ ಅತಿಥಿಗಳಾಗಿದ್ದರು.ಬಹುಮಾನ: ಜಾತ್ರಾ ಮಹೋತ್ಸವದ ಅಂಗವಾಗಿ ಇಮ್ಮಡಿ ಪುಲಕೇಶಿ ಕ್ರಿಕೆಟ್ ಕ್ಲಬ್ ಆಯೋಜಿಸಿದ ಮುಕ್ತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಾನಗಲ್ಲಿನ ಮುಸ್ಕಾನ ಕ್ರಿಕೆಟ್ ಕ್ಲಬ್ ಪ್ರಥಮ ಸ್ಥಾನ ಪಡೆಯಿತು. ಅಕ್ಕಿಆಲೂರಿನ ಆದಿಶಕ್ತಿ ಕ್ರಿಕೆಟ್ ಕ್ಲಬ್ ದ್ವಿತೀಯ, ಅಕ್ಕಿಆಲೂರಿನ ವಾಯ್‌ಜಿಎಸ್ ಕ್ರಿಕೆಟ್ ಕ್ಲಬ್ ತೃತೀಯ ಸ್ಥಾನ, ಇನಾಂಯಲ್ಲಾಪುರದ ಸೆವನ್‌ಸ್ಟಾರ್ ಕ್ರಿಕೆಟ್ ಕ್ಲಬ್ ಸಮಾಧಾನಕರ ಬಹುಮಾನ ಗಳಿಸಿದರು. ಪಂದ್ಯಾವಳಿಯ ಅತ್ಯುತ್ತಮ ಬ್ಯಾಟ್‌ಮನ್ ಆಗಿ ಬ್ರಹ್ಮಾನಂದ ಪೂಜಾರ, ಅತ್ಯುತ್ತಮ ಬಾಲರ ಆಗಿ ಸರ್ಪಾಜ, ಆಲ್‌ರೌಂಡರ್ ಅಗಿ ನಿಖಿಲ ಆಯ್ಕೆಯಾಗಿ ಗಣ್ಯರಿಂದ ಬಹುಮಾನ ಸ್ವೀಕರಿಸಿದರು. ದೀಕ್ಷಾ ಹಣ್ಣಿ ಪ್ರಾರ್ಥನೆ ಹಾಡಿದರು. ಶ್ರೀಧರ ಸೋಮಸಾಗರ ಸ್ವಾಗತಿಸಿದರು. ಷಣ್ಮುಖಪ್ಪ ಮುರಡಣ್ಣನವರ ಕಾರ್ಯಕ್ರಮ ನಿರೂಪಿಸಿದರು.
ಹಳ್ಳಿಗಳು ಸಾಂಸ್ಕೃತಿಕ ಸಂಪತ್ತು ಉಳಿಸಿಕೊಳ್ಳುವ ಶ್ರದ್ಧಾ ಕೇಂದ್ರಗಳಾಗಬೇಕು
ಹಳ್ಳಿಗಳು ಸಾಂಸ್ಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವ ಶ್ರದ್ಧಾ ಕೇಂದ್ರಗಳಂತೆ ಬೆಳೆದು ಭವಿಷ್ಯದಲ್ಲಿ ಸಾಂಸ್ಕೃತಿಕ ಭಾರತವಾಗಿ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಲು ಹಿರಿಯರ ನಿರಂತರ ಮಾರ್ಗದರ್ಶನ ಅತ್ಯವಶ್ಯ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.