ಆ.11ರೊಳಗೆ ಒಳಮೀಸಲಾತಿ ಜಾರಿ ಮಾಡದಿದ್ರೆ ಉಗ್ರ ಹೋರಾಟ: ಕಾರಜೋಳ

| Published : Jul 26 2025, 02:00 AM IST

ಸಾರಾಂಶ

ಸುಪ್ರೀಂಕೋರ್ಟ್‌ ನೀಡಿರುವ ಆದೇಶದಂತೆ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಆ.11 ಒಳಗಾಗಿ ಜಾರಿ ಮಾಡದಿದ್ದರೆ ಸಮುದಾಯದ ಮುಖಂಡರು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲು ಚಿಂತಿಸಿದ್ದಾರೆ. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸುಪ್ರೀಂಕೋರ್ಟ್‌ ನೀಡಿರುವ ಆದೇಶದಂತೆ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಆ.11 ಒಳಗಾಗಿ ಜಾರಿ ಮಾಡದಿದ್ದರೆ ಸಮುದಾಯದ ಮುಖಂಡರು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲು ಚಿಂತಿಸಿದ್ದಾರೆ. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಶೇ.15 ರಿಂದ 17ಕ್ಕೆ ಹೆಚ್ಚಿಸಲಾಗಿದೆ. ಎಸ್ಟಿಯ ಮೀಸಲಾತಿ ಶೇ.3 ರಿಂದ 7ಕ್ಕೆ ಏರಿಸಲಾಗಿದೆ. ಈಗಾಗಲೇ ಇದು ಅನುಷ್ಠಾನದಲ್ಲಿಯೂ ಇದೆ ಎಂದು ಹೇಳಿದರು.

ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪೂರ ಪಕ್ಷ ಮತ್ತು ಸರ್ಕಾರದಲ್ಲಿ ಚಲಾವಣೆಯಲ್ಲಿಲ್ಲದ ನಾಣ್ಯದಂತಿದ್ದಾರೆ. ಇವರಿಗೆ ಯಾವೂರ ದಾಸಯ್ಯ ಎನ್ನುವವರೂ ಕೂಡ ಇಲ್ಲ ಎಂದು ಕಿಚಾಯಿಸಿದರು.

ಮಾಜಿ ಸಚಿವ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಒಳಮೀಸಲಾತಿ ನೀಡುವುದು ಇದೇ ಮೊದಲಲ್ಲ. ಪಂಜಾಬ್ ಸರ್ಕಾರ ವಾಲ್ಮೀಕಿ ಜನಾಂಗಕ್ಕೆ ಒಳಮೀಸಲಾತಿ ನೀಡಿದೆ. ಹೀಗಿದ್ದಾಗ ಒಳಮೀಸಲಾತಿ ಜಾರಿಯಾಗುವುದರಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಒಳಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂಕೋರ್ಟ್‌ 2024ರ ಆಗಸ್ಟ್ 1ರಂದು ಆದೇಶಿಸಿದೆ. ಆದರೆ, ರಾಜ್ಯ ಸರ್ಕಾರ ಜಾರಿಗೆ ಮಾಡುತ್ತಿಲ್ಲ. ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ ಸಂಸದರು, ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕಾಂಗ್ರೆಸ್ ಹೆಚ್ಚಳ ಮಾಡಲಿಲ್ಲ, ಅದನ್ನು ನಾವು (ಬಿಜೆಪಿ) ಮಾಡಿದೆವು, ಕಾಂಗ್ರೆಸ್ ನವರು ದಲಿತರನ್ನ ಕೇವಲ ವೋಟ್ ಬ್ಯಾಂಕ್‌ ಮಾಡಿಕೊಂಡರು, ಅಕ್ಕಿ, ಬ್ಯಾಳಿ ಕೊಡ್ತೇವೆ, ಕೋಳಿ ಕೊಡ್ತೇವೆ, ಕೊಯ್ದುಕೊಂಡು ತಿನ್ನಿ ಅಂದ್ರಿ., ಬದಲಿಗೆ ನೀವು ವಿದ್ಯಾವಂತರು ಆಗಿ, ಬುದ್ಧಿವಂತರಾಗಿ, ಸರ್ಕಾರಿ ಅಧಿಕಾರಿಗಳಾಗಿ ನಿಮ್ಮ ಕಾಲ ಮೇಲೆ ನಿಲ್ಲಿ ಎಂದು ಕಾಂಗ್ರೆಸ್ ಯಾವತ್ತೂ ಹೇಳಲಿಲ್ಲ, ಕೈ ಕೆಳಗೆ ಮಾಡುವುದನ್ನು ಹೇಳಿದ್ರೆ ಹೊರತು ಕೈ ಮೇಲೆ ಮಾಡುವ ಯೋಜನೆಗಳನ್ನು ತರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಮುಖಂಡರಾದ ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ, ವೈ.ಸಿ.ಕಾಂಬಳೆ, ಯಲ್ಲಪ್ಪ ನಾರಾಯಣಿ, ಯಲ್ಲಪ್ಪ ಬೆಂಡಿಗೇರಿ ಇತರರಿದ್ದರು.

ಸಚಿವರಿಗೆ ಸಂಸದ ಕಾರಜೋಳ ಸವಾಲ್‌:

ರಾಜ್ಯದಲ್ಲಿ ನಮ್ಮ ಸರ್ಕಾರ ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಜಾರಿಗೆ ತಂದಿದೆ, ಎಸ್ಸಿಗೆ ಶೇ.17 ಹಾಗೂ ಎಸ್ಟಿಗೆ ಶೇ.7 ಮೀಸಲಾತಿ ಹೆಚ್ಚಿಸಿದೆ. ಎಲ್ಲ ಇಲಾಖೆಗಳ ನೇಮಕಾತಿ, ಬಡ್ತಿಯಲ್ಲಿ, ಮೆಡಿಕಲ್ ಸೀಟ್ ಹಂಚಿಕೆಯಲ್ಲಿ ಮೀಸಲಾತಿ ಹೆಚ್ಚಳ ಆಗಿದೆ. ಸಚಿವ ತಿಮ್ಮಾಪೂರ ಹಾಗೂ ಮುನಿಯಪ್ಪ ಅವರು ಮೀಸಲಾತಿ ಹೆಚ್ಚಳ ಆಗಿಲ್ಲ ಎಂದು ಮಿಸ್ ಗೈಡ್ ಮಾಡ್ತಿದ್ದಾರೆ. ಹೆಚ್ಚಳ ಆಗಿಲ್ಲ ಎಂದು ಸಾಬೀತು ಮಾಡಿದ್ರೆ ನಾನು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ, ಮೀಸಲಾತಿ ಹೆಚ್ಚಳ ಆಗಿದ್ದು ಸಾಬೀತಾದರೆ ಆ ಇಬ್ಬರು ಸಚಿವರು ರಾಜೀನಾಮೆ ಕೊಡಬೇಕು ಎಂದು ಸಂಸದ ಕಾರಜೋಳ ಅವರು ಸವಾಲು ಹಾಕಿದರು ಎಸೆದರು.