ನ್ಯಾಯಾಲಯದ ಆದೇಶ ಉಲ್ಲಂಘನೆ, ಮರಳಿಗ ಗ್ರಾಪಂ ಆಸ್ತಿ ಜಪ್ತಿ

| Published : Mar 29 2024, 12:46 AM IST

ಸಾರಾಂಶ

ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ 2009ರ ನವೆಂಬರ್ 21ರಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು. ಗಂಡನ ಸಾವಿಗೆ ಗ್ರಾಪಂ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ, ಪರಿಹಾರ ಕೋರಿ ರವಿ ಪತ್ನಿ ಸುಜಾತ ಮನವಿ ಸಲ್ಲಿಸಿದ್ದರು. ಆನಂತರ ಗ್ರಾಪಂ ಪಿಡಿಒ ಹಾಗೂ ಜನಪ್ರತಿನಿಧಿಗಳು ಪರಿಹಾರ ನೀಡದೆ ವಿಳಂಬ ಮಾಡಿದ್ದರು. ಈ ಬಗ್ಗೆ ಸುಜಾತ ತಮ್ಮ ಪರ ವಕೀಲ ಬಿ. ರಾಮಕೃಷ್ಣೇಗೌಡ ಹಾಗೂ ಸಹ ವಕೀಲ ಸುನಿಲ್ ಮೂಲಕ ಮದ್ದೂರು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ಗ್ರಾಪಂ ನೌಕರನಿಗೆ ಪರಿಹಾರ ನೀಡದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದ ತಾಲೂಕಿನ ಕೊಪ್ಪ ಹೋಬಳಿ ಮರಳಿಗ ಗ್ರಾಪಂನ ಆಸ್ತಿಯನ್ನು ಗುರುವಾರ ಜಪ್ತಿ ಮಾಡಲಾಗಿದೆ.

ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ 2009ರ ನವೆಂಬರ್ 21ರಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು. ಗಂಡನ ಸಾವಿಗೆ ಗ್ರಾಪಂ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ, ಪರಿಹಾರ ಕೋರಿ ರವಿ ಪತ್ನಿ ಸುಜಾತ ಮನವಿ ಸಲ್ಲಿಸಿದ್ದರು. ಆನಂತರ ಗ್ರಾಪಂ ಪಿಡಿಒ ಹಾಗೂ ಜನಪ್ರತಿನಿಧಿಗಳು ಪರಿಹಾರ ನೀಡದೆ ವಿಳಂಬ ಮಾಡಿದ್ದರು. ಈ ಬಗ್ಗೆ ಸುಜಾತ ತಮ್ಮ ಪರ ವಕೀಲ ಬಿ. ರಾಮಕೃಷ್ಣೇಗೌಡ ಹಾಗೂ ಸಹ ವಕೀಲ ಸುನಿಲ್ ಮೂಲಕ ಮದ್ದೂರು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ನ್ಯಾಯಾಲಯದಲ್ಲಿ 15 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದ ನಂತರ ಮೊದಲ ಹಂತದಲ್ಲಿ ನ್ಯಾಯಾಧೀಶರು ಸುಜಾತಾಳಿಗೆ 4,24,840 ರು. ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದರು. ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡದ ಗ್ರಾಪಂ ಪಿಡಿಒ ಲತಾಮಣಿ ಹಾಗೂ ಅಧ್ಯಕ್ಷೆ ಸುವರ್ಣ ನಿರ್ಲಕ್ಷ್ಯ ವಹಿಸಿದ್ದರು.

ಅಂತಿಮವಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜೆಎಂಎಫ್ ಸಿ ಸಿವಿಲ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ. ಶ್ರೀವಿದ್ಯಾ ಅವರು ಪರಿಹಾರದ ಜೊತೆಗೆ ಬಡ್ಡಿ ಸೇರಿಸಿ 11 ಲಕ್ಷದ 47 ಸಾವಿರದ 697 ರು. ಗಳನ್ನು ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದರು.

ನ್ಯಾಯಾಲಯದ ಆದೇಶಕ್ಕೆ ಕಿಂಚೆತ್ತೂ ಬೆಲೆ ನೀಡದ ಗ್ರಾಪಂ ಅಧಿಕಾರಿಗಳ ನಿಲುವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶೆ ರಾಧಾ ಕೆ. ಶ್ರೀ ವಿದ್ಯಾ ಮರಳಿಗ ಗ್ರಾಪಂ ಆಸ್ತಿಗಳನ್ನು ನ್ಯಾಯಾಲಯದ ವಶಕ್ಕೆ ತೆಗೆದುಕೊಳ್ಳುವಂತೆ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಮೀನಾ ಚಂದ್ರಶೇಖರ್ ಗುರುವಾರ ಗ್ರಾಪಂಗೆ ತೆರಳಿ ಕಂಪ್ಯೂಟರ್, ವಿದ್ಯುತ್ ಉಪಕರಣ ಹಾಗೂ ಪೀಠೋಪಕರಣಗಳನ್ನು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ತೆಗೆದುಕೊಂಡಿದ್ದಾರೆ.