ಪ್ರಾಣಿಹತ್ಯೆ ತಡೆಯದಿದ್ದರೆ ಹೈಕೋರ್ಟ್ ಆದೇಶ ಉಲ್ಲಂಘನೆ

| Published : Dec 18 2023, 02:00 AM IST

ಸಾರಾಂಶ

ದೇವಿಕೇರಿ ಜಾತ್ರೆಯಲ್ಲಿ ಪ್ರಾಣಿಬಲಿ ಸಾಧ್ಯತೆ ಪ್ರಕರಣ, ಪ್ರಾಣಿಹತ್ಯೆ ತಡೆಯದಿದ್ದರೆ ಜಿಲ್ಲಾ ಆಡಳಿತ ವಿರುದ್ಧ ಹೈಕೋರ್ಟ್‌ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ದಯಾನಂದ್ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಇದೇ ಡಿ.18ರಿಂದ ಎರಡು ದಿನಗಳ ಕಾಲ ನಡೆಯಲಿರುವ ಗ್ರಾಮ ದೇವತೆ ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಪ್ರಾಣಿಗಳ ಬಲಿ ಸಾಧ್ಯತೆ ತಡೆಯಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿರುವ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ, ಇದನ್ನು ತಡೆಯದಿದ್ದರೆ ಆಡಳಿತ ವಿರುದ್ಧ ಹೈಕೋರ್ಟ್‌ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಾಣಿಬಲಿ ಕುರಿತು ಕನ್ನಡಪ್ರಭದಲ್ಲಿ ಡಿ.16ರಂದು ಪ್ರಕಟಗೊಂಡ ವರದಿ ಗಮನಿಸಿ, ಭಾನುವಾರ ಬೆಂಗಳೂರಿನಿಂದ ಯಾದಗಿರಿಗೆ ಆಗಮಿಸಿರುವ ದಯಾನಂದ ಸ್ವಾಮೀಜಿ ಹಾಗೂ ಮತ್ತವರ ತಂಡ, ಡಿ.18ರಂದು ದೇವಿಕೇರಾ ಗ್ರಾಮಕ್ಕೆ ತೆರಳಿ, ಜನಜಾಗೃತಿ ಹಾಗೂ ಪ್ರಾಣಿಬಲಿ ವಿರೋಧಿ ಕುರಿತು ಅರಿವು ಮೂಡಿಸುವ ಯತ್ನಕ್ಕೆ ಕೈಹಾಕಲಿದ್ದಾರೆ.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿ, ಜಾತ್ರೆಯ ವೇಳೆ ದೇವರ ಹೆಸರಲ್ಲಿ ಮೂಕಪ್ರಾಣಿಗಳ ಹತ್ಯೆ ಮಾಡುವುದು 1959ರ ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ ಕಾನೂನು ಪ್ರಕಾರ ದೇವರು-ಧರ್ಮದ ಹೆಸರಲ್ಲಿ, ಹರಕೆಯ ರೂಪದಲ್ಲಿ ಜಾತ್ರಾ ಪರಿಸರಗಳು, ಧಾರ್ಮಿಕ ಸಮಾವೇಶಗಳು, ಹೊಲಗದ್ದೆಗಳು ಮುಂತಾದೆಡೆ ಕುರಿ-ಕೋಣ-ಕೋಳಿ- ಆಡು ಮೊದಲಾದ ಯಾವುದೇ ವಯಸ್ಸಿನ, ಯಾವುದೇ ಪ್ರಾಣಿಗಳ ಹತ್ಯೆ ಮಾಡುವುದು ನಿಷೇಧಿಸಲಾಗಿದೆ, ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ಜಿಲ್ಲಾಡಳಿತದ ಜೊತೆ ಶನಿವಾರವೇ ಮಾತನಾಡಿದ್ದೇನೆ, ನಾನು ಗ್ರಾಮಕ್ಕೆ ತೆರಳಿ ಪ್ರಾಣಿಬಲಿ ತಡೆ ಅರಿವು ಮೂಡಿಸುವ ಯತ್ನ ಮಾಡುತ್ತೇನೆಂದ ಅವರು, ಒಂದು ವೇಳೆ ಪ್ರಾಣಿಬಲಿ ತಡೆಯುವಲ್ಲಿ ಜಿಲ್ಲಾಡಳಿತ, ಸರ್ಕಾರ ಮತ್ತು ಪೊಲೀಸ್‌ ಇಲಾಖೆಯ ಮುಂದಾಗದಿದ್ದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು.

ಪ್ರಾಣಿಬಲಿ ಅವೈಜ್ಞಾನಿಕ, ಅನಾಗರಿಕ ಹಾಗೂ ಅಂಧಶ್ರದ್ಧೆಯಿಂದ ಕೂಡಿದೆ. ದೇವಾಲಯಗಳು ವಧಾಲಯಗಳಾಗದೇ ದಿವ್ಯಾಲಯಗಳಾಗಬೇಕು, ಧ್ಯಾನಾಯಲಯಗಳಾಗಬೇಕು ಎಂದರು. ಜಾತ್ರಾ ಪರಿಸರಗಳು ಹಾಗೂ ಧಾರ್ಮಿಕ ಸ್ಥಾನಗಳು ಕಟುಕರ ಕೇರಿಗಳಾಗದೆ, ರಕ್ತ, ಮೂಳೆ, ಮಾಂಸಗಳ, ಪ್ರಾಣಿಗಳ ಚೀತ್ಕಾರ, ಆಕ್ರಂದನಗಳ ಆಗರವಾಗಬಾರದು ಎಂದರು.

ಬೆಂಗಳೂರಿನಿಂದ ಆಗಮಿಸಿರುವ ತಮ್ಮ ತಂಡ, ಡಿ.18 ರಿಂದ ಎರಡು ದಿನಗಳ ಕಾಲ ಜಾತ್ರೆಯ ಮುಗಿಯುವವರೆಗೂ ಗ್ರಾಮದಲ್ಲೇ ಬಿಡಾರ ಹೂಡಿ, ಜನರ ಅರಿವು ಮೂಡಿಸುವ ಯತ್ನಕ್ಕೆ ಮುಂದಾಗುವುದಾಗಿ ಸ್ವಾಮೀಜಿ ಕನ್ನಡಪ್ರಭಕ್ಕೆ ತಿಳಿಸಿದರು.ದೇವಿಕೇರಾದಲ್ಲಿ ಬಿಗಿ ಪೊಲೀಸ್ ಭದ್ರತೆ: ತ್ರೆಯ ವೇಳೆ ಸಾವಿರಾರು ಮೂಕಪ್ರಾಣಿಗಳ ಬಲಿ ಹಾಗೂ ದಲಿತರ ಮೇಲೆ ದೌರ್ಜನ್ಯ ಆರೋಪಕ್ಕೆ ಗುರಿಯಾಗಿದ್ದ ದೇವಿಕೇರಾದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಗ್ರಾಮದಲ್ಲಿ ಶಾಂತಿಯುತ ವಾತಾವರಣ ಕಾಪಾಡುವ ಉದ್ದೇಶದಿಂದ ಹಾಗೂ ಜಾತ್ರೆಯಲ್ಲಿ ಯಾವುದೇ ತರಹದ ಪ್ರಾಣಿಗಳ ಬಲಿ ನೀಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.