ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಖಾಲಿ ಇರುವ ವಿವಿಧ ವೃಂದಗಳ 104 ಹುದ್ದೆಗಳ ನೇರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹಲವು ನಿಯಮ ಉಲ್ಲಂಘನೆಗಳಾಗಿದ್ದು, ವಯೋಮಿತಿ ಮೀರಿದವರು ಹಾಗೂ ವಿವಿಧ ಪದವೀಧರರಿಗೆ ಅನ್ಯಾಯವಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಖಾಲಿ ಇರುವ ವಿವಿಧ ವೃಂದಗಳ 104 ಹುದ್ದೆಗಳ ನೇರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹಲವು ನಿಯಮ ಉಲ್ಲಂಘನೆಗಳಾಗಿದ್ದು, ವಯೋಮಿತಿ ಮೀರಿದವರು ಹಾಗೂ ವಿವಿಧ ಪದವೀಧರರಿಗೆ ಅನ್ಯಾಯವಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಮಕಾತಿ ಅಧಿಸೂಚನೆಯಲ್ಲಿ ಗರಿಷ್ಠ ವಯೋಮಿತಿ ನಿಗದಿಪಡಿಸುವಾಗ ಸರ್ಕಾರದ ಆದೇಶವನ್ನು ಸಮರ್ಪಕವಾಗಿ ಪಾಲಿಸಿಲ್ಲ. ಇದರಿಂದ ವಿವಿಧ ವರ್ಗಗಳ ಅನೇಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಅಧಿಸೂಚನೆಯನ್ನು ರದ್ದುಪಡಿಸಿ, ಸರ್ಕಾರದ ನಿಯಮಾನುಸಾರ ತಿದ್ದುಪಡಿ ಮಾಡಬೇಕು ಎಂದು ಸಹಕಾರ ಸಚಿವರು, ರಿಸರ್ವ್ ಬ್ಯಾಂಕ್ ಹಾಗೂ ನಬಾರ್ಡ್ ಅಧಿಕಾರಿಗಳಿಗೆ ದಾಖಲೆಗಳ ಸಮೇತ ಪತ್ರ ಬರೆಯಲಾಗಿದೆ ಎಂದರು.ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಬಿ.ಎ, ಬಿ.ಎಸ್‌ಸಿ ಹಾಗೂ ಬಿ.ಕಾಂ ಪದವೀಧರರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದ ಬ್ಯಾಂಕಿಂಗ್ ವ್ಯವಹಾರಗಳಿಗೆ ಅಗತ್ಯ ಶೈಕ್ಷಣಿಕ ಸಾಮರ್ಥ್ಯ ಹೊಂದಿರುವ ಬಿಇ, ಬಿ.ಟೆಕ್, ಎಂಇ, ಎಂ.ಟೆಕ್ ಸೇರಿದಂತೆ ಇತರೆ ಪದವೀಧರರು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದರು.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ನೇಮಕಾತಿ ಅರ್ಹತೆಯಲ್ಲಿ ಅನಗತ್ಯ ನಿರ್ಬಂಧ ವಿಧಿಸುವ ಬದಲು ಸಮಾನ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಬಾಹ್ಯ ಸಂಸ್ಥೆ ಅಥವಾ ನಾಮಾಂಕಿತ ವಿಶ್ವವಿದ್ಯಾಲಯದ ಮೂಲಕ ಲಿಖಿತ ಪರೀಕ್ಷೆ ಹಾಗೂ ಮೌಲ್ಯಮಾಪನ ನಡೆಸುವ ಬದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆ ನಡೆಸಬೇಕು. ಪರೀಕ್ಷೆಯ ಬಳಿಕ ಅಭ್ಯರ್ಥಿಗಳ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಅಭ್ಯರ್ಥಿಗಳು ಪಡೆದ ಅಂಕಗಳು ಹಾಗೂ ಸಂದರ್ಶನಕ್ಕೆ 1:5 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅಂಕಗಳನ್ನೂ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.ಸಂದರ್ಶನದ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಮತ್ತು ಆಡಿಯೋ ಮೂಲಕ ದಾಖಲಿಸಬೇಕು. ಸಂದರ್ಶನದಲ್ಲಿ ನೀಡಲಾದ ಅಂಕಗಳನ್ನು ಪ್ರಕಟಿಸಿ, ಅಂತಿಮ ಆಯ್ಕೆ ಪಟ್ಟಿಯನ್ನೂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು ಎಂದು ಒತ್ತಾಯಿಸಿದರು.ಇತ್ತೀಚೆಗೆ ನಡೆದ ಬ್ಯಾಂಕ್ ಚುನಾವಣೆಯಲ್ಲಿ ಹಣಬಲ ಹಾಗೂ ತೋಳ್ಬಲ ಬಳಸಲಾಗಿದೆಂಬ ಆರೋಪಗಳಿವೆ. ಚುನಾವಣಾ ವೆಚ್ಚವನ್ನು ಮರುಪಡೆಯಲು ಒಂದೊಂದು ಹುದ್ದೆಗೆ ₹50 ರಿಂದ ₹60 ಲಕ್ಷದವರೆಗೆ ಬೇಡಿಕೆ ಇಡಲಾಗುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿದೆ. ಈ ಆರೋಪಗಳ ಬಗ್ಗೆಯೂ ರಿಸರ್ವ್ ಬ್ಯಾಂಕ್ ಹಾಗೂ ನಬಾರ್ಡ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನೇಮಕಾತಿ ಪ್ರಕ್ರಿಯೆ ಯಾವುದೇ ಅನುಮಾನಕ್ಕೆ ಅವಕಾಶ ನೀಡದಂತೆ ಪಾರದರ್ಶಕವಾಗಿ ನಡೆಯಬೇಕು ಎಂದರು.ಗೋಷ್ಠಿಯಲ್ಲಿ ಸಂಗಯ್ಯ ಹಿರೇಮಠ, ಸಿದ್ದಪ್ಪ ಬಳಿಗಾರ ಉಪಸ್ಥಿತರಿದ್ದರು.ನೇಮಕಾತಿ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದಿದ್ದರೇ ಹಾಗೂ ಕೆಇಎ ಮೂಲಕ ಪರೀಕ್ಷೆ ನಡೆಸದಿದ್ದರೇ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ನಡೆಸಲಾಗುವುದು.
-ಭೀಮಪ್ಪ ಗಡಾದ, ಮಾಹಿತಿ ಹಕ್ಕು ಕಾರ್ಯಕರ್ತ.