ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತ್ಯಾಜ್ಯ ವಿಲೇವಾರಿಗೆ ಸರ್ಕಾರ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ಮನೆಗಳಲ್ಲಿ ಸಂಗ್ರವಾಗುವ ಕಸವನ್ನು ಘಟಕಗಳಲ್ಲೇ ವಿಲೇವಾರಿ ಮಾಡಬೇಕೆಂದು ಸೂಚಿಸಿದ್ದರೂ ಗ್ರಾಪಂಗಳು ಮಾತ್ರ ಇದನ್ನು ಬಳಸಲು ಆಸಕ್ತಿಯ ತೋರಿಸುತ್ತಿಲ್ಲ.ತಾಲೂಕಿನ ಬಹುತೇಕ ಗ್ರಾಮ ಪಂಃಗಳಲ್ಲಿ ಕಸ ವಿಲೇವಾರಿ ಘಟಗಳನ್ನು ಅಳವಡಿಸಿ ಅದರಲ್ಲಿಯೇ ದಿನನಿತ್ಯ ಸಂಗ್ರಹವಾಗುವ ಕಸವನ್ನು ಡಂಪ್ ಮಾಡಲಾಗುತ್ತಿದೆ. ಕೆಲವು ಗ್ರಾಪಂಗಳಲ್ಲಿ ಕಸ ವಿಲೇವಾರಿ ಘಟಕ ತೆರೆಯಲು ಮೀನಮೇಷ ಎಣಿಸುತ್ತಿದ್ದರೆ, ಇನ್ನೂ ಕೆಲವು ಗ್ರಾಪಂಗಳು ಘಟಕ ಇದ್ದರೂ ಅದನ್ನು ಬಳಸುತ್ತಿಲ್ಲ. ಇದರಿಂದಾಗಿ ತ್ಯಾಜ್ಯವನ್ನು ಕೆರೆ, ರಾಜಕಾಲುವೆ, ರಸ್ತೆ ಬದಿಯಲ್ಲಿ ಎಸೆಯುವುದು ಸಾಮಾನ್ಯವಾಗಿದೆ. ದೊಡ್ಡೂರು ಕರಪನಹಳ್ಳಿ ಗ್ರಾಪಂಇದಕ್ಕೆ ತಾಜಾ ಉದಾಹರಣೆ ದೊಡ್ಡೂರು ಕರಪನಹಳ್ಳಿ ಗ್ರಾಪಂ. ಇದು ತಾಲೂಕಿನ ಅತಿ ದೊಡ್ಡ ಗ್ರಾಪಂ ಹಾಗೂ ಹೆಚ್ಚು ತೆರಿಗೆ ಸಂಗ್ರವಾಗುವ ಗ್ರಾಪಂ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ ಕಸ ವಿಲೇವಾರಿಯಲ್ಲಿ ಮಾತ್ರ ಸಂಪೂರ್ಣ ವಿಫಲವಾಗಿದೆ. ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗಾರಿಕ ಪ್ರದೇಶ, ಬೆಮಲ್ ಕ್ವಾಟ್ರಸ್, ಸೇರಿದಂತೆ ವಾಸ ಮಾಡುವವರೆಲ್ಲರೂ ಸರ್ಕಾರಿ ಅಧಿಕಾರಿಗಳೇ ಹೆಚ್ಚು. ಆದರೆ ಮನೆಗಳಲ್ಲಿ ಹಾಗೂ ಕೈಗಾರಿಕ ಪ್ರದೇಶಗಳಿಂದ ಉತ್ಪತ್ತಿಯಾಗುವ ಕಸ ಹಾಗೂ ಇತರೇ ತ್ಯಾಜ್ಯಗಳನ್ನು ಗ್ರಾಪಂ ನಿತ್ಯ ಸಂಗ್ರಹ ಮಾಡುತ್ತಿಲ್ಲ. ಹಾಗಾಗಿ ಜನರು ಕಸವನ್ನು ಸಿಕ್ಕ ಸಿಕ್ಕ ಕಡೆಯಲ್ಲಿ ಎಸೆಯುವಂತಾಗಿದೆ. ರಸ್ತೆ ಉದ್ದಕ್ಕೂ ತ್ಯಾಜ್ಯ
ಇದರಿಂದ ದಾಸರಹೊಸಹಳ್ಳಿ ಬಳಿ ರಾಜಕಾಲುವೆ,ಸಂಭ್ರಮ ಆಸ್ಪತ್ರೆ ಬಳಿಯಿರವ ರಾಜಕಾಲುವೆಯಲ್ಲಿ ನೀರು ಹರಿಯುವುದೋ ಇಲ್ಲವೋ ಗೊತ್ತಿಲ್ಲ,ಆದರೆ ವರ್ಷಪೂರ ತ್ಯಾಜ್ಯ ವಸ್ತುಗಳು ಮಾತ್ರ ತುಂಬಿ ದುರ್ನಾತ ಬೀರುತ್ತಿದ್ದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಗ್ರಾಪಂನಲ್ಲಿ ಕಸ ವಿಲೇವಾರಿ ಘಟಕವಿದ್ದರೂ ಅದನ್ನು ಬಳಸದೆ ಇರುವುದರಿಂದ ಹಾಗೂ ಅಪರೂಪಕ್ಕೊಮ್ಮೆ ಗ್ರಾಪಂ ಕಸ ಸಂಗ್ರದ ಆಟೋ ಬರುವುದರಿಂದ ಜನರೂ ಸಿಕ್ಕ ಕಡೆ ಕಸ ಎಸೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಬಂಗಾರಪೇಟೆಯಿಂದ ಕೆಜಿಎಫ್ ನಗರಕ್ಕೆ ಹೋಗುವ ದಾಸರಹೊಸಹಳ್ಳಿ ಗ್ರಾಮದ ಬಳಿ ಉದ್ದಕ್ಕೂ ಕಸ ಸ್ವಾಗತಿಸುತ್ತದೆ. ಈ ಪಂಚಾಯ್ತಿ ದೊಡ್ಡ ಪಂಚಾಯ್ತಿಯಾದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಎಲ್ಲಂದರಲ್ಲಿ ಅಕ್ರಮ ಬಡಾವಣೆಗಳನ್ನು ನಿರ್ಮಾಣ ಮಾಡಿದರೂ ಕೆಡಿಎ ಅಧಿಕಾರಿಗಳು ಪ್ರಶ್ನೆ ಮಾಡುವುದಿಲ್ಲ. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕೆಲವರು ಪೆಟ್ರೋಲ್ ಬಂಕ್ ನಿರ್ಮಾಣ ಮಾಡಿ ಕೊಳಚೆ ನೀರು ಹಾಗೂ ಮಳೆ ನೀರು ಹರಿಯದಂತೆ ತಡೆದಿದ್ದರೂ ಗ್ರಾಪಂ ಮೌನಕ್ಕೆ ಜಾರಿದೆ. ಒಂದು ಕಡೆ ರಾಜಕಾಲುವೆ ಇದ್ದು ಮಳೆ ನೀರು ಕೆರೆಗೆ ಹರಿಯುವ ಜಾಗದಲ್ಲಿ ಕಸ ಎಸೆದಿರುವುದರಿಂದ ಕೆರೆಗೆ ತ್ಯಾಜ್ಯ ವಸ್ತುಗಳು ಹರಿದು ಕೆರೆ ಮಲೀನಗೊಂಡಿದೆ. ಮತ್ತೊಂದು ಕಡೆ ರಾಜಕಾಲುವೆಯನ್ನೇ ಮುಚ್ಚಿದ್ದರೂ ಪಂಚಾಯಿತಿ ಅಧಿಕಾರಿಗಳು ಏಕೆ ಮೌನವಾಗಿದ್ದಾರೆಂಬುದೇ ಅರ್ಥವಾಗುತ್ತಿಲ್ಲ. ಗ್ರಾಮಗಳಲ್ಲಿ ಸೊಳ್ಳೆ ಹಾವಳಿಇದರಿಂದ ಇತ್ತೀಚಿಗೆ ಸುರಿದ ಮಳೆಗೆ ಸೊಳ್ಳೆಗಳು ಉತ್ಪತ್ತಿಯಾಗಿ ಹಲವು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನರಿದ್ದಾರೆ. ಜಿಲ್ಲಾಡಳಿತವಾದರೂ ಇತ್ತ ಗಮನಹರಿಸಿ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ರಾಜಕಾಲುವೆ,ರಸ್ತೆ ಬದಿಗಳಲ್ಲಿ ಕಸ ಎಸೆಯುವುದಕ್ಕೆ ಅಂತ್ಯ ಹಾಡಿ ಉತ್ತಮ ಪರಿಸರ ನಿರ್ಮಿಸಲಿ ಎಂದು ನಾಗರೀಕರು ಒತ್ತಾಯಿಸಿದ್ದಾರೆ.