ಪಾತ್ರಗಳಿಗೆ ಜೀವ, ಭಾವ ತುಂಬುತ್ತಿದ್ದ ಕಲಾವಿದ ವಿಷ್ಣು ಭಟ್ ಮೂರೂರು
KannadaprabhaNewsNetwork | Published : Oct 09 2023, 12:45 AM IST
ಪಾತ್ರಗಳಿಗೆ ಜೀವ, ಭಾವ ತುಂಬುತ್ತಿದ್ದ ಕಲಾವಿದ ವಿಷ್ಣು ಭಟ್ ಮೂರೂರು
ಸಾರಾಂಶ
ಪ್ರಸಿದ್ಧ ಯಕ್ಷಗಾನ ಕಲಾವಿದ ವಿಷ್ಣು ಭಟ್ ಮೂರೂರು ನಿಧನರಾಗಿದ್ದು, ಯಕ್ಷ ಪರಂಪರೆಯ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸ್ತ್ರೀಪಾತ್ರದ ಮೂಲದ ಯಕ್ಷಪ್ರಿಯರ ಮನಗೆದ್ದ ವಿಷ್ಣು ಭಟ್ ಮೂರೂರು ಯಕ್ಷಗಾನದ ಹಲವು ಪಾತ್ರಗಳಿಗೆ ಜೀವ ತುಂಬುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.ಎಸ್‌ಎಸ್‌ಎಲ್‌ಸಿ ಪೂರೈಸುತ್ತಿದ್ದಂತೆ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟ ಅವರು ಮೂರೂರು ರಾಮ ಹೆಗಡೆ, ಕರ್ಕಿಯ ಪಿ.ವಿ. ಹಾಸ್ಯಗಾರ ಅವರಿಂದ ಆರಂಭಿಕ ತರಬೇತಿ ಪಡೆದರು. ಸ್ತ್ರೀಯ ಒನಪು ಒಯ್ಯಾರ, ಭಾವಪೂರ್ಣ ಮಾತು, ಲಾಲಿತ್ಯಪೂರ್ಣ ಕುಣಿತಗಳಿಂದ ಹೆಸರಾದರು.
ವಸಂತಕುಮಾರ್ ಕತಗಾಲ ಕನ್ನಡಪ್ರಭ ವಾರ್ತೆ ಕಾರವಾರ ಪ್ರಸಿದ್ಧ ಯಕ್ಷಗಾನ ಕಲಾವಿದ ವಿಷ್ಣು ಭಟ್ ಮೂರೂರು ನಿಧನರಾಗಿದ್ದು, ಯಕ್ಷ ಪರಂಪರೆಯ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸ್ತ್ರೀಪಾತ್ರದ ಮೂಲದ ಯಕ್ಷಪ್ರಿಯರ ಮನಗೆದ್ದ ವಿಷ್ಣು ಭಟ್ ಮೂರೂರು ಯಕ್ಷಗಾನದ ಹಲವು ಪಾತ್ರಗಳಿಗೆ ಜೀವ ತುಂಬುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಎಸ್‌ಎಸ್‌ಎಲ್‌ಸಿ ಪೂರೈಸುತ್ತಿದ್ದಂತೆ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟ ಅವರು ಮೂರೂರು ರಾಮ ಹೆಗಡೆ, ಕರ್ಕಿಯ ಪಿ.ವಿ. ಹಾಸ್ಯಗಾರ ಅವರಿಂದ ಆರಂಭಿಕ ತರಬೇತಿ ಪಡೆದರು. ಸ್ತ್ರೀಯ ಒನಪು ಒಯ್ಯಾರ, ಭಾವಪೂರ್ಣ ಮಾತು, ಲಾಲಿತ್ಯಪೂರ್ಣ ಕುಣಿತಗಳಿಂದ ಹೆಸರಾದರು. ಗುಂಡಬಾಳ, ಅಮೃತೇಶ್ವರಿ, ಪಂಚಲಿಂಗ, ಪೆರ್ಡೂರು, ಇಡಗುಂಜಿ ಮತ್ತಿತರ ಯಕ್ಷಗಾನ ಮೇಳಗಳಲ್ಲಿ ಸೇವೆ ಸಲ್ಲಿಸಿದರು. ಸುಮಾರು 45 ವರ್ಷಗಳ ಕಾಲ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ನಿರಂತರವಾಗಿ ಯಕ್ಷಗಾನದಲ್ಲಿ ತೊಡಗಿಕೊಂಡಿದ್ದರು. ವಿಷ್ಣು ಭಟ್ ಮೂರೂರು ಅಂಬೆ, ಸೀತೆ, ಮಂಡೋದರಿ, ಮೇನಕೆ, ಸಾವಿತ್ರಿ, ಶಕುಂತಲೆ ಮತ್ತಿತರ ಪಾತ್ರಗಳಲ್ಲಿ ಮಿಂಚಿದರು. ಅವರ ಅಂಬೆಯ ಪಾತ್ರವನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದರು. ಕಲಾರಂಗ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಯಾಜಿ ಯಕ್ಷಮಿತ್ರ ಮಂಡಳಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದರು. ಚಿಟ್ಟಾಣಿ ರಾಮಚಂದ್ರ ಹೆಗಡೆ, ಶಂಭು ಹೆಗಡೆ ಕೆರಮನೆ, ಮಹಾಬಲ ಹೆಗಡೆ ಕೆರಮನೆ, ಕೃಷ್ಣ ಯಾಜಿ ಬಳಕೂರ, ಕೊಂಡದಕುಳಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ ಮತ್ತಿತರ ಕಲಾವಿದರೊಂದಿಗೆ ಸ್ತ್ರೀಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಕೇವಲ ಯಕ್ಷಗಾನದಲ್ಲಷ್ಟೇ ಅಲ್ಲ, ತಾಳಮದ್ದಳೆಗಳಲ್ಲೂ ಪಾಲ್ಗೊಂಡು ಗಮನ ಸೆಳೆದರು. ಹೆಸರಾಂತ ಅರ್ಥಧಾರಿಗಳೊಂದಿಗೆ ಸಮಬಲರಾಗಿ ಅರ್ಥ ಹೇಳುತ್ತಿದ್ದುದು ಗಮನಾರ್ಹವಾಗಿತ್ತು. ಹಾವ ಭಾವ, ಪಾತ್ರ ಚಿತ್ರಣ, ಸ್ತ್ರೀಯ ಕಂಠ ಇವುಗಳಲ್ಲಿ ಇದು ವಿಷ್ಣು ಭಟ್ ಅವರನ್ನು ಮೀರಿಸುವರು ಸಿಗುವುದು ಕಷ್ಟ. ಅವರ ಒಂದು ಪಾತ್ರದ ಅನೇಕ ದೃಶ್ಯಗಳಲ್ಲಿ ಪ್ರೇಕ್ಷಕರು ರೋಮಾಂಚನಗೊಳ್ಳುತ್ತಿದ್ದರು. ನಾವೆಲ್ಲ ಕಾಲಾಧೀನರೇ ಹೊರತೂ ಕಾಲಾತೀತರಲ್ಲ. ಅವರನ್ನು ಕಳೆದುಕೊಂಡಿದ್ದರಿಂದ ನೋವು ಉಂಟಾಗಿದೆ. ಅವರ ಅಗಲಿಕೆ ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕೊಡಲಿ ಎಂದು ಪ್ರತಿದ್ಧ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ ಬಳಕೂರ ತಿಳಿಸಿದ್ದಾರೆ.