ಸಾರಾಂಶ
ಶಿಗ್ಗಾವಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇಡಿನ ರಾಜಕೀಯ ಮಾಡಿದ್ದಾರೆ. ಸತ್ತವರ ಮನೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇವರ ಹೊಲಸು ರಾಜಕಾರಣಕ್ಕೆ ತಕ್ಕಪಾಠ ಕಲಿಸಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ವಾಗ್ದಾಳಿ ನಡೆಸಿದರು.
ತಾಲೂಕಿನ ತಡಸ ಕ್ರಾಸ್‌ನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ನಡೆಸಿದ ಅವರು, ನೀವು ಕೇಂದ್ರ ಮಂತ್ರಿ ಆಗಿದ್ರಿ, ಕಳಸಾ- ಬಂಡೂರಿ ಯೋಜನೆ ಏನಾಯಿತು? ಬರೀ ಕೇಸ್ ಹಾಕಿಸೋದು, ಸಿಬಿಐಗೆ ಕೊಡೋದು ಇದೇ ನಿಮ್ಮ ಕಸುಬು. ನನ್ನ ಕ್ಷೇತ್ರಕ್ಕೆ ನನಗೆ ಹೋಗಲು ಬಿಟ್ಟಿಲ್ಲ. ಮತದಾರರೇ ಪ್ರಹ್ಲಾದ್ ಜೋಶಿ ಅವರನ್ನು ಮನೆಗೆ ಕಳಿಸುವ ಬಗ್ಗೆ ಯೋಚನೆ ಮಾಡ್ರಿ. ಜೋಶಿಯವರೇ ನಾನು ಹಿಂದಿನ ಲೋಕಾ ಚುನಾವಣೆಯಲ್ಲಿ ಸೋತಿರಬಹುದು, ಸತ್ತಿಲ್ಲ. ಬಿಜೆಪಿಯವರ ಹೊಲಸು ಮತ್ತು ದ್ವೇಷದ ರಾಜಕಾರಣಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆದಾಯ ದ್ವಿಗುಣಗೊಂಡಿಲ್ಲ: ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಮೋದಿ ಅವರ ಆಡಳಿತದಲ್ಲಿ ರೈತರ ಆದಾಯ ದ್ವಿಗುಣಗೊಂಡಿಲ್ಲ. ಎರಡು ಕೋಟಿ ಉದ್ಯೋಗ ಲಭಿಸಿಲ್ಲ. ಆದರೆ, ಅಂಬಾನಿ ಆದಾಯ 11 ಲಕ್ಷ ಕೋಟಿ ರು.ಗೆ ಏರಿದೆ. ಮೋದಿಯವರೇ ಸುಳ್ಳು ಹೇಳುವುದನ್ನು ದಯವಿಟ್ಟು ನಿಲ್ಲಿಸಿ. ಮಹದಾಯಿ, ಕಳಸಾ -ಬಂಡೂರಿ ಯೋಜನೆಗೆ ಅನುಮತಿ ಕೊಡಲು ವಿಶ್ವಗುರುವಿಗೆ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಭಾರತ ದೇಶ ಹಿಂದೂ– ಮುಸ್ಲಿಮರನ್ನೊಳಗೊಂಡ ಸೌಹಾರ್ದ ರಾಷ್ಟ್ರ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾತಿ, ಧರ್ಮಗಳ ಮಧ್ಯೆ ದ್ವೇಷ ಬಿತ್ತುತ್ತಿದ್ದಾರೆ. ಜಾತಿ ಜಗಳ ಹಚ್ಚಿ, ಕೋಮುಸೌಹಾರ್ದ ಕೆಡಿಸುತ್ತಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಕಾಂಗ್ರೆಸ್‌ಗೆ ಬೆಂಬಲ ನೀಡಿ, ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕರಾದ ಬಸವರಾಜ ಶಿವಣ್ಣನವರ, ಎನ್.ಎಚ್. ಕೋನರೆಡ್ಡಿ, ಮುಖಂಡರಾದ ಸೋಮಣ್ಣ ಬೇವಿನಮರದ, ಅಜೀಂಪೀರ್ ಖಾದ್ರಿ, ಸಂಜೀವಕುಮಾರ ನೀರಲಗಿ, ರಾಜೇಶ್ವರಿ ಪಾಟೀಲ ಇತರರು ಇದ್ದರು.