ಚಿತ್ರದುರ್ಗ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರುವಾರ ಒಳಮೀಸಲು ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಚಿತ್ರದುರ್ಗದಲ್ಲಿ ಮಾಡಿದ್ದ ಒಳಮೀಸಲು ಘೋಷಣೆ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಎದುರಿಸಲು ಸಜ್ಜಾಗಬೇಕಾಗುತ್ತದೆ ಎಂದು ಒಳಮೀಸಲು ಹೋರಾಟಗಾರ ಅಂಬಣ್ಣ ಅರೋಲಿಕರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಗುರುವಾರ ಕರೆಯಲಾಗಿದ್ದ ಒಳಮೀಸಲಾತಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಟರ ಒಳ ಮೀಸಲಾತಿ ವಿಷಯದಲ್ಲಿ ಸುಖಾಸುಮ್ಮನೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಮಾದಿಗರ ಬಹುದಿನದ ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವುದು ಈ ಸಮುದಾಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏ.24ರಂದು ನಡೆಯುವ ಒಳ ಮೀಸಲಾತಿ ಕುರಿತ ಸಚಿವ ಸಂಪುಟ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಒಳಮೀಸಲು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ರಕ್ತಸಿಕ್ತ ಹೋರಾಟವೂ ಸೇರಿದಂತೆ ಜೈಲ್ ಬರೋ ಚಳವಳಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಹೋರಾಟಗಾರ ಬಿ.ಆರ್‌.ಬಾಸ್ಕರ್ ಪ್ರಸಾದ್ ಮಾತನಾಡಿ, ಮಾದಿಗರ 35 ವರ್ಷಗಳ ಹೋರಾಟವನ್ನು ಕಾಂಗ್ರೆಸ್ ಸರ್ಕಾರ ಲಘುವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಚಿತ್ರದುರ್ಗದಲ್ಲಿ ಇಂದು ರಾಜ್ಯಮಟ್ಟದ ಒಳ ಮೀಸಲಾತಿ ಸಭೆ ನಡೆಸಲಾಗಿದೆ. ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಹೋರಾಟಗಾರರು ಬಂದಿದ್ದಾರೆ. ಈ ಸಭೆಯಲ್ಲಿ ಒಕ್ಕೋರಲ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ತೀರ್ಮಾನ ನೋಡಿ ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಕರೆ ನೀಡಿದರು.

ಏ.24ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಾದಿಗರ ಬೇಡಿಕೆ ಈಡೇರಿಸುವ ನಿರ್ಣಯ ಕೈಗೊಂಡರೆ ಸರ್ಕಾರವನ್ನು ಅಭಿನಂದಿಸುತ್ತೇವೆ. ಇಲ್ಲವಾದಲ್ಲಿ ಹೈವೇ ಬಂದ್ ಮಾಡಲಾಗುವುದು. ಶಾಸಕರ, ಮಂತ್ರಿಗಳ ಮನೆ ಮುತ್ತಿಗೆ, ಘೇರಾವ್ ಸೇರಿದಂತೆ ಸಿಎಂ ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಘೇರಾವ್ ಮಾಡಲಾಗುವುದು. ಈ ಸಮುದಾಯಕ್ಕೆ ಹೋರಾಟ ಹೊಸದಲ್ಲ. ಜೈಲಿಗೆ ಹೋದರೂ ಚಿಂತೆಯಿಲ್ಲ. ರಾಜ್ಯದ ಯಾವ ಭಾಗದಲ್ಲಿ ಏನೇ ಅನಾಹುತಗಳು ಸಂಭವಿಸಿದರೂ ಅದಕ್ಕೆ ಸರ್ಕಾರವೇ ಹೊಣೆ ಎಂದು ಕಿಡಿಕಾರಿದರು.

ಒಳ ಮೀಸಲಾತಿ ಹಿರಿಯ ಹೋರಾಟಗಾರರಾದ ಮಾರಸಂದ್ರ ಮುನಿಯಪ್ಪ ಮಾತನಾಡಿ, ಮುಖ್ಯ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಒಳಮೀಸಲು ಜಾರಿ ಆಗದೇ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ, ಕೃಷಿ ಇಲಾಖೆಯಲ್ಲಿ 891 ಹುದ್ದೆಗಳ ಅಧಿಸೂಚನೆ ಇನ್ನೂ ಅಂತರ್ಜಾಲದಲ್ಲಿ ಹಾಗೆಯೇ ಇದೆ ಎಂದರು.

ಮೈಸೂರಿನ ಒಳ ಮೀಸಲಾತಿ ಹೋರಾಟಗಾರ ವಕೀಲ ಅರುಣ್ ಕುಮಾರ್ ಮಾತನಾಡಿ, ಸದಾಶಿವ, ಮಾಧುಸ್ವಾಮಿ, ನಾಗಮೋಹನ್ ದಾಸ್ ಎಲ್ಲಾ ಆಯೋಗಗಳ ವರದಿಯಲ್ಲಿ ಮಾದಿಗರಿಗೆ ಶೇ.6ರಷ್ಟು ಒಳ ಮೀಸಲು ನೀಡಲಾಗಿದೆ. ಆದರೆ, ಹೊಲೆಯರಿಗೆ, ಕೊರಚ, ಲಂಬಾಣಿ, ಬೋವಿಗಳಿಗೆ ಈ ಪ್ರಮಾಣ ಹೆಚ್ಚುತ್ತಲೇ ಬಂದಿರುವುದನ್ನು ಅಂಕಿಅಂಶಗಳ ಸಮೇತ ವಿವರಿಸಿದರು.

ಒಳಮೀಸಲು ಜಾರಿಗೆ ಹೊಲೆಯ ಸೇರಿದಂತೆ ಕೊಲಂಭೋ ಸಚಿವರು ವಿರೋಧಿಸುತ್ತಿರುವುದು ವಂಚಿತ ಸಮುದಾಯಕ್ಕೆ ಎಸಗುವ ದ್ರೋಹ. ಸರ್ಕಾರ ಇಂತಹುದನ್ನು ಮುಂದಿಟ್ಟುಕೊಂಡು ಮಾದಿಗರಿಗೆ ಮೋಸ ಮಾಡುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ವಕೀಲ ಮಾಳಪ್ಪ ಕುರ್ಕಿ, ಲೇಖಕ ಸಂತೋಷ್ ಕೋಡಿಹಳ್ಳಿ, ಚಿತ್ರದುರ್ಗದ ಹಿರಿಯ ಒಳಮೀಸಲು ಹೋರಾಟಗಾರ ಬಿ.ಪಿ. ಪ್ರಕಾಶ್ ಮೂರ್ತಿ, ಗುರುಮೂರ್ತಿ, ಹುಲ್ಲೂರು ಕುಮಾರಸ್ವಾಮಿ ಇದ್ದರು.