ಸಾರಾಂಶ
ವೇದಿಕೆ ಸೃಜನೆ ಕುರಿತು ಭಾರೀ ಚರ್ಚೆ । ವೇದಿಕೆಗಳು ನಾಲ್ಕಲ್ಲ, ಐದು!
ಕೃಷ್ಣ ಎನ್. ಲಮಾಣಿಕನ್ನಡಪ್ರಭ ವಾರ್ತೆ ಹೊಸಪೇಟೆ
ಈ ಬಾರಿ ಹಂಪಿ ಉತ್ಸವದ ಪ್ರಮುಖ ವೇದಿಕೆ ನಿರ್ಮಾಣದ ಬಗ್ಗೆಯೇ ಭಾರೀ ಚರ್ಚೆಯಾಗುತ್ತಿದ್ದು, ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಾಲಯದ ಮುಖ್ಯ ಗೋಪುರ ಬಳಸಿ ವೇದಿಕೆಯನ್ನು ಆಕರ್ಷಕವಾಗಿ ನಿರ್ಮಾಣ ಮಾಡಬೇಕೆಂಬುದರ ಬಗ್ಗೆ ಜಿಲ್ಲಾಡಳಿತದೊಂದಿಗೆ ವೇದಿಕೆ ಹೊಣೆ ಹೊತ್ತಿರುವ ಉಡುಪಾಸ್ ಸಂಸ್ಥೆ ಚರ್ಚಿಸುತ್ತಿದೆ.ಹಂಪಿ ಉತ್ಸವದ ಮುಖ್ಯ ವೇದಿಕೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರೂ ಇನ್ನೂ ವೇದಿಕೆ ಸ್ವರೂಪ ಹೇಗಿರಬೇಕು, ಅದರ ಡಿಸೈನ್ ಬಗ್ಗೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಎರಡ್ಮೂರು ಮಾದರಿ ನೀಲನಕ್ಷೆ ರೂಪಿಸಿದರೂ ಜಿಲ್ಲಾಡಳಿತ ಕೆಲ ಬದಲಾವಣೆಗೆ ಸೂಚಿಸಿದೆ ಎಂದು ವಿಶ್ವಸನೀಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.
ವಿರೂಪಾಕ್ಷೇಶ್ವರ ಗೋಪುರ ಬಳಕೆ?:ಹಂಪಿ ಉತ್ಸವದಲ್ಲಿ ಪ್ರಧಾನ ವೇದಿಕೆಯೇ ಆಕರ್ಷಣೆ ಕೇಂದ್ರ ಆಗಿರುವ ಹಿನ್ನೆಲೆ ಈ ವೇದಿಕೆಯನ್ನು ಆಕರ್ಷಕವಾಗಿ ನಿರ್ಮಿಸಬೇಕು. ವಿಜಯನಗರ ವಾಸ್ತುಶಿಲ್ಪದ ಸಂರಚನೆಯೊಂದಿಗೆ ವಿರೂಪಾಕ್ಷೇಶ್ವರ ದೇವಾಲಯದ ಮುಖ್ಯಗೋಪುರ, ಕಲ್ಲಿನರಥ, ಸಾಸಿವೆ ಕಾಳು ಗಣಪತಿ, ಆಂಜನೇಯ ದೇವಾಲಯ ಮತ್ತು ಹೇಮಕೂಟ ಪರ್ವತದ ದೇವಾಲಯಗಳನ್ನು ಬಳಕೆ ಮಾಡಿಕೊಂಡು ವೇದಿಕೆ ಸೃಜನೆ ಮಾಡುವುದರ ಬಗ್ಗೆ ಚರ್ಚೆಯಾಗುತ್ತಿದೆ.
ವೇದಿಕೆಯಲ್ಲಿ ವಿರೂಪಾಕ್ಷೇಶ್ವರ ದೇವಾಲಯದ ಮುಖ್ಯ ಗೋಪುರ ಬಳಕೆ ಮಾಡಬೇಕೇ ಎಂಬುದರ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಿದೆ. ವೇದಿಕೆಯಲ್ಲಿ ಗೋಪುರವನ್ನು ಎಷ್ಟು ಅಡಿ ಎತ್ತರದಲ್ಲಿ ಸೃಜಿಸಬೇಕು ಎಂಬುದರ ಬಗ್ಗೆಯೂ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆದಿದೆ. ಇನ್ನೂ ಜಿಲ್ಲಾಡಳಿತದಿಂದ ಹಸಿರು ನಿಶಾನೆ ದೊರೆತಿಲ್ಲ. ವೇದಿಕೆ ಹಾಗೂ ವೇದಿಕೆ ಸುತ್ತಮುತ್ತ ಬಳಸುವ ಕಂಬಗಳು, ಅರಮನೆ, ಕೋಟೆ ಮಾದರಿ ಬಗ್ಗೆಯೂ ಚರ್ಚೆ ನಡೆದಿದ್ದು, ಇನ್ನೂ ಅಂತಿಮ ರೂಪಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.ಪ್ರಧಾನ ವೇದಿಕೆ 120 ಅಡಿ ಅಗಲ, 80 ಅಡಿ ಉದ್ದ ಅಳತೆಯಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗುತ್ತಿದೆ. ಜೊತೆಗೆ ಆಕರ್ಷಕ ಲೈಟಿಂಗ್ ವ್ಯವಸ್ಥೆ ಕೂಡ ಮಾಡಲಾತ್ತಿದೆ. ಎಲ್‌ಇಡಿ ಪರದೆ ಕೂಡ ಅಳವಡಿಕೆ ಮಾಡಲಾಗುತ್ತಿದ್ದು, 70 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿಐಪಿ ಹಾಗೂ ವಿವಿಐಪಿ ಆಸನಗಳನ್ನು ಕೂಡ ವ್ಯವಸ್ಥೆ ಮಾಡಲಾಗುತ್ತಿದ್ದು, ಕಲಾವಿದರು, ಗಣ್ಯಾತಿ ಗಣ್ಯರಿಗಾಗಿ ಗ್ರಿನ್ ರೂಂ ನಿರ್ಮಾಣ ಮಾಡಲಾಗುತ್ತಿದೆ.
ವೇದಿಕೆಗಳು ನಾಲ್ಕಲ್ಲ, ಐದು!:ಹಂಪಿ ಉತ್ಸವದಲ್ಲಿ ಈ ಬಾರಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ, ಸ್ಥಳೀಯರ ಒತ್ತಾಸೆ ಹಾಗೂ ಮೈಸೂರು ದಸರೆಗೆ ಪ್ರೇರಣೆ ಆಗಿರುವ ಮಹಾನವಮಿ ದಿಬ್ಬದಲ್ಲೂ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕಾಗಿ ಈಗ ಐದನೇ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಮಹಾನವಮಿ ದಿಬ್ಬದ ಪ್ರದೇಶದಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ಈ ವೇದಿಕೆಯಲ್ಲಿ ನಾಟಕಗಳ ಪ್ರದರ್ಶನ ನಡೆಯಲಿದೆ.
ಹಂಪಿ ಉತ್ಸವಕ್ಕಾಗಿ ಭರದ ಸಿದ್ಧತೆ ನಡೆದಿದ್ದು, ಸ್ವಚ್ಛತಾ ಕಾರ್ಯ ಕೂಡ ನಡೆದಿದೆ. ಹಂಪಿಯಲ್ಲಿ ಸ್ವಚ್ಛತೆ ಕಾರ್ಯ ಸಾಗಿದ್ದು, ಈಗಾಗಲೇ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಹಂಪಿ ಉತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗ ಸ್ಥಳೀಯರ ಒತ್ತಾಯದ ಮೇರೆಗೆ ಮಹಾನವಮಿ ದಿಬ್ಬದ ಆವರಣದಲ್ಲಿ ಐದನೇ ವೇದಿಕೆ ಕೂಡ ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್.