ಸಾರಾಂಶ
ಶಿವಮೊಗ್ಗ : 1978ರ ಪೂರ್ವದಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರಿಗೆ ಭೂ ಮಂಜೂರಾತಿ ನೀಡದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್ ಆರೋಪಿಸಿದರು.
ಶಿವಮೊಗ್ಗ : 1978ರ ಪೂರ್ವದಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರಿಗೆ ಭೂ ಮಂಜೂರಾತಿ ನೀಡದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕಿನ ಗಾಂಧಿ ನಗರ ಮತ್ತು ಉಡುಗಣಿ ಗ್ರಾಮದ 150ಕ್ಕೂ ಹೆಚ್ಚು ರೈತರು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೂ ಮುನ್ನ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡಿದ್ದಾರೆ. ಕೈ ಬರಹದ ಪಹಣಿ ಮತ್ತು ದಂಡ ಕಟ್ಟಿದ ರಶೀದಿ ಹೊಂದಿದ್ದಾರೆ. ಜಮೀನು ಮಂಜೂರಾತಿ ಮಾಡುವಂತೆ ಅರಣ್ಯ ಇಲಾಖೆ ಶಿಫಾರಸ್ಸು ಮಾಡಿ 29 ವರ್ಷ ಕಳೆದರೂ ಮಂಜೂರಾತಿ ಮಾಡದೇ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ ಎಂದು ದೂರಿದರು.1978ರ ಪೂರ್ವದಲ್ಲಿ ಸಾಗುವಳಿ ಮಾಡಿದ ರೈತರು ಕೈಬರಹದ ಪಹಣಿ ಮತ್ತು ದಂಡ ಕಟ್ಟಿದ್ದ ರಶೀದಿ ಇದ್ದರೆ ಭೂ ಮಂಜೂರಾತಿ ಮಾಡಬಹುದು ಎಂದು 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿದೆ. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಂಟು ಆದೇಶಗಳಿವೆ. ಆದರೂ ಭೂ ಮಂಜೂರಾತಿ ಮಾಡಿಲ್ಲ ಎಂದರು.ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ರೈತ ಕುಟುಂಬಗಳು 5000ಕ್ಕೂ ಹೆಚ್ಚಿವೆ. ಶಿಕಾರಿಪುರ ಮತ್ತು ಸೊರಬ ಭಾಗದಲ್ಲಿ ಈ ರೀತಿಯ ಹೆಚ್ಚಿನ ರೈತರಿದ್ದಾರೆ. ಹಾಗಾಗಿ ಕೂಡಲೇ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ ಜಿಲ್ಲೆಯ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಉಪಸ್ಥಿಯಲ್ಲಿ ಸಭೆ ನಡೆದಾಗ ದಾಖಲೆಗಳ ಸಮೇತ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಲಾಗಿತ್ತು. ಆದರೆ ಇಲ್ಲಿಯ ತನಕ ಯಾವುದೇ ಹಕ್ಕುಪತ್ರ ವಿತರಣೆ ಮಾಡಿಲ್ಲ ಎಂದು ಹೇಳಿದರು.ಅರಣ್ಯ ಸಚಿವರ ತುಘಲಕ್ ದರ್ಬಾರ್: ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಮಲೆನಾಡಿನ ರೈತರ ಸಮಸ್ಯೆ ಬಗ್ಗೆ ಮಾಹಿತಿ, ಅರಣ್ಯ ಕಾನೂನು ಬಗ್ಗೆ ಮೂರು ಕಾಸಿನ ಜ್ಞಾನ ಇಲ್ಲ. ದಿನಕ್ಕೊಂದು ರೈತ ವಿರೋಧಿ ಆದೇಶಗಳನ್ನು ಹೊರಡಿಸುವ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೊಟ್ರೇಶ್, ಪರಶುರಾಮ್, ಲಕ್ಷ್ಮಣಪ್ಪ, ನಹೀಂ ಪಾಷಾ, ಸೋಮಶೇಖರಪ್ಪ, ದುಂಡಪ್ಪ, ಹುಲ್ಲಿಕತ್ತಿ ಮಲ್ಲಪ್ಪ, ರೇವಣಪ್ಪ ಮತ್ತಿತರರಿದ್ದರು.ಸಂಸದರಿಗೆ ವಿಮಾನ ಹಾರಾಟ
ಬಿಟ್ರೆ ಏನೂ ಗೊತ್ತಿಲ್ಲ ಸಂಸದ ಬಿ.ವೈ.ರಾಘವೇಂದ್ರ ತವರು ಕ್ಷೇತ್ರದಲ್ಲೇ ಅತಿ ಹೆಚ್ಚು ಅರಣ್ಯ ಭೂಮಿ ಸಮಸ್ಯೆ ಇದೆ. ಈ ಬಗ್ಗೆ ಒಂದೇ ದಿನ ಧ್ವನಿ ಎತ್ತಿಲ್ಲ. ಮಾತೆತ್ತಿದರೆ ರೈಲು ಬಿಟ್ಟೆ, ವಿಮಾನ ಹಾರಾಟ ಮಾಡಿಸಿದ್ದೇನೆ ಅಂತ ಹೇಳಿಕೆ ಕೊಡ್ತಾರೆ. ಆದರೆ ರೈತರ ಅರಣ್ಯ ಭೂಮಿ ಸಮಸ್ಯೆ ಬಗ್ಗೆ ಯಾಕೆ ಮಾತನಾಡಲ್ಲ ಎಂದು ತೀ.ನಾ.ಶ್ರೀನಿವಾಸ್ ಪ್ರಶ್ನಿಸಿದರು.ರೈತರ ಪಾಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸತ್ತು ಹೋಗಿವೆ. ಶರಾವತಿ ಮುಳುಗಡೆ ಸಂತ್ರಸ್ತರ ಒಂದು ವಿಚಾರ ಬಿಟ್ಟರೆ ಮಲೆನಾಡಿನ ಉಳಿದ ಸಮಸ್ಯೆಗಳ ಬಗ್ಗೆ ಸರ್ಕಾರ ಸಭೆ ನಡೆಸಿಲ್ಲ. ಸಿಎಂ ಹಾಗೂ ಡಿಸಿಎಂ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ಕೂಡಲೇ ಮಲೆನಾಡಿನ ರೈತರ ಸಮಸ್ಯೆಗಳ ಚರ್ಚೆ ನಡೆಸಲು ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.