ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ವಿರೂಪಾಕ್ಷಲಿಂಗ ಶಿವಾಚಾರ್ಯರ 12ನೇ ಪುಣ್ಯಸ್ಮರಣೆ ಹಾಗೂ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಧನ್ಯವಾದ ಸಮರ್ಪಣಾ ಸಭೆ ನಡೆಯಿತು.
ಕುಷ್ಟಗಿ: ವಿರೂಪಾಕ್ಷಲಿಂಗ ಶಿವಾಚಾರ್ಯರ ಬದುಕು ಪೂಜಾ ನಿಷ್ಠೆ, ಗುರುಭಕ್ತಿ ಹಾಗೂ ಧಾರ್ಮಿಕ ಶ್ರದ್ಧೆಗೆ ಮಾದರಿಯಾಗಿತ್ತು
ಗುರುವಿನ ಮೇಲಿನ ಅವರ ಅಪಾರ ಭಕ್ತಿ, ಧಾರ್ಮಿಕ ಆಚರಣೆಗಳಲ್ಲಿನ ನಿಷ್ಠೆ ಹಾಗೂ ಆಧ್ಯಾತ್ಮಿಕ ಜೀವನದ ಮೌಲ್ಯಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿವೆ ಎಂದು ಜಾತ್ರಾ ಸಮಿತಿ ಕಾರ್ಯದರ್ಶಿ ಹಾಗೂ ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ ಹೇಳಿದರು.ತಾಲೂಕಿನ ಚಳಗೇರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ವಿರೂಪಾಕ್ಷಲಿಂಗ ಶಿವಾಚಾರ್ಯರ 12ನೇ ಪುಣ್ಯಸ್ಮರಣೆ ಹಾಗೂ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಧನ್ಯವಾದ ಸಮರ್ಪಣಾ ಸಭೆಯಲ್ಲಿ ಅವರು ಮಾತನಾಡಿದರು. ಮಹಾತ್ಮರ ಆದರ್ಶಗಳನ್ನು ಕೇವಲ ಸ್ಮರಿಸುವುದಷ್ಟೇ ಅಲ್ಲದೆ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.
ವಿರೂಪಾಕ್ಷಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆ ಹಾಗೂ ಜಾತ್ರಾ ಮಹೋತ್ಸವ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಸಮಾಜದ ಒಗ್ಗಟ್ಟು, ಗುರುಪರಂಪರೆಯ ಗೌರವ ಹಾಗೂ ಧಾರ್ಮಿಕ ಪರಂಪರೆಯ ಸಂರಕ್ಷಣೆಗೆ ಸಾಕ್ಷಿಯಾಗಿದೆ. ಜಾತ್ರಾ ಮಹೋತ್ಸವಕ್ಕೆ ವಿವಿಧ ಮಠಗಳ ಜಗದ್ಗುರುಗಳು, ಸುತ್ತೂರು ಮಠ ಹಾಗೂ ಸಿದ್ಧಗಂಗಾ ಮಠದ ಶ್ರೀಗಳು ಸೇರಿದಂತೆ ನೂರಾರು ಮಠಾಧೀಶರು ಆಗಮಿಸಿದ್ದು ವಿಶೇಷವಾಗಿತ್ತು. ಜಗದ್ಗುರುಗಳ ಆಗಮನ ಹಾಗೂ ಆಶೀರ್ವಾದದಿಂದ ಚಳಗೇರಿ ಗ್ರಾಮದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು.ವಿವಿಧ ರಾಜಕೀಯ ಮುಖಂಡರು, ಗಣ್ಯರು ಹಾಗೂ ಭಕ್ತರು ಪಾಲ್ಗೊಂಡು ಕಾರ್ಯಕ್ರಮದ ಗೌರವ ಹೆಚ್ಚಿಸಿದರು.
ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ನೂತನ ರಥೋತ್ಸವಕ್ಕೆ ವಿಧಾನಸಭೆಯ ಸಭಾಪತಿ ಜಿ.ಎಸ್. ಪಾಟೀಲ ಚಾಲನೆ ನೀಡಿದರು. ನೂತನ ರಥೋತ್ಸವವು ಗ್ರಾಮದ ಧಾರ್ಮಿಕ ಪರಂಪರೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ಪೀಳಿಗೆಗೂ ಭಕ್ತಿ ಮತ್ತು ಶ್ರದ್ಧೆಯ ಸಂಪ್ರದಾಯವನ್ನು ಪರಿಚಯಿಸುವ ಕಾರ್ಯವಾಗಿದೆ. ಭಕ್ತರು, ದಾನಿಗಳು ಹಾಗೂ ಸಂಘಟಕರ ಸಹಕಾರದಿಂದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು ಎಂದ ಅವರು, ಧಾರ್ಮಿಕ ಪರಂಪರೆಯನ್ನು ಉಳಿಸುವ ಜತೆಗೆ ಶಿಕ್ಷಣದ ಮೂಲಕ ಸಮಾಜದ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಆಶಯವೂ ಈ ಕಾರ್ಯಕ್ರಮದೊಂದಿಗೆ ಬೆಸೆದುಕೊಂಡಿದೆ ಎಂದರು.ವೀರಸಂಗಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಧರ್ಮ, ಭಕ್ತಿ ಹಾಗೂ ಗುರುಪರಂಪರೆಯ ಮಹತ್ವ ತಿಳಿಸಿದರು. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹಕಾರ, ಸಾಮರಸ್ಯ ಮತ್ತು ಒಗ್ಗಟ್ಟಿನ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಗಣ್ಯರಾದ ಸಂಗಯ್ಯಜ್ಜ ತಳುವಗೇರಾ, ಬಸವರಾಜ ಮೇಳಿ, ಮಹಾಂತೇಶ ಅಗಸಿಮುಂದಿನ, ಚನ್ನಯ್ಯ ಸೊಪ್ಪಿಮಠ, ಬಸವರಾಜ ಭಾಗ್ಯದ ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಜಾತ್ರಾ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಸಭೆಯಲ್ಲಿ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರನ್ನು ಗೌರವಿಸಲಾಯಿತು.