ರೈತರ ತೀವ್ರ ಪ್ರತಿಭಟನೆ: ಭೂಸ್ವಾಧೀನ ಸಭೆಯೇ ರದ್ದು

| Published : Oct 22 2023, 01:01 AM IST

ಸಾರಾಂಶ

ಬೆಳೆಗಳನ್ನು ಬೆಳೆಯುವ ಬೆಲೆ ಬಾಳುವ ಜಮೀನುಗಳು ಉಳಿದುಕೊಳ್ಳುತ್ತವೆ
ಕನ್ನಡಪ್ರಭ ವಾರ್ತೆ, ಶಿಕಾರಿಪುರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾದ ರೈತರ ಸಭೆ ತೀವ್ರ ಪ್ರತಿಭಟನೆಯಿಂದಾಗಿ ರದ್ದುಗೊಂಡ ಘಟನೆ ಶನಿವಾರ ನಡೆಯಿತು. ಸಾಗರದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ರೈತರ ಸಭೆಯು ರೈತರಿಗೆ ಮಾಹಿತಿ ನೀಡದೇ, ಸೂಕ್ತ ತಿಳಿವಳಿಕೆ ನೋಟಿಸ್ ಸಹ ಜಾರಿಗೊಳಿಸದೇ ಹಾಗೂ ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ರೈತರು ಪ್ರತಿಭಟಿಸಿದರು. 7 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ನಿರ್ಮಿಸುವ ಬದಲು ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯನ್ನು ನಗರ ಭಾಗದಲ್ಲಿ ಕೇವಲ ಅರ್ಧ ಕಿಲೋಮೀಟರ್‌ನಷ್ಟು ರಸ್ತೆಯು ನಗರದ ಮಧ್ಯ ಭಾಗದಲ್ಲಿ ಇದ್ದು, ಇದನ್ನು ಅಗಲೀಕರಣಗೊಳಿಸಿದರೆ 7 ಕಿಲೋಮೀಟರ್‌ಗಳ ನಿರ್ಮಾಣ ತಪ್ಪುತ್ತದೆ. ಅಲ್ಲದೇ, ಬೆಳೆಗಳನ್ನು ಬೆಳೆಯುವ ಬೆಲೆ ಬಾಳುವ ಜಮೀನುಗಳು ಉಳಿದುಕೊಳ್ಳುತ್ತವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಉಪವಿಭಾಗಾಧಿಕಾರಿ ಪಲ್ಲವಿ ಪ್ರತಿಕ್ರಿಯಿಸಿ, ಇದು ಕೇವಲ ಪ್ರಾಥಮಿಕ ಹಂತದ ಸಭೆಯಾಗಿದೆ. ಪ್ರಾಥಮಿಕ ಹಂತದ ಮಾರ್ಕಿಂಗ್ ಆಗಿದ್ದು, ಇಲ್ಲಿ ಯಾವುದೇ ಸರ್ವೆ ಕಾರ್ಯವನ್ನು ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ತಹಸೀಲ್ದಾರ್ ಮಲ್ಲೇಶ ಬಿ. ಪೂಜಾರ್ ಮಾತನಾಡಿ, ಯಾವ ರೈತರ ಎಷ್ಟು ಜಮೀನು ಯೋಜನೆಗೆ ಹೋಗುತ್ತೆ, ಎಲ್ಲಿ ಹೋಗುತ್ತೆ, ಯಾವ ಭಾಗದ್ದು ಎಂಬುದು ಯಾವುದೂ ಇನ್ನೂ ನಿರ್ಧಾರವಾಗಿಲ್ಲ. ಇದು ಪ್ರಾಥಮಿಕ ಸಭೆ ಮಾತ್ರ ಎಂದು ಹೇಳಿದರು. ಆಗ ಮದ್ಯ ಪ್ರವೇಶಿಸಿದ ರೈತನೋರ್ವ, ಈಗಾಗಲೇ ಗುರುತುಗಳನ್ನು ಮಾಡಿ, ಕಲ್ಲುಗಳನ್ನು ಹಾಕಲಾಗಿದೆ ಎಂದು ಮೊಬೈಲಿನಲ್ಲಿ ವಿಡಿಯೋ ರೆಕಾರ್ಡಿಂಗ್ ದಾಖಲೆ ತೋರಿಸಿದರು. ಆಗ ಸಭೆ ಗೊಂದಲದಲ್ಲಿ ಮುಳುಗಿತು. ಅನಂತರ ಸಾಂಸ್ಕೃತಿಕ ಭವನದ ಎದುರು ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ, ಎಸ್.ಎಚ್. ಮಂಜುನಾಥ್, ಭಂಡಾರಿ ಮಾಲತೇಶ್, ಬಡಗಿ ಪಾಲಾಕ್ಷಪ್ಪ, ಜೆ.ಎಸ್. ಮಂಜುನಾಥ್, ಗುಡ್ಡಳ್ಳಿ ಕೃಷ್ಣ, ಮುರ್ಲೆರ್ ಶಿವಪ್ಪ, ಹರಪನಹಳ್ಳಿ ಮಾಲತೇಶ್, ಚಿಟ್ಟೂರು ಬಸವರಾಜಪ್ಪ, ದುರ್ಗವ್ವಾರ್ ಗಿರೀಶ್, ಎ.ಆರ್. ಮೂರ್ತಿ, ಲತಾ, ಕುಸುಮ, ರೂಪ ಮತ್ತಿತರರು ಹಾಜರಿದ್ದರು. ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಪಟ್ಟಣದ ಹೊರಭಾಗದಲ್ಲಿ ತಾಲೂಕಿನ ಕಸಬಾ ಹೋಬಳಿಯ ಗಬ್ಬೂರು, ಕಾನೂರು, ಹಳಿಯೂರು, ನೆಲವಾಗಿಲು, ಚನ್ನಳ್ಳಿ, ಸದಾಶಿವಪುರ, ಕಾಳೇನಹಳ್ಳಿ ಗ್ರಾಮದ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆ ನಡೆಸುವ ಉದ್ದೇಶದಿಂದಾಗಿ ಸಭೆ ಆಯೋಜನೆಗೊಂಡಿತ್ತು. - - - -21ಕೆ.ಎಸ್‌.ಕೆ.ಪಿ1: ಶಿಕಾರಿಪುರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಬೈಪಾಸ್‌ ಹೆದ್ದಾರಿ ನಿರ್ಮಾಣಕ್ಕಾಗಿ ನಡೆದ ಭೂಸ್ವಾಧೀನ ರೈತರ ಸಭೆಯಲ್ಲಿ ಅಧಿಕಾರಿಗಳು- ರೈತರ ಮಧ್ಯೆ ವಾಗ್ವಾದ ನಡೆಯಿತು.