ಬಸವರಾಜ ಹಿರೇಮಠ
ಧಾರವಾಡ: ಬರೋಬ್ಬರಿ ಹತ್ತು ವರ್ಷಗಳ ಹಿಂದೆ ನಡೆದಿದ್ದ ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ದ್ವಿಸದಸ್ಯ ಪೀಠ ಶುಕ್ರವಾರ ನೀಡಿರುವ ಮಹತ್ವದ ಆದೇಶ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಪಾಲಾಗಿದ್ದ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ದೊಡ್ಡ ನಿರಾಳತೆ ತಂದಂತಾಗಿದೆ.ಈ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಸೇರಿ 17 ಮಂದಿ ಆರೋಪಿಗಳನ್ನು ಕಳೆದ ಏ. 17ರಂದು ಅಪರಾಧಿಗಳು ಎಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ಸೆಷೆನ್ಸ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಹೀಗಾಗಿ, ವಿನಯ ಕುಲಕರ್ಣಿ ಅವರಿಗೆ ಶಾಸಕ ಸ್ಥಾನ ಹೋಗುವುದಲ್ಲದೇ ಜೀವನಪೂರ್ತಿ ಜೈಲು ಪಾಲಾಗುವ ದೊಡ್ಡ ಕಂಟಕ ಎದುರಾಗಿತ್ತು. ಸುದೀರ್ಘ ಕಾನೂನು ಹೋರಾಟದ ನಂತರ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಲ್ಲದೇ, ಕ್ಷೇತ್ರ ಪ್ರವೇಶಕ್ಕೂ ಅವಕಾಶ ನೀಡಿರುವುದು ಅವರಿಗಷ್ಟೇ ಅಲ್ಲದೇ ಕ್ಷೇತ್ರದ ಜನರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಮತ್ತಷ್ಟು ಹುಮ್ಮಸ್ಸು ತಂದಿದೆ.
ಅನ್ನ ಸಂತರ್ಪಣೆವಿನಯ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಕ್ಷೇತ್ರದಲ್ಲಿ ಪಟಾಕಿ ಹಾರಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಸಹ ಮಾಡಲಾಯಿತು. ಇಲ್ಲಿಯ ಹೆಬ್ಬಳ್ಳಿ ಅಗಸಿ ವೃತ್ತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಸೇರಿ ವಿನಯ ಕುಲಕರ್ಣಿ ಪರ ಘೋಷಣೆಗಳನ್ನು ಕೂಗುತ್ತ ವಿಜಯೋತ್ಸವ ಆಚರಿಸಿದರು. ಇನ್ನು, ವಿನಯ ಅವರ ಅಪ್ಪಟ ಅಭಿಮಾನಿ ಬಸವರಾಜ ಜಾಧವ ಅವರಿಂದ ಶುಕ್ರವಾರ ಮಧ್ಯಾಹ್ನ ಗಾಂಧಿಚೌಕ್‌ನಲ್ಲಿ ಸಾವಿರ ಜನರಿಗೆ ಅನ್ನಸಂತರ್ಪಣೆ ಸಹ ಮಾಡಿಸಿದ್ದು ವಿಶೇಷ ಎನ್ನಿಸಿತು.
ಪಕ್ಷ ಸಂಘಟನೆಗೆ ಬಲ
ಹಾಗೆಯೇ, ಅವರ ಜಾಮೀನು ಸುದ್ದಿಯು ಪಕ್ಷದ ಮುಖಂಡರಿಗೆ ಬಲ ತಂದಿದ್ದು, ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ. ವಿನಯ ಕುಲಕರ್ಣಿ ಪರ ವಕೀಲರು ಸಮರ್ಥ ವಾದ ಮಂಡಿಸಿ, ಜಾಮೀನು ಕೊಡಿಸುವಲ್ಲಿ ಹಾಗೂ ಕ್ಷೇತ್ರಕ್ಕೆ ಪ್ರವೇಶ ದೊರಕಿಸಿಕೊಡುವಲ್ಲಿ ಯಶ ಸಾಧಿಸಿದ್ದಾರೆ. ಮುಂದಿನ ದಿನಗಳಲ್ಲೂ ಅವರಿಗೆ ಶಾಶ್ವತ ಜಯ ಸಿಗಲಿದೆ. ಕ್ಷೇತ್ರದಲ್ಲಿ ಪಕ್ಷ ಸಂಘಟಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಇನ್ನೂ ಹೆಚ್ಚು ಶಕ್ತಿ ಬಂದಂತಾಗಿದೆ ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ ಶಿವಳ್ಳಿ ಹಾಗೂ ಅರವಿಂದ ಏಗನಗೌಡರ ವಿಶ್ವಾಸ ವ್ಯಕ್ತಪಡಿಸಿದರು.
ಕಳವಳವಿನಯ ಕುಲಕರ್ಣಿ ಅವರಿಗೆ ಜಾಮೀನು ಮಂಜೂರಾಗಿ ಪಕ್ಷದ ಮುಖಂಡರು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿದರೆ, ಯೋಗೀಶಗೌಡ ಅವರ ಸಹೋದರ ಗುರುನಾಥ ಗೌಡ ಹಾಗೂ ಹೋರಾಟಗಾರ ಬಸವರಾಜ ಕೊರವರ ಕಳವಳ ವ್ಯಕ್ತಪಡಿಸಿದ್ದಾರೆ. ಕಾನೂನು ನ್ಯಾಯದ ಪರವಾಗಿದೆ ಎಂದು ನಾವು ತಿಳಿದಿದ್ದೇವೆ. ಹೈಕೋರ್ಟ್‌ನಲ್ಲಿ ಜಾಮೀನಾಗಿದ್ದರೂ ಸುಪ್ರಿಂಕೋರ್ಟ್ ಇದ್ದು ಅಲ್ಲಿ ನ್ಯಾಯ ಪಡೆಯುತ್ತೇವೆ ಎಂದು ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯಕ್ಕಿಲ್ಲ ಉಪ ಚುನಾವಣೆಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಕಳೆದ ಏ. 17ರಂದು ಜಿಲ್ಲಾ ಸೆಷೆನ್ಸ್ ನ್ಯಾಯಾಲಯ ವಿನಯ ಕುಲಕರ್ಣಿ ಸೇರಿ ಇತರರಿಗೆ ಜೀವಾವಧಿ ಶಿಕ್ಷೆ ನೀಡಿದ ಬಳಿಕ ಇನ್ನೇನು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದು ನಿಶ್ಚಿತ ಎನ್ನಲಾಗಿತ್ತು. ಜೊತೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳೂ ಹುಟ್ಟಿಕೊಂಡಿದ್ದರು. ಕಾಂಗ್ರೆಸ್ಸಿನಲ್ಲಿಯೇ ಕೆಲವು ಮುಖಂಡರು ಉಪ ಚನಾವಣೆಗೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಸಹ ಕೈಗೊಂಡಿದ್ದು, ಇದೀಗ ವಿನಯ ಕುಲಕರ್ಣಿ ಅವರಿಗೆ ಜಾಮೀನು ಹಾಗೂ ಜಿಲ್ಲೆಯ ಪ್ರವೇಶ ಉಪ ಚುನಾವಣೆಗೆ ಸದ್ಯಕ್ಕೆ ತಡೆ ನೀಡಿದಂತಾಗಿದೆ.
ಏನಿದು ಪ್ರಕರಣ?2016ರ ಜೂನ್ 15ರಂದು ಧಾರವಾಡದ ಸಪ್ತಾಪೂರದ ಅವರದ್ದೇಯಾದ ಜಿಮ್‌ನಲ್ಲಿ ಯೋಗೀಶಗೌಡನ ಬರ್ಬರ ಹತ್ಯೆಯಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರಿಂದ ತನಿಖೆ ನಡೆದಿತ್ತು. ನಂತರ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಈ ಪ್ರಕರಣದಲ್ಲಿ ವಿನಯ ಕುಲಕರ್ಣಿ 2020ರಲ್ಲಿ ಬಂಧನಕ್ಕೆ ಒಳಗಾದರು. ತದನಂತರ 2021ರಲ್ಲಿ ಜಾಮೀನು ಪಡೆದಿದ್ದರು. ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಸುಪ್ರಿಂ ಕೋರ್ಟ್ ಇವರ ಜಾಮೀನು ರದ್ದುಗೊಳಿಸಿತ್ತು. ಎರಡು ಕಡೆಯಿಂದ ವಾದ-ಪ್ರತಿವಾದ ಹಾಗೂ ಸಾಕ್ಷಿಗಳ ವಿಚಾರಣೆ ನಡೆದು ಕಳೆದ ಏ. 17ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಸೆಷೆನ್ಸ್ ನ್ಯಾಯಾಲಯ ಆದೇಶ ನೀಡಿತ್ತು.