ಪಲ್ಲವಿ ಮೇಲೆ ದೌರ್ಜನ್ಯ: ಆರೋಪಿಗಳ ಬಂಧನಕ್ಕೆ ಆಗ್ರಹ

| Published : Jul 17 2025, 12:33 AM IST

ಸಾರಾಂಶ

ಮಾಜಿ ಸಚಿವ ಎಚ್. ಆಂಜನೇಯ ಅವರ ಧೋರಣೆಯನ್ನೂ ಪ್ರಶ್ನಿಸಿ ಅವರ ನಡತೆಯಿಂದ ಸಮುದಾಯದವರು ನಿರಾಶರಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅವರು ನಮ್ಮನ್ನು ಉಳಿಸಲು ಬದ್ಧರಾಗಿರಬೇಕು. ಸಮಾಜದಲ್ಲಿ ಗೌರವದಿಂದ ಬದುಕಲು ನಮಗೂ ಅವಕಾಶ ಬೇಕು ಎಂದು ‌ಕೋರಿದರು.

ಕನ್ನಡಪ್ರಭವಾರ್ತೆ ಹನೂರು

ಸಮಾಜ ಕಲ್ಯಾಣ ಇಲಾಖೆ ಎಸ್‌ಸಿ, ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಚಾಮರಾಜನಗರ ಜಿಲ್ಲೆ ಕೊರಮ, ಕೂರಚ, ಕೊರವ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲು ಆಗ್ರಹಿಸಿದ್ದಾರೆ.

ಪಟ್ಟಣದ ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ರಾಜ್ಯ ಮುಖಂಡ ಪಂಚಾಕ್ಷರಿ ಮಾತನಾಡಿ, ಬೆಂಗಳೂರಿನ ಗಾಂಧಿ ಭವನದಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಅವರ ನೇತೃತ್ವದಲ್ಲಿ ನಡೆದ ಅಲೆಮಾರಿ ಸಮುದಾಯದ ರಾಜ್ಯಮಟ್ಟದ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ‌ ಕೆಲ ವ್ಯಕ್ತಿಗಳು ‌ನಮ್ಮ‌ ನಿಗಮದ ಅಧ್ಯಕ್ಷೆ ಪಲ್ಲವಿ ಮತ್ತು ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಪ್ರಭಾವತಿ ಅವರಿಗೆ ಅಶ್ಲೀಲ ಪದ ಬಳಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಸಚಿವರ ಮುಂದೆಯೇ ದೌರ್ಜನ್ಯ ಎಸಗಿದ್ದಾರೆ ಎಂದು ಖಂಡಿಸಿದರು.

ಅಲ್ಲದೆ, ಈ ಘಟನೆ ನಮ್ಮ ಸಮುದಾಯದ ಗೌರವಕ್ಕೆ ಧಕ್ಕೆ ತಂದಿದ್ದು, ಇದರ ವಿರುದ್ಧ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಇಂತಹ ಘಟನೆಗಳು ಮುಂದುವರಿದರೆ ನಾವೆಲ್ಲಾ ಒಗ್ಗಟ್ಟಾಗಿ ವಿಧಾನಸೌಧ ಚಲೋ ನೆಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಮಾಜಿ ಸಚಿವ ಎಚ್. ಆಂಜನೇಯ ಅವರ ಧೋರಣೆಯನ್ನೂ ಪ್ರಶ್ನಿಸಿ ಅವರ ನಡತೆಯಿಂದ ಸಮುದಾಯದವರು ನಿರಾಶರಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅವರು ನಮ್ಮನ್ನು ಉಳಿಸಲು ಬದ್ಧರಾಗಿರಬೇಕು. ಸಮಾಜದಲ್ಲಿ ಗೌರವದಿಂದ ಬದುಕಲು ನಮಗೂ ಅವಕಾಶ ಬೇಕು ಎಂದು ‌ಕೋರಿದರು.

ಬಳಿಕ ಅಲೆಮಾರಿ ಜಿಲ್ಲಾ ಅನಷ್ಠಾನ ಸಮಿತಿ ಸದಸ್ಯ ಶ್ರೀನಿವಾಸ್ ಮೂರ್ತಿ ಮಾತನಾಡಿ, ಅಧ್ಯಕ್ಷರಾದ ಪಲ್ಲವಿ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ

ಬಂಧಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಅಧ್ಯಕ್ಷ ಮಾದೇಶ್, ಅಲೆಮಾರಿ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ನಿಂಗರಾಜು, ಉಪಾಧ್ಯಕ್ಷ ಬೇಬಿ, ಕಾರ್ಯದರ್ಶಿ ಮುನಿಯಪ್ಪ, ಮಧುವನಹಳ್ಳಿ ಮಹೇಶ್, ಮುರುಗೇಶ್ ಹಾಜರಿದ್ದರು.