ಸಾರಾಂಶ
ಕುಷ್ಟಗಿ:ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರ ಅಪರಾಧ ಕೃತ್ಯಗಳು ಕಡಿಮೆಯಾಗಲು ಸಾಧ್ಯ. ಮಾನವ ಹಕ್ಕುಗಳ ಕುರಿತು ಅರಿವು ಪಡೆಯಬೇಕು ಎಂದು ಕಸಾಪ ಅಧ್ಯಕ್ಷ ವಿರೇಶ ಬಂಗಾರಶೆಟ್ಟರ ಹೇಳಿದರು.
ತಾಲೂಕಿನ ದೋಟಿಹಾಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಯಾನಂದಪುರಿ ಸಂಘ ಹಾಗೂ ಗಾಯತ್ರಿ ಮಹಿಳಾ ಸಂಘದ ಹಾಗೂ ದೋಟಿಹಾಳ ಗ್ರಾಪಂನಿಂದ ನಡೆದ ವಿಶ್ವ ಮಾನವ ಹಕ್ಕುಗಳ ಜಾಗೃತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತದ ಸಂವಿಧಾನ ನಾಗರಿಕರಿಗೆ ಹಲವಾರು ಸಂವಿಧಾನ ಬದ್ಧ ಹಕ್ಕುಗಳನ್ನು ನೀಡಿದೆ. ಸಂವಿಧಾನದ ಮೂರನೇ ಭಾಗದಲ್ಲಿರುವ ಮೂಲಭೂತ ಹಕ್ಕುಗಳೇ ಮಾನವ ಹಕ್ಕುಗಳಾಗಿವೆ. ಜನಸಾಮಾನ್ಯರು ತಮ್ಮ ಹಕ್ಕುಗಳು ಉಲ್ಲಂಘನೆಯಾದಾಗ ಕೋರ್ಟು-ಕಚೇರಿ ಅಲೆಯುವುದಕ್ಕೆ ಭಯಪಟ್ಟು ಸುಮ್ಮನಿರುತ್ತಾರೆ. ಅರಿವು ಮೂಡಿಸಿದಾಗ ಅಪರಾಧಗಳು ಕೂಡ ಕಡಿಮೆಯಾಗುತ್ತವೆ ಎಂದರು.
ಪ್ರತಿಯೊಬ್ಬರಿಗೂ ಘನತೆ-ಗೌರವಗಳಿಂದ ಬದುಕುವ ಹಕ್ಕಿದೆ. ಸ್ವತಂತ್ರವಾಗಿ ಜೀವನ ನಡೆಸುವ, ಸಂಚರಿಸುವ, ಆಲೋಚಿಸುವ ಹಕ್ಕಿದೆ. ಮಾನವ ಹಕ್ಕುಗಳ ರಕ್ಷಣೆ ನಾಗರಿಕ ಸಮಾಜದ ಹೊಣೆಯಾಗಿದೆ ಎಂದು ಹೇಳಿದರು.ಕಾಲೇಜು ಎಸ್ಡಿಎಮ್ಸಿ ಉಪಾಧ್ಯಕ್ಷ ಲಾಡಸಾಬ ಕೊಳ್ಳಿ ಮಾತನಾಡಿ, ಬಹುತೇಕ ಸಂದರ್ಭಗಳಲ್ಲಿ ಮನುಷ್ಯನ ಮೂಲಭೂತ ಹಕ್ಕುಗಳನ್ನು ಮೆಟ್ಟುವ ಪ್ರಯತ್ನಗಳೇ ನಡೆಯುತ್ತಿರುತ್ತವೆ. ಲಿಂಗ ಪತ್ತೆ ಹಚ್ಚುವುದು, ಭ್ರೂಣ ಹತ್ಯೆ ಮಾಡುವಂತಹ ಕೃತ್ಯಗಳಿಂದಲೇ ಮಾನವ ಹಕ್ಕುಗಳ ಉಲ್ಲಂಘನೆ ಪ್ರಾರಂಭವಾಗುತ್ತವೆ. ಮಾನವನು ಸಾಮಾಜಿಕ ಜೀವಿಯಾಗಿರುವುದರಿಂದ ಬೇರೆಯವರ ಹಕ್ಕುಗಳನ್ನು ರಕ್ಷಿಸಬೇಕಾಗುತ್ತದೆ. ಇನ್ನೊಬ್ಬರ ಹಕ್ಕುಗಳನ್ನು ಕಾಪಾಡುವಲ್ಲಿ ಅಧಿಕಾರಿಗಳ ಜೊತೆಗೆ ಸಾರ್ವಜನಿಕರ ಪಾತ್ರ ಪ್ರಮುಖವಾಗಿದೆ. ಮಾನವ ಹಕ್ಕುಗಳಿಗಾಗಿ ಎಲ್ಲರೂ ಧ್ವನಿ ಎತ್ತಬೇಕು ಎಂದರು.
ಯುವ ವಕೀಲೆ ಗೌರಿ ಬೂದಿಹಾಳ ಉಪನ್ಯಾಸ ನೀಡಿ, ಭಾರತದ ಸಂವಿಧಾನದ ತತ್ವಕ್ಕೆ ಮಾನವತಾವಾದ ತಳಪಾಯವಾಗಿದೆ. ಎಲ್ಲ ಮನುಷ್ಯರು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಮಾನವಾಗಿ ಜೀವಿಸಬೇಕು. ಅವರಿಗೆ ಸಮಾನ ಅವಕಾಶಗಳನ್ನು ಕೊಡುವುದರ ಬಗ್ಗೆ ಸಂವಿಧಾನ ಹೇಳುತ್ತದೆ. ಮಾನವನ ಹಕ್ಕುಗಳನ್ನು ನಾವು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದರೊಂದಿಗೆ ಇತರರು ಪಾಲನೆ ಮಾಡುವಂತೆ ಮಾಡಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಪರಸಪ್ಪ, ಉಪಪ್ರಾಚಾರ್ಯ ಡಿ.ಸುರೇಶ, ಹನಮಂತರಾವ ದೇಸಾಯಿ, ಶ್ರೀನಿವಾಸ ಕಂಟ್ಲಿ, ಪೂರ್ಣಿಮಾ ದೇವಾಂಗಮಠ, ದೇವಪ್ಪ ಬಾಗೇವಾಡಿ, ಸಂಗನಗೌಡ ಗೋತಗಿ, ಶಂಕ್ರಮ್ಮ ಕಾಳಗಿ, ದೀಪಾ ಕೊಪ್ಪರದ ಉಪನ್ಯಾಕರು ಹಾಗೂ ವಿದ್ಯಾರ್ಥಿಗಳು ಇದ್ದರು.