ಹತ್ತು ವರ್ಷಗಳ ಹಿಂದೆ ನಡೆದಿದ್ದ (2016ರ ಜೂನ್ 15) ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಧಾರವಾಡ ಜಿಲ್ಲೆಯ ಪ್ರವೇಶದ ನಿಷೇಧಕ್ಕೆ ಒಳಗಾಗಿದ್ದ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಬರೋಬ್ಬರಿ ಆರು ವರ್ಷಗಳ ನಂತರ ತವರೂರು ಧಾರವಾಡ ಪ್ರವೇಶಿಸಲು ಸಜ್ಜಾಗಿದ್ದಾರೆ.
ಧಾರವಾಡ:
ಹತ್ತು ವರ್ಷಗಳ ಹಿಂದೆ ನಡೆದಿದ್ದ (2016ರ ಜೂನ್ 15) ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಧಾರವಾಡ ಜಿಲ್ಲೆಯ ಪ್ರವೇಶದ ನಿಷೇಧಕ್ಕೆ ಒಳಗಾಗಿದ್ದ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಬರೋಬ್ಬರಿ ಆರು ವರ್ಷಗಳ ನಂತರ ತವರೂರು ಧಾರವಾಡ ಪ್ರವೇಶಿಸಲು ಸಜ್ಜಾಗಿದ್ದಾರೆ.ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ನೀಡಿದ್ದ ಜೀವಾವಧಿ ಶಿಕ್ಷೆಗೆ ಜುಲೈ 31ರಂದು ಹೈಕೋರ್ಟ್ ಜಾಮೀನು ನೀಡುವ ಮೂಲಕ ವಿನಯ ಕುಲಕರ್ಣಿ ಅವರಿಗೆ ದೊಡ್ಡ ಜಯ ಸಿಕ್ಕಂತಾಗಿತ್ತು. ಆದರೆ, ಸಾಕ್ಷಿ ನಾಶ ಪ್ರಕರಣದಲ್ಲಿ ಅವರಿಗೆ ಧಾರವಾಡ ಪ್ರವೇಶಾವಕಾಶ ಇರಲಿಲ್ಲ. ಇದೀಗ ಪ್ರಕರಣದ ತನಿಖೆ ಸಂಪೂರ್ಣವಾಗಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಸಾಕ್ಷಿ ನಾಶ ಪ್ರಕರಣದಲ್ಲೂ ಅವರಿಗೆ ನಿರಾಳತೆ ಒದಗಿಸಿದೆ. ಹೀಗಾಗಿ ಜಿಲ್ಲೆಯ ಪ್ರವೇಶಕ್ಕೆ ವಿನಯ ಅವರಿಗೆ ಮುಕ್ತ ಹಾದಿ ದೊರೆತಂತಾಗಿದೆ.
ಶುಕ್ರವಾರ ಆಗಮನ:ಆ. 28ರ ಶುಭ ಶುಕ್ರವಾರ ರಕ್ಷಾ ಬಂಧನದ ದಿನವೇ ವಿನಯ ಕುಲಕರ್ಣಿ ಧಾರವಾಡ ಪ್ರವೇಶಿಸಲಿದ್ದಾರೆ. ಬೆಂಗಳೂರಿನಿಂದ ನೇರವಾಗಿ ಮುರುಘಾಮಠಕ್ಕೆ ಬಂದು ಮೃತ್ಯುಂಜಯ ಹಾಗೂ ಮಹಾಂತ ಅಪ್ಪಗಳ ಗದ್ದುಗೆಯ ಆಶೀರ್ವಾದ ಪಡೆದು ನಂತರ ಮನೆಗೆ ಹೋಗಲಿದ್ದಾರೆ ಎಂದು ಅವರ ಆಪ್ತರು ಪತ್ರಿಕೆಗೆ ತಿಳಿಸಿದ್ದಾರೆ. ಇನ್ನು, ಸುದೀರ್ಘ ವರ್ಷಗಳ ನಂತರ ನೆಚ್ಚಿನ ಮುಖಂಡನ ಆಗಮನ ಹಿನ್ನೆಲೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರು ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
2020ರಲ್ಲಿ ಬಂಧನ:ಈ ಕೊಲೆ ಪ್ರಕರಣದಲ್ಲಿ 750ಕ್ಕೂ ಹೆಚ್ಚು ಜನರ ವಿಚಾರಣೆ ಮಾಡಿದ್ದ ನ್ಯಾಯಾಲಯವು 2020ರ ನವೆಂಬರ್ 4ರಂದು ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಒಂಭತ್ತು ತಿಂಗಳು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವಿನಯ, 2023ರ ಆ. 13ರಂದು ಸುಪ್ರೀಂಕೋರ್ಟ್ ನೀಡಿದ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಆದರೂ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ಕಿತ್ತೂರು, ಸವದತ್ತಿ ಹಾಗೂ ಬೆಂಗಳೂರಿನಲ್ಲಿ ಕುಳಿತು ಕ್ಷೇತ್ರದ ಆಗು-ಹೋಗುಗಳನ್ನು ವಿನಯ ಕುಲಕರ್ಣಿ ನೋಡಿಕೊಳ್ಳುತ್ತಿದ್ದರು.
ಮತ್ತೆ ಬಂಧನ:ಇನ್ನು, ಸಾಕ್ಷಿಗಳಿಗೆ ಆಮಿಷವೊಡ್ಡಿದ ಆರೋಪ ಸಹ ಎದುರಿಸುತ್ತಿದ್ದ ವಿನಯ ಅವರಿಗೆ ಸಿಬಿಐ ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂಕೊರ್ಟ್ 2025ರ ಜೂನ್ 6ರಂದು ಅವರ ಜಾಮೀನು ರದ್ದುಗೊಳಿಸಿ ವಾರದೊಳಗೆ ಪೊಲೀಸರಿಗೆ ಶರಣಾಗುವಂತೆ ಆದೇಶಿಸಿತ್ತು. ಇದಾದ ಬಳಿಕ ಸಂಪೂರ್ಣ ವಿಚಾರಣೆ ನಂತರ 2026ರ ಏ.17ರಂದು ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲು ಏರಿದ್ದ ವಿನಯ ಕುಲಕರ್ಣಿ ಅವರಿಗೆ ಜು. 31ರಂದು ಜಾಮೀನು ನೀಡಿತ್ತು. ಇದೀಗ ಸಾಕ್ಷಿ ನಾಶ ಪ್ರಕರಣದಲ್ಲಿ ಅವರಿಗೆ ಧಾರವಾಡ ಪ್ರವೇಶಕ್ಕಿದ್ದ ನಿರ್ಬಂಧ ಇದೀಗ ತೆರವುಗೊಂಡಂತಾಗಿದೆ.ಸ್ವಾಗತ, ರ್‍ಯಾಲಿ ಇಲ್ಲ...ಶಾಸಕ ವಿನಯ ಕುಲಕರ್ಣಿ ಅವರಿಗೆ ಸಾಕ್ಷಿ ನಾಶದ ಪ್ರಕರಣದಲ್ಲಿ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿದ್ದರೂ ನ್ಯಾಯಾಲಯವು ಹಲವು ಕಟ್ಟುನಿಟ್ಟಿನ ಷರತ್ತು ವಿಧಿಸಿದೆ. ಜಿಲ್ಲೆಗೆ ಪ್ರವೇಶಿಸುವ ಸಂದರ್ಭದಲ್ಲಿ ಯಾವುದೇ ಸ್ವಾಗತ, ಮೆರವಣಿಗೆ, ರ‍್ಯಾಲಿ, ಸಂಭ್ರಮಾಚರಣೆ ಅಥವಾ ಸಾರ್ವಜನಿಕ ಸಭೆ ಆಯೋಜಿಸುವಂತಿಲ್ಲ. ಪ್ರವೇಶದ ವೇಳೆ ಸಾರ್ವಜನಿಕ ಶಾಂತಿ, ಸಂಚಾರ ಅಥವಾ ಸಾಮಾನ್ಯ ಜನಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಕರಣದ ಯಾವುದೇ ಸಾಕ್ಷಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸುವುದು, ಬೆದರಿಸುವುದು, ಪ್ರಭಾವ ಬೀರುವುದು, ಸಾಕ್ಷ್ಯವನ್ನು ಬದಲಾಯಿಸುವುದು ಅಥವಾ ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವುದು ಸೇರಿದಂತೆ ಯಾವುದೇ ರೀತಿಯ ಹಸ್ತಕ್ಷೇಪ ಮಾಡಬಾರದು ಎಂಬ ಷರತ್ತುಗಳನ್ನೂ ನ್ಯಾಯಾಲಯ ವಿಧಿಸಿದೆ.