ಸಾರಾಂಶ
ಹಳಿ ಮೇಲೆ ಕುಳಿತಿದ್ದ ವಿನಾಯಕ ನಗರದ ವೃದ್ಧ ರೈಲಿಗೆ ಸಿಲುಕುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಮಿಂಚಿನ ವೇಗದಲ್ಲಿ ಬಂದು ರಕ್ಷಿಸಿದ ಘಟನೆ ನಗರದ ದೇವರಾಜ ಅರಸು ಬಡಾವಣೆಯ ರೈಲು ಹಳಿ ಬಳಿ ನಡೆದಿದೆ.
- ದೇವರಾಜ ಅರಸು ಬಡಾವಣೆ ರೈಲ್ವೆ ಹಳಿ ಬಳಿ ಘಟನೆ
- - -- ಸೋಷಿಯಲ್ ಮೀಡಿಯಾದಲ್ಲಿ ಘಟನೆ ದೃಶ್ಯಗಳು ವೈರಲ್
- ಕುಟುಂಬ ಸದಸ್ಯರ ಜೊತೆಗೆ ಗಲಾಟೆಯಾದ ಬೇಸರ ಕಾರಣ- - -
ಕನ್ನಡಪ್ರಭ ವಾರ್ತೆ ದಾವಣಗೆರೆಹಳಿ ಮೇಲೆ ಕುಳಿತಿದ್ದ ವಿನಾಯಕ ನಗರದ ವೃದ್ಧ ರೈಲಿಗೆ ಸಿಲುಕುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಮಿಂಚಿನ ವೇಗದಲ್ಲಿ ಬಂದು ರಕ್ಷಿಸಿದ ಘಟನೆ ನಗರದ ದೇವರಾಜ ಅರಸು ಬಡಾವಣೆಯ ರೈಲು ಹಳಿ ಬಳಿ ನಡೆದಿದೆ.
ಮಗನನ್ನು ಶಾಲೆಗೆ ಬಿಡಲು ಹೊರಟಿದ್ದ ವಿರೂಪಾಕ್ಷಪ್ಪ ವೃದ್ಧನ ಪಾಲಿಗೆ ಆಪತ್ಬಾಂಧವನಂತೆ ಬಂದವರು. ಮಗನೊಂದಿಗೆ ಹೊರಟಿದ್ದ ಅವರು ಹಳಿ ಮೇಲೆ ಕುಳಿತಿದ್ದ ವೃದ್ಧನನ್ನು ದೂರದಿಂದಲೇ ಗಮನಿಸಿದ್ದಾರೆ. ಬಹುಶಃ ಆತ್ಮಹತ್ಯೆ ಪ್ರಯತ್ನವಿರಬಹುದು ಎಂದು ಅಂದಾಜಿಸಿ, ರೈಲು ಬಂದರೆ ಅಪಾಯವಾಗುವ ಸಾಧ್ಯತೆ ಅರಿತಿದ್ದಾರೆ. ತಕ್ಷಣವೇ ಸಮೀಪಕ್ಕೆ ಧಾವಿಸಿ, ರೈಲು ಹಳಿ ಮೇಲೆ ಕುಳಿತಿದ್ದ ವೃದ್ಧನನ್ನು ಎಬ್ಬಿಸಿ, ಪಕ್ಕಕ್ಕೆ ಕರೆತಂದಿದ್ದಾರೆ. ಅದೇ ಹಳಿಯ ಮೇಲೆ ವೇಗದಲ್ಲಿ ರೈಲೊಂದು ಸಾಗಿದೆ.ವಿರೂಪಾಕ್ಷಪ್ಪ ಅವರ ಸಮಯಪ್ರಜ್ಞೆಯಿಂದಾಗಿ ವೃದ್ಧನ ರಕ್ಷಣೆಯಾಗಿದೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಸಂಸಾರದಲ್ಲಿ ಗಲಾಟೆ ಕಾರಣ:ರೈಲಿಗೆ ಸಿಲುಕುತ್ತಿದ್ದ ವಿನಾಯಕ ನಗರ ನಿವಾಸಿ ವೃದ್ಧನನ್ನು ವಿರೂಪಾಕ್ಷಪ್ಪ ಸಮಾಧಾನಪಡಿಸಿ, ಕಾರಣ ಕೇಳಿದ್ದಾರೆ. ಈ ವೇಳೆ ಮನೆಯಲ್ಲಿ ಕುಟುಂಬ ಸದಸ್ಯರ ಜೊತೆಗೆ ಜಗಳ, ಗಲಾಟೆ ಮಾಡಿಕೊಂಡು ಬೇಸರದಿಂದ ಬಂದು, ರೈಲ್ವೆ ಹಳಿ ಮೇಲೆ ಕುಳಿತಿದ್ದಾಗಿ ಹೇಳಿದ್ದಾರೆ. ಬಳಿಕ ವಿರೂಪಾಕ್ಷಪ್ಪ ಅವರು ವೃದ್ಧನಿಗೆ ಸಮಾಧಾನ, ಬುದ್ಧಿ ಹೇಳಿ, ಮನೆಗೆ ಹೋಗುವಂತೆ ಕಳಿಸಿದ್ದಾರೆ.
- - -