ಸಾರಾಂಶ
ಹುಕ್ಕೇರಿತಾಲೂಕು ಮಟ್ಟದ ದಸರಾ ಕ್ರೀಡಾಕೂಟ, ಜನಸ್ಪಂದನ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಹುಕ್ಕೇರಿ ತಾಲೂಕು ಆಡಳಿತ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದೆ ಎಂದು ಪುರಸಭೆ ನೂತನ ಅಧ್ಯಕ್ಷ ಇಮ್ರಾನ್ ಮೋಮಿನ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕು ಮಟ್ಟದ ದಸರಾ ಕ್ರೀಡಾಕೂಟ, ಜನಸ್ಪಂದನ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಹುಕ್ಕೇರಿ ತಾಲೂಕು ಆಡಳಿತ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದೆ ಎಂದು ಪುರಸಭೆ ನೂತನ ಅಧ್ಯಕ್ಷ ಇಮ್ರಾನ್ ಮೋಮಿನ್ ಆರೋಪಿಸಿದ್ದಾರೆ.ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ವ್ಯಾಪ್ತಿಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸೇರಿದಂತೆ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ. ಕ್ಯಾರಗುಡ್ಡ ಬಳಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ನನಗೆ ಆಹ್ವಾನ ನೀಡಿಲ್ಲ. ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮಕ್ಕೂ ಆಹ್ವಾನಿಸಿಲ್ಲ. ಈ ಕುರಿತು ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದವರು ಹೇಳಿದರು.
ಸರ್ಕಾರಿ ಕಾರ್ಯಕ್ರಮಗಳಿಗೆ ಪಟ್ಟಣದ ಪ್ರಥಮ ಪ್ರಜೆಯಾದ ನನ್ನನ್ನು ಪರಿಗಣಿಸಬೇಕು. ಇದು ಸಂಪ್ರದಾಯ ಮತ್ತು ರೂಢಿಯಲ್ಲಿರುವ ಪದ್ಧತಿ. ಈ ವಿಚಾರವನ್ನು ತಾಲೂಕು ಆಡಳಿತ ಮರೆತಂತೆ ವರ್ತಿಸುತ್ತಿದೆ. ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಂಥ ಕಚೇರಿಗಳ ಬಳಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.ಉಪಾಧ್ಯಕ್ಷೆ ಜ್ಯೋತಿ ಬಡಿಗೇರ, ಸದಸ್ಯರಾದ ಸದಾಶಿವ ಕರೆಪ್ಪಗೋಳ, ಆನಂದ ಗಂಧ, ಮಹಾಂತೇಶ ತಳವಾರ, ಚಂದು ಮುತ್ನಾಳೆ ಮತ್ತಿತರರು ಉಪಸ್ಥಿತರಿದ್ದರು.